ಇಂದಿನಿಂದ ಬೆಳಗಾವಿ ಅಧಿವೇಶನ: ದೋಸ್ತಿಗಳ ಒಗ್ಗಟ್ಟಿನ ಹೋರಾಟದ ತಂತ್ರ, ಆಡಳಿತ ಪಕ್ಷದಿಂದ ಬಲವಾದ ಪ್ರತಿತಂತ್ರ

 ಈ ಬಾರಿ ಅಧಿವೇಶನದಲ್ಲಿ ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿ ನಾಯಕರು ಕಾಂಗ್ರೆಸ್ ಸರ್ಕಾರದ​ ವಿರುದ್ಧ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಟೀಕಾಪ್ರಹಾರ ಮಾಡಲು ಸಿದ್ಧರಾಗಿದ್ದಾರೆ. ಇವರನ್ನು ಎದುರಿಸಲು ಆಡಳಿತ ಪಕ್ಷವೂ ಸಜ್ಜಾಗಿದೆ.



ಬೆಂಗಳೂರು: ಇಂದಿನಿಂದ ಡಿಸೆಂಬರ್​ 19ರ ವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ವೇದಿಕೆಯಾಗಲಿರುವ ಈ ಅಧಿವೇಶನಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ‌. ಪ್ರತಿಪಕ್ಷಗಳು ವಕ್ಫ್ ವಿವಾದ, ಮುಡಾ ಹಗರಣ, ಬಳ್ಳಾರಿ ಬಾಣಂತಿಯರ ಸಾವು, ಅಬಕಾರಿ ಅಕ್ರಮ ಆರೋಪದೊಂದಿಗೆ ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ಧವಾಗಿದ್ದರೆ, ಇತ್ತ ಆಡಳಿತಾರೂಢ ಕಾಂಗ್ರೆಸ್ ಕೌಂಟರ್ ಕೊಡಲು ತಯಾರಾಗಿದೆ.


ವಕ್ಫ್ ವಂಚನೆ ಪ್ರಕರಣವನ್ನು ಮುಂದಿಟ್ಟು ಬಿಜೆಪಿಯು ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬೀಳಲು ಸಿದ್ಧವಾಗಿದೆ. ವಕ್ಫ್ ನೋಟಿಸ್ ಹಾಗೂ ಪಹಣಿಯಲ್ಲಿ ವಕ್ಫ್ ಹೆಸರು ನೋಂದಣಿ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರಗಾರಿಕೆ ನಡೆಸಿದೆ. ಇದರೊಂದಿಗೆ ಸಚಿವ ಜಮೀರ್ ಅಹಮದ್ ರಾಜೀನಾಮೆಗೂ ಮೈತ್ರಿ ಕೂಟ ಒತ್ತಾಯಿಸಲು ಸಜ್ಜಾಗಿದೆ.


ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಗಳನ್ನು ಮುಂದಿಟ್ಟು ಸರ್ಕಾರದ ಮೇಲೆ ತೀವ್ರ ಟೀಕಾ ಪ್ರಹಾರ ನಡೆಸಲು ದೋಸ್ತಿಗಳು ಸಜ್ಜಾಗಿದ್ದಾರೆ. ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು, ಸರ್ಕಾರದ ವೈಫಲ್ಯ, ನಿರ್ಲಕ್ಷ್ಯದ ಮೂಲಕ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆ ಹಾಗೂ ಪ್ರಕರಣದ ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಲು ಪ್ರತಿಪಕ್ಷ ಮುಂದಾಗಿದೆ. ಉಳಿದಂತೆ ಅಬಕಾರಿ ಇಲಾಖೆಯಲ್ಲಿನ ವಸೂಲಿ ಆರೋಪ ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪಿಸಿ ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಲು ನಿರ್ಧರಿಸಿದೆ.

