ಮಾಜಿ ಡಿಸಿಎಂ ಸುಖಬೀರ್ ಸಿಂಗ್ ಮೇಲೆ ಗುಂಡು ಹಾರಿಸಲು ಯತ್ನಿಸಿದ ನರೇನ್ ಸಿಂಗ್ ಚೌರಾ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಖಲಿಸ್ತಾನ್ ಲಿಬರೇಶನ್ ಫೋರ್ಸ್ ಜೊತೆಗೆ ಸಂಬಂಧ ಹೊಂದಿದ್ದಾನೆ ಎಂದು ತಿಳಿದು ಬಂದಿದೆ.
ಅಮೃತಸರ್, ಪಂಜಾಬ್: ಮಾಜಿ ಡಿಸಿಎಂ ಸುಖಬೀರ್ ಸಿಂಗ್ ಬಾದಲ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ ವ್ಯಕ್ತಿ ಕೊನೆಗೂ ಪತ್ತೆಯಾಗಿದ್ದು, ಆತನ ಹೆಸರು ನರೇನ್ ಸಿಂಗ್ ಚೌರಾ.
ಏಪ್ರಿಲ್ 4, 1956 ರಂದು ಡೇರಾ ಬಾಬಾ ನಾನಕ್ (ಗುರುದಾಸ್‌ಪುರ) ಬಳಿಯ ಚೌರಾ ಗ್ರಾಮದಲ್ಲಿ ಜನಿಸಿದ ನರೇನ್ ಚೌರಾ, ಖಲಿಸ್ತಾನ್ ಲಿಬರೇಶನ್ ಫೋರ್ಸ್ ಮತ್ತು ಅಕಾಲ್ ಫೆಡರೇಶನ್‌ನಂತಹ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಹಾಗೂ ಖೈದಿಗಳಿಗೆ ಬಟ್ಟೆ ಮತ್ತು ಇತರ ವಸ್ತುಗಳನ್ನು ನೀಡುವ ಮೂಲಕ ಬುರೈಲ್ ಜೈಲ್ ಬ್ರೇಕ್ ಪ್ರಕರಣದ ಮಾಸ್ಟರ್‌ಮೈಂಡ್‌ಗೆ ಸಹಾಯ ಮಾಡಿದ ಆರೋಪ ಈತನ ಮೇಲಿದೆ. 2004ರಲ್ಲಿ ನಾಲ್ವರು ಖಲಿಸ್ತಾನಿ ಭಯೋತ್ಪಾದಕರು 94 ಅಡಿ ಉದ್ದದ ಸುರಂಗ ಕೊರೆದು ಪರಾರಿಯಾಗಿದ್ದರು.
ಆದರೆ, ಈ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ನರೇನ್ ಸಿಂಗ್ ಚೌರಾ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿ ಸುದೀರ್ಘ ಅವಧಿ ಜೈಲಿನಲ್ಲಿದ್ದ ನಂತರ ಜಾಮೀನಿನ ಮೇಲೆ ಹೊರಗಿದ್ದರು. ಅಮೃತಸರ ಸೆಂಟ್ರಲ್ ಜೈಲಿನಲ್ಲಿ ಐದು ವರ್ಷ ಶಿಕ್ಷೆ ಅನುಭವಿಸಿದ್ದರು.
ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರನ್ನು ಹತ್ಯೆ ಮಾಡಿದ ಆರೋಪಿ ಜಗತಾರ್ ಸಿಂಗ್ ಹವಾರಾ, ಪರಮ್‌ಜಿತ್ ಸಿಂಗ್ ಭಯೋರಾ ಮತ್ತು ಜಗತಾರ್ ಸಿಂಗ್ ತಾರಾ ಸೇರಿದಂತೆ ಪ್ರಮುಖ ಭಯೋತ್ಪಾದಕರೊಂದಿಗೆ ಚೌರಾ ನಿಕಟ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತಿದೆ.
ನರೇನ್ ಸಿಂಗ್ ಚೌರಾ ವಿರುದ್ಧ 2010ರ ಮೇ 8ರಂದು ಅಮೃತಸರದ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ಕಾಯ್ದೆಯಡಿ ಸುಮಾರು ಹನ್ನೆರಡು ಪ್ರಕರಣಗಳು ದಾಖಲಾಗಿದ್ದವು. ಅಮೃತಸರ, ತರ್ನ್ ತರಣ್ ಮತ್ತು ರೋಪರ್ ಜಿಲ್ಲೆಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್‌ನಲ್ಲಿ ಭಯೋತ್ಪಾದನೆಯ ಆರಂಭಿಕ ಹಂತದಲ್ಲಿ ನರೇನ್ ಸಿಂಗ್ 1984 ರಲ್ಲಿ ಪಾಕಿಸ್ತಾನಕ್ಕೆ ಓಡಿಹೋಗಿದ್ದರು. ಅಲ್ಲಿ ಅವರು ಭಾರತಕ್ಕೆ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ದೊಡ್ಡ ಪ್ರಮಾಣದ ಕಳ್ಳಸಾಗಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಾಕಿಸ್ತಾನದಲ್ಲಿದ್ದಾಗ, ಗೆರಿಲ್ಲಾ ಯುದ್ಧ ಮತ್ತು ದೇಶದ್ರೋಹಿ ಸಾಹಿತ್ಯದ ಕುರಿತು ಪುಸ್ತಕವನ್ನು ಬರೆದಿದ್ದಾರೆ ಎಂದು ವರದಿಯಾಗಿದೆ.
Post a Comment