ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದರು. ಚರಣ್ ಸಿಂಗ್ ಅವರು ಬಡವರ ಮತ್ತು ರೈತರ ನಿಜವಾದ ಹಿತೈಷಿ ಎಂದು ಬಣ್ಣಿಸಿದರು.
ಚರಣ್ ಸಿಂಗ್ ಅವರ ಗೌರವಾರ್ಥ ಪ್ರತಿ ವರ್ಷ ಅವರ ಜನ್ಮ ದಿನವಾದ ಡಿಸೆಂಬರ್ 23 ಅನ್ನು 'ರಾಷ್ಟ್ರೀಯ ರೈತ ದಿನ'ವನ್ನಾಗಿ ಆಚರಿಸಲಾಗುತ್ತದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, 'ಚರಣ್ ಸಿಂಗ್ ಅವರ ಸಮರ್ಪಣೆ ಮತ್ತು ಸೇನಾ ಮನೋಭಾವ ಎಲ್ಲರಿಗೂ ಸ್ಫೂರ್ತಿಯಾಗಿದೆ. ರೈತರ ಕಲ್ಯಾಣಕ್ಕಾಗಿ ಅವರ ಕೊಡುಗೆ ಅಪಾರ' ಎಂದು ಹೇಳಿದರು.
ಇನ್ನು ರೈತ ದಿನ ಶುಭಾಶಯ ತಿಳಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, 'ಬಡವರು. ವಂಚಿತರು ಮತ್ತು ರೈತರ ಕಲ್ಯಾಣಕ್ಕಾಗಿ ಚರಣ್ ಸಿಂಗ್ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು' ಎಂದು ಹೇಳಿದರು.
ರೈತರ ಚಾಂಪಿಯನ್ ಚರಣ್ ಸಿಂಗ್
ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ನೂರ್ಪುರ್ ಗ್ರಾಮದಲ್ಲಿ ರೈತ ಕುಟುಂಬದ ನೇತ್ರಾ ಕೌರ್ ಮತ್ತು ಚೌಧರಿ ಮೀರ್ ಸಿಂಗ್ ದಂಪತಿಗೆ 1902ರ ಡಿಸೆಂಬರ್ 23ರಂದು ಚರಣ್ ಸಿಂಗ್ ಜನಿಸಿದರು.
ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದ ಅವರು, 1960ರ ದಶಕದಲ್ಲಿ ಕಾಂಗ್ರೆಸ್ ತೊರೆದರು. ಉತ್ತರ ಪ್ರದೇಶದಲ್ಲಿಯೇ ಅಲ್ಲದೆ ಇಡೀ ಉತ್ತರ ಭಾರತದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಜವಾಹರಲಾಲ್ ನೆಹರೂ ಅವರ ಸಮಾಜವಾದಿ ಆರ್ಥಿಕತೆಯನ್ನು ವಿರೋಧಿಸಿದ್ದ ಚರಣ್ ಸಿಂಗ್ ಅವರು, ರೈತರ ಮಾಲೀಕತ್ವದ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದರು.
ಸಾರ್ವಜನಿಕ ಜೀವನಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಮೋದಿ ಸರ್ಕಾರ ಈ ವರ್ಷ ಅವರಿಗೆ ಭಾರತ ರತ್ನ (ಮರಣೋತ್ತರ) ನೀಡಿ ಗೌರವಿಸಿತ್ತು.
ಅವರ ಮೊಮ್ಮಗ ಜಯಂತ್ ಸಿಂಗ್ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
Post a Comment