ಮುಡಾ ಸೈಟ್ ಗೋಲ್‌ಮಾಲ್ ಪ್ರಕರಣ, ಇ.ಡಿ. ಲೋಕಾಯಕ್ತಕ್ಕೆ ಬರೆದ ಪತ್ರ, ಹೊಸ ಮುಡಾ ಅಕ್ರಮಗಳು ಬಯಲಾಗುತ್ತಿರುವುದನ್ನು ಉಲ್ಲೇಖಿಸಿ ಸಿಎಂ ಹಾಗೂ ಸರ್ಕಾರದ ವಿರುದ್ಧ ಮುಗಿಬೀಳಲು ಪ್ಲಾನ್ ರೂಪಿಸಿದೆ‌. ಇವುಗಳೊಂದಿಗೆ ರೇಷನ್ ಕಾರ್ಡ್ ರದ್ದು, ಬ್ರ್ಯಾಂಡ್ ಬೆಂಗಳೂರು, ಅಭಿವೃದ್ಧಿ ಶೂನ್ಯ, ಲಾ‌ ಆ್ಯಂಡ್ ಆರ್ಡರ್, ಭ್ರಷ್ಟಾಚಾರ, ಅನುದಾನ, ಉತ್ತರ ಕರ್ನಾಟಕ ಕಡೆಗಣನೆ, ಅಭಿವೃದ್ಧಿ ಯೋಜನೆಗಳ ಕುಂಠಿತ, ಅನುದಾನ ಸ್ಥಗಿತ ಸೇರಿ ಇನ್ನೂ ಅನೇಕ ಅಸ್ತ್ರಗಳಿಂದ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ದೋಸ್ತಿಗಳು ಸಜ್ಜಾಗಿದ್ದಾರೆ. ಉಭಯ ಸದನಗಳಲ್ಲೂ ಒಗ್ಗಟ್ಟಿನ ಹೋರಾಟದ ಮೂಲಕ ಸರ್ಕಾರದ ಮೇಲೆ ಮುಗಿಬೀಳಲು ನಿರ್ಧರಿಸಿವೆ.

ಸರ್ಕಾರದಿಂದ ಬಲವಾದ ಪ್ರತಿತಂತ್ರ: ಇತ್ತ ಕಾಂಗ್ರೆಸ್ ಸರ್ಕಾರವೂ ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ, ಬಲವಾದ ಕೌಂಟರ್ ಕೊಡಲು ಸಿದ್ಧವಾಗಿದೆ. ದೋಸ್ತಿಗಳ ಟೀಕಾಸ್ತ್ರಗಳಿಗೆ ಪ್ರಬಲವಾಗಿ ಪ್ರತ್ಯಾಸ್ತ್ರವನ್ನು ಸಿದ್ಧಗೊಳಿಸಿದೆ. ಈಗಾಗಲೇ ಮೂರೂ ಕ್ಷೇತ್ರಗಳ ಉಪಸಮರದಲ್ಲಿ ಗೆದ್ದು ಬೀಗುತ್ತಿರುವ ಸರ್ಕಾರ ದೋಸ್ತಿ ಪಕ್ಷಗಳ ಜಂಟಿ ಸದನ‌ ಹೋರಾಟವನ್ನು ವಿಫಲಗೊಳಿಸಲು ತಯಾರಿ ನಡೆಸಿದೆ. ದೋಸ್ತಿಗಳ ವಾಗ್ದಾಳಿ, ಆರೋಪಕ್ಕೆ ಬಲವಾಗಿ ನಿಂತು ಪ್ರತ್ಯುತ್ತರ ನೀಡಲು ಸಚಿವರುಗಳಿಗೆ ಸೂಚನೆ ನೀಡಲಾಗಿದೆ. ಇತ್ತ ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ, ಒಡಕನ್ನೇ ಬಂಡವಾಳವಾಗಿಸಿ ಪ್ರತಿಪಕ್ಷದ ಕಾಲೆಳೆಯಲು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸಜ್ಜಾಗಿದೆ.


