ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯ ವೇಳೆ ಕೇರಳ ಸಿಎಂ ಪಂಚತಾರಾ ಹೋಟೆಲ್ ಉದ್ಘಾಟನೆ ನೆರವೇರಿಸಿದ್ದನ್ನು ಕಾಂಗ್ರೆಸ್ ಟೀಕಿಸಿದೆ.
ಕೊಚ್ಚಿ (ಕೇರಳ) : ದೇಶದ ಆರ್ಥಿಕತೆಗೆ ಪುನರುಜ್ಜೀವನ ನೀಡಿದ, 10 ವರ್ಷ ಆಡಳಿತದ ಚುಕ್ಕಾಣಿ ಹಿಡಿದಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಇಡೀ ದೇಶವೇ ದುಃಖತಪ್ತವಾಗಿದೆ. ಇಂತಹ ಸಂತಾಪದ ವೇಳೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪಂಚತಾರಾ ಹೋಟೆಲ್ ಉದ್ಘಾಟಿಸಿ ಟೀಕೆಗೆ ಗುರಿಯಾಗಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ರಾಷ್ಟ್ರವು ಶೋಕಿಸುತ್ತಿರುವಾಗ ಕೇರಳದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದ ಅಧಿಕೃತ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಿದ್ದನ್ನು ಕಾಂಗ್ರೆಸ್ ಪಕ್ಷವು ಟೀಕಿಸಿದೆ.
ಮಾಜಿ ಪ್ರಧಾನಿ ಸಿಎಂ ಅಗೌರವ: ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಈ ನಡೆಯು ಮಾಜಿ ಪ್ರಧಾನಿಗೆ ತೋರಿದ ಅಗೌರವ ಮತ್ತು ಅನುಚಿತ ವರ್ತನೆ ಎಂದು ಕಿಡಿಕಾರಿದ್ದಾರೆ.
ಹತ್ತು ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ದಿಲ್ಲಿಯಲ್ಲಿ ನಡೆಯುತ್ತಿರುವಾಗ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾದ ಪಂಚತಾರಾ ಹೋಟೆಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಹಾಜರಾಗುವುದು ಮತ್ತು ಉದ್ಘಾಟಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇರಳದ ಮುಖ್ಯಮಂತ್ರಿ ಇಂತಹ ಕಾರ್ಯಕ್ರಮಕ್ಕೆ ಹಾಜರಾಗಬಾರದಿತ್ತು. ಮಾಜಿ ಪ್ರಧಾನಿ ನಿಧನದಿಂದಾಗಿ ಉದ್ಘಾಟನಾ ಕಾರ್ಯಕ್ರಮ ಮುಂದೂಡುವಂತೆ ವಿಮಾನ ನಿಲ್ದಾಣದ ಆಡಳಿತ ಮಂಡಳಿಗೆ ಮುಂಚೆಯೇ ಮನವಿ ಮಾಡಲಾಗಿದೆ. ಈ ಬಗ್ಗೆ ಸಿಎಂಗೆ ತಿಳಿಸುವಂತೆಯೂ ಸೂಚಿಸಲಾಗಿತ್ತು ಎಂದು ಸತೀಶನ್ ತಿಳಿಸಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಗಣ್ಯರು ಭಾಗಿ: ದೆಹಲಿಯ ನಿಗಮ್ ಬೋಧ್ ಘಾಟ್ನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಅಂತಿಮ ಸಂಸ್ಕಾರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಭೂತಾನ್, ಮಾರಿಷಸ್ ಸೇರಿದಂತೆ ವಿದೇಶಗಳ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಆರ್ಥಿಕ ತಜ್ಞನ ಅಗಲಿಕೆಗೆ ಕೇಂದ್ರ ಸರ್ಕಾರವು ದೇಶದಲ್ಲಿ 7 ದಿನ ಶೋಕಾಚರಣೆ ಘೋಷಿಸಿದೆ. ಎಲ್ಲ ಸಂಭ್ರಮಾಚರಣೆಗಳನ್ನು ಮುಂಡೂಡಲು ಸೂಚಿಸಿದೆ.
Post a Comment