ಮಂಗಳೂರು:ಆಧುನಿಕ ಯುಗದಲ್ಲಿ ನಡೆದಿರುವ ಡಿಜಿಟಲ್ ಕ್ರಾಂತಿಯ ಮಾಧ್ಯಮ ಯುಗದಲ್ಲಿ ಪತ್ರಿಕೋದ್ಯಮದ ಉಳಿವಿನ ಬಗ್ಗೆ ಹಲವು ಸಂಪಾದಕರಿಗೆ ಭಯ ಶುರು ಆಗಿದೆ. ಆದರೆ ಡಿಜಿಟಲ್ ಆಗಿ ಧೈರ್ಯದಿಂದ ಮುನ್ನುಗ್ಗುವ ಅವಕಾಶವನ್ನು ಡಿಜಿಟಲ್ ಕ್ರಾಂತಿ ಮಾಧ್ಯಮಗಳಿಗೆ ನೀಡಿದೆ ಎಂದು ಹಿರಿಯ ಪತ್ರಕರ್ತರಾದ ಶಿವಸುಬ್ರಹ್ಮಣ್ಯ ಕೆ. ಹೇಳಿದ್ದಾರೆ.
ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 5ನೇ జిಲ್ಲಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪತ್ರಿಕೋದ್ಯಮದ ತಮ್ಮ ಅನುಭವಗಳನ್ನು ಬಿಚ್ಚಿಟ್ಟ ಅವರು ಕಂಪೆನಿ ಕಲ್ಚರ್‌ಗೆ ಒಗ್ಗಿಕೊಳ್ಳಲು ಆಗದ ಕಾರಣ ಪತ್ರಿಕೋದ್ಯಮದಿಂದ ನಿರ್ಗಮಿಸಬೇಕಾಯುತು ಎಂದರು.ಪತ್ರಿಕಾಲಯದಲ್ಲಿ ಇರುವ ಕೆಲವೊಂದು ಕೆಟ್ಟ ನಡವಳಿಕೆಗಳು ಸುಸಂಸ್ಕೃತ ಪತ್ರಕರ್ತರನ್ನು ದೂರ ಮಾಡುವ ಅಪಾಯ ಇದೆ ಎಂದು ಹೇಳಿದರು.
ಪತ್ರಿಕೋದ್ಯಮ ಪ್ರವೇಶ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬ ಯುವಪತ್ರಕರ್ತರ ಮುಂದೆ ಅದ್ಭುತ ಲೋಕ ತೆರೆದುಕೊಳ್ಳುತ್ತದೆ. ಹೊರಗಡೆ ಚೆನ್ನಾಗಿ ಕಂಡರೂ ಹಲವೆಡೆ ಒಳಗಿನ ವಾತಾವರಣ ಕಲುಷಿತವಾಗಿದೆ. ಪತ್ರಕರ್ತರಲ್ಲಿ ಗುಂಪುಗಾರಿಕೆ, ಹಣದ ಹಪಹಪಿ ಹೆಚ್ಚಾಗಿದೆ. ಪತ್ರಕರ್ತರನ್ನು ವ್ಯವಸ್ಥಿತವಾಗಿ ಮುಗಿಸುವ ಷಡ್ಯಂತ್ರವೂ ನಡೆಯುತಿದೆ. ಕನ್ನಡದ ಪತ್ರಿಕೋದ್ಯಮದ ಅವನತಿಗೆ ಈ ರೀತಿಯ ಬೆಳವಣಿಗೆ ಕಾರಣವಾಗಬಹುದು ಎಂದು ಹೇಳಿದರು. ಆದರೆ ಕ್ರಿಯಾಶೀಲವಾಗಿರುವ ಯುವ ಪತ್ರಕರ್ತರಿಗೆ ಸಾಕಷ್ಟು ಅವಕಾಶ ಇದೆ. ಮೊದಲು ನಿಮ್ಮ ಗುರಿಯನ್ನು ನಿಗದಿಪಡಿಸಿ, ಉದ್ಯೋಗದಲ್ಲಿ
ಶಿಸ್ತು, ಬದ್ಧತೆ, ಅರ್ಪಣಾ ಮನೋಭಾವದಿಂದ ಕೆಲಸ ಮಾಡಿ, ಪ್ರಾದೇಶಿಕ ಭಾವನೆ, ಗುಂಪುಗಾರಿಕೆ, ಜಾತೀಯ ಮನೋಭಾವ ಬೇಡ. ಪತ್ರಿಕಾಲಯದಲ್ಲಿ ನಿಮಗೆ ಮಾರ್ಗದರ್ಶನ ಮಾಡುವವರ ಗುಂಪಿಗೆ ಸೇರಿಕೊಳ್ಳಿ ಎಂದು ಕರೆ ನೀಡಿದರು. ವಿಶ್ವಾಸಾರ್ಹತೆ ಮುಖ್ಯ ಎಂದ ಅವರು ವಿಶ್ವಾಸಾರ್ಹತೆ ಇಲ್ಲದಿದ್ದರೆ ಯಾವುದೇ ಮಾಧ್ಯಮ ಉಳಿಯಲು ಸಾಧ್ಯವಿಲ್ಲ ಎಂದರು.
ಚಿಕ್ಕ ವಯಸ್ಸಿನಲ್ಲಿ ಪತ್ರಿಕೆಯನ್ನು ಓದುವುದರಿಂದ ಪತ್ರಿಕೆ ಓದುವ ಸುಖ ಸಿಗಲು, ಆಸಕ್ತಿ ಹೆಚ್ಚಲು ಸಾಧ್ಯ ಎಂದರು. ಒಂದು ಸರಕಾರ ಮಾಡುವ ಕೆಲಸವನ್ನು ಕಾರ್ಯನಿರತ ಪತ್ರಕರ್ತರ ಸಂಘ ಮಾಡುತಿದೆ ಎಂದು ಶ್ಲಾಘಿಸಿದ ಅವರು ಶಿವಾನಂದ ತಗಡೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಳಿಕ ಸಂಘಕ್ಕೆ ಹೊಸ ಇಮೇಜ್ ತಂದರು. ಜಿಲ್ಲಾ ಸಂಘಗಳು ಕೂಡ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತಿವೆ. ಪತ್ರಕರ್ತರ ಮುಂದಿನ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಅವರು ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಶಿವಸುಬ್ರಹ್ಮಣ್ಯ ಕೆ.ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
Post a Comment