ದಕ್ಷಿಣ ಕೊರಿಯಾ ಅಧ್ಯಕ್ಷರು ಅಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಣೆ ಮಾಡಿದ್ದಾರೆ. ಹೀಗಾಗಿ ಅಲ್ಲಿನ ಸೇನೆ ಸಂಸತ್ ಭವನವನ್ನು ಪ್ರವೇಶಿಸಿ, ನಿಯಂತ್ರಣಕ್ಕೆ ಪಡೆದುಕೊಂಡಿದೆ.
ಸಿಯೋಲ್, ದಕ್ಷಿಣ ಕೊರಿಯಾ: ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ದಕ್ಷಿಣ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ಸೇನಾಡಳಿತವನ್ನು ಜಾರಿ ಮಾಡಿದ್ದಾರೆ. ಅಧ್ಯಕ್ಷರ ಈ ಘೋಷಣೆ ಬಳಿಕ ಮಾರ್ಷಲ್ ಲಾ ಪಡೆಗಳು ರಾಷ್ಟ್ರೀಯ ಅಸೆಂಬ್ಲಿ ಆವರಣ ಪ್ರವೇಶಿಸಿ ಸಂಸತ್ತಿನ ಮುಖ್ಯ ಕಟ್ಟಡವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ಈ ವೇಳೆ ಸಂಸತ್ತಿನ ಕಾವಲುಗಾರರು ಮತ್ತು ಪೊಲೀಸರೊಂದಿಗೆ ಘರ್ಷಣೆ ನಡೆದಿದೆ. ನಾಗರಿಕರು ಮತ್ತು ವರದಿಗಾರರು ಸೇರಿದಂತೆ ಹೆಚ್ಚಿನ ಜನರು ಕಾಂಪೌಂಡ್‌ನ ಹೊರಗೆ ಜಮಾಯಿಸಿದ್ದರೆ, ಅವರ ಪ್ರವೇಶವನ್ನು ತಡೆಯಲು ಪಡೆಗಳು ಹಾಗೂ ಸಾರ್ವಜನಿಕರೊಂದಿಗೆ ಸಂಘರ್ಷ ನಡೆಯುತ್ತಿರುವುದು ಕಂಡು ಬಂದಿದೆ.
ಸಂಸತ್ ಕಟ್ಟಡದ ಆವರಣ ಪ್ರವೇಶಿಸಿದ ಸೈನಿಕರು: ಮೂರು ಹೆಲಿಕಾಪ್ಟರ್‌ಗಳು ಸೇನಾ ಸಿಬ್ಬಂದಿಯನ್ನು ಸಂಸತ್ನ ಆವರಣದೊಳಗೆ ಇಳಿಸುವ ಕೆಲಸ ಮಾಡಿವೆ. ಮಂಗಳವಾರ ಶಸ್ತ್ರಸಜ್ಜಿತ ಸೈನಿಕರು ಸಂಸತ್ನ ಆವರಣದೊಳಗೆ ಇಳಿಯುವುದನ್ನು ನೋಡಿದ್ದಾರೆಂದು ವರದಿಗಳಾಗಿವೆ. ಐಡಿ ಪರಿಶೀಲನೆಯ ನಂತರ ಶಾಸಕರು, ಸಂಸದೀಯ ಸಿಬ್ಬಂದಿ ಮತ್ತು ಮಾನ್ಯತೆ ಪಡೆದ ವರದಿಗಾರರಿಗೆ ಮಾತ್ರ ಕಾಂಪೌಂಡ್ ಒಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.
ಸೇನಾಪಡೆಗಳು ಸಂಸತ್ತಿನ ಮುಖ್ಯ ಕಟ್ಟಡದ ಹೊರಗೆ ಬ್ಯಾರಿಕೇಡ್‌ಗಳನ್ನು ಸ್ಥಾಪಿಸುತ್ತಿವೆ ಎಂದು ಯೋನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಏತನ್ಮಧ್ಯೆ ಹಣಕಾಸು ಸಚಿವ ಚೋಯ್ ಸಾಂಗ್- ಮೋಕ್ ಉನ್ನತ ಆರ್ಥಿಕ ಮತ್ತು ಹಣಕಾಸು ಅಧಿಕಾರಿಗಳೊಂದಿಗೆ ಮಂಗಳವಾರ ತುರ್ತು ಸಭೆ ನಡೆಸಿದ್ದಾರೆ.
ಮಹತ್ವದ ಸಭೆ ನಡೆಸಿದ ಉಪಪ್ರಧಾನಿ: ಆರ್ಥಿಕ ವ್ಯವಹಾರಗಳ ಉಪಪ್ರಧಾನಿಯಾಗಿರುವ ಚೋಯ್ ಅವರು ಬ್ಯಾಂಕ್ ಆಫ್ ಕೊರಿಯಾ, ಹಣಕಾಸು ಸೇವಾ ಆಯೋಗ ಮತ್ತು ಹಣಕಾಸು ಮೇಲ್ವಿಚಾರಣಾ ಸೇವೆಯ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಆರ್ಥಿಕತೆ, ಉದ್ಯಮದ ಮೇಲ್ವಿಚಾರಣೆ ಮಾಡುತ್ತಿರುವ ಆರ್ಥಿಕ ಸಚಿವಾಲಯ: ಸೇನಾಡಳಿತದ ಘೋಷಣೆಯ ಬಳಿಕ ಆರ್ಥಿಕ ಮತ್ತು ಕೈಗಾರಿಕಾ ಪರಿಸ್ಥಿತಿ ಮತ್ತು ಇಂಧನ ಪೂರೈಕೆಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಲು ಮತ್ತು ಚರ್ಚಿಸಲು ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆಯನ್ನು ನಡೆಸಲಾಗಿದೆ ಎಂದು ಉದ್ಯಮ ಸಚಿವಾಲಯ ತಿಳಿಸಿದೆ.
ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರು ದೇಶ ವಿರೋಧಿ ಚಟುವಟಿಕೆಗಳು ಮತ್ತು ದಂಗೆಗೆ ಸಂಚು ರೂಪಿಸಲಾಗುತ್ತಿದೆ ಎಂಬ ಕಾರಣ ನೀಡಿ ರಾಷ್ಟ್ರದ ರಕ್ಷಣೆಗೆ ಸೇನಾಡಳಿತ ಜಾರಿಗೆ ತರಲಾಗುತ್ತಿದೆ ಎಂದು ಘೋಷಣೆ ಮಾಡಿದ್ದಾರೆ.
Post a Comment