ಸರ್ಕಾರ ವಿಪಕ್ಷಗಳ ಹೋರಾಟಕ್ಕೆ ಕೌಂಟರ್ ಆಗಿ ಕೋವಿಡ್ ಮೇಲಿನ ಮೈಕೆಲ್ ಡಿ'ಕುನ್ಹಾ ವರದಿಯನ್ನು ಮುಂದಿಡಲಿದೆ. ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಮೇಲಿನ ಅವ್ಯವಹಾರ ಆರೋಪವನ್ನು ಪ್ರಸ್ತಾಪಿಸಿ ಬಿಜೆಪಿ ಭ್ರಷ್ಟಾಚಾರ ಆರೋಪಕ್ಕೆ ತಿರುಗೇಟು ನೀಡಲಿದೆ. ಇನ್ನು ವಕ್ಫ್ ವಿಚಾರವಾಗಿ ಬಿಜೆಪಿ ಸರ್ಕಾರದ ಅವಧಿಯ ಅತೀ ಹೆಚ್ಚು ನೋಟಿಸ್ ನೀಡಿರುವುದನ್ನೇ ಉಲ್ಲೇಖಿಸಿ ಪ್ರತಿಪಕ್ಷಗಳ ಬಾಯಿ ಮುಚ್ಚಿಸುವ ಯತ್ನ ಮಾಡಲಿದೆ. ಇದರ ಜೊತೆಗೆ ಯಡಿಯೂರಪ್ಪ ಹಾಗೂ ಬಿ. ವೈ. ವಿಜಯೇಂದ್ರ ಮೇಲಿನ ಬಿಡಿಎ ಹಗರಣ ಆರೋಪ, ಗಣಿ ಅಕ್ರಮ, ಕೇಂದ್ರದ ಅನುದಾನ ತಾರತಮ್ಯ, ಮುನಿರತ್ನ ಪ್ರಕರಣವನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳನ್ನು ಕಟ್ಟಿಹಾಕಲು ಸರ್ಕಾರವೂ ಸರ್ವ ಸಿದ್ಧತೆ ನಡೆಸಿದೆ. ಪ್ರತಿಪಕ್ಷಗಳು ಪ್ರಸ್ತಾಪಿಸುವ ಆರೋಪಗಳ ಬಗ್ಗೆ ಯಾರೆಲ್ಲ ಸಚಿವರು ಉತ್ತರಿಸಬೇಕು. ಅದಕ್ಕೆ ಯಾರೆಲ್ಲ ಶಾಸಕರು ಸಾಥ್ ನೀಡಬೇಕು ಎಂಬ ಹೊಣೆಗಾರಿಕೆಯನ್ನೂ ನಿಗದಿ ಮಾಡಲಾಗಿದೆ ಎಂದು ವರದಿಯಾಗಿದೆ.

ಹಲವು ಪ್ರಮುಖ ಬಿಲ್‌ಗಳ ಮಂಡನೆ: ಅಧಿವೇಶನದಲ್ಲಿ ಸುಮಾರು 15 ಮಸೂದೆಗಳು ಮಂಡನೆಯಾಗಲಿವೆ.

  • * ಮುಖ್ಯವಾಗಿ, ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ - 2024
  • * ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ-2024
  • * ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರಣ) (ತಿದ್ದುಪಡಿ) ವಿಧೇಯಕ
  • * ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ, ವಿಧೇಯಕ - 2024
  • * ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ - 2024
  • * ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ - 2024
  • * ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (2ನೇ ತಿದ್ದುಪಡಿ) - 2024
  • * ಕರ್ನಾಟಕ ಪ್ರವಾಸೋದ್ಯಮ ರೋಪ್‌ವೇಸ್ ವಿಧೇಯಕ - 2024
  • * ಗಣಿ ಆದಾಯ ಸಂಗ್ರಹಿಸುವ ಮೂರು ಖನಿಜ ಮತ್ತು ಕಲ್ಲು ಗಣಿಗಾರಿಕೆ ತಿದ್ದುಪಡಿ ವಿಧೇಯಕಗಳು
  • * ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಮಾನ್ಯತೆ ಉಳಿಸಲು ನಿರ್ದಿಷ್ಟ ಸಂಖ್ಯೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ದಾಖಲಾತಿ ಇರಬೇಕೆಂಬ ನಿಯಮ ಸಡಿಲಿಕೆ ವಿಧೇಯಕ
  • * ಠೇವಣಿದಾರರ ಹಿತರಕ್ಷಣೆ ತಿದ್ದುಪಡಿ ವಿಧೇಯಕ ಸೇರಿದಂತೆ ಇನ್ನೂ ಕೆಲ ವಿಧೇಯಕಗಳು ಅಧಿವೇಶನದಲ್ಲಿ ಮಂಡನೆಯಾಗಲಿವೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget