ನಾಳೆ ಕೊಡಗು ಬಂದ್‌, ಜಿಲ್ಲೆಯಾಧ್ಯಂತ ವ್ಯಕ್ತವಾಗುತ್ತಿರುವ ಮಿಶ್ರ ಅಭಿಪ್ರಾಯ : ಸರ್ಕಾರಿ ಕಛೇರಿ, ಶಾಲಾಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಣೆ



ವಿರಾಜಪೇಟೆ, ಡಿ.11: ದೇಶ ದ್ರೋಹಿ ಕೆ.ಆರ್‌. ವಿದ್ಯಾಧರನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ತಕ್ಷಣ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಎಂದು ಆಗ್ರಹಿಸಿ ಕೊಡಗಿನ ಹಲವು ಸಂಘ ಸಂಸ್ಥೆಗಳು ನಾಳೆ 12/12/24ರಂದು ಬೆಳಿಗ್ಗೆ 06ರಿಂದ ಮದ್ಯಾಹ್ನ 12 ಘಂಟೆಯವರೆಗೆ ಕೊಡಗು ಜಿಲ್ಲೆಯ ಬಂದ್‌ಗೆ ಕರೆ ಕೊಟ್ಟಿದೆ. ನಾಳಿನ ಕೊಡಗು ಬಂದ್‌ಗೆ ಜಿಲ್ಲೆಯಾಧ್ಯಂತ ಮಿಶ್ರ ಅಭಿಪ್ರಾಯ ಕೇಳಿಬಂದಿದ್ದು, ಒಂದು ಭಾಗಕ್ಕೆ ಸೀಮಿತ ಬಂದ್‌ ಎಂಬ ಅಭೀಪ್ರಾಯವೂ ಕೇಳಿಬರುತ್ತಿದೆ.


ಅಖಿಲ ಕೊಡವ ಸಮಾಜ, ಪೊನ್ನಂಪೇಟೆ, ಅಮ್ಮತ್ತಿ, ವಿರಾಜಪೇಟೆ, ಬೆಂಗಳೂರು, ತಾವಳಗೇರಿ, ನಾಪೋಕ್ಲು, ಬೆಪ್ಪುನಾಡ್‌, ಕೊಡವ ಸಮಾಜಗಳು, ಕೊಡಗು ಜಿಲ್ಲಾ ರೋಮನ್‌ ಕ್ಯಾತೋಲಿಕ್‌ ಅಸೋಸಿಯೇಷನ್‌, CNC, ವ್ಯಾಲಿಡ್ಯೂ ಕಲ್ಚರಲ್‌ ಅಸೋಸಿಯೇಷನ್‌, ಕೊಡವ ಪೊಮ್ಮಕ್ಕಡ ಕೂಟ, ಕಾವೇರಿ ಪೊಮ್ಮಕ್ಕಡ ಕೂಟ, ಕೊಡಗು ವೆಲ್ಫೇರ್‌ ಅಸೋಸಿಯೇಷನ್‌, ಕೊಡವ ಕೂಟಾಳಿ, ಪಿಪಿಪಿಕೆ, ಪೊಂಬೊಳ್ಚ, ರೂಟ್ಸ್‌ ಆಫ್‌ ಕೊಡಗು, ಕೊಡಗು ರಕ್ಷಣಾವೇದಿಕೆ, ಕೊಡಗು ಹೋಟೇಲ್‌ ರೆಸಾರ್ಟ್‌ ಅಸೋಸಿಯೇಷನ್‌, ಜಿಲ್ಲಾ ಚೇಂಬರ್‌ ಆಫ್‌ ಕಾಮರ್ಸ್‌, ಮಿಷನ್‌ ಮೋದಿ ಟ್ರಸ್ಟ್‌, ಕೊಡವಾಮೆರ ಕೊಂಡಾಟ, ತಿರಿಬೊಳ್ಚ, ಕೊಡಗು ಮುಸ್ಲೀಮ್‌ ಅಸೋಸಿಯೇಷನ್‌, ಕೇಸರಿ ಯೂತ್‌ ಮೂಮೆಂಟ್‌, ಕೊಡಗು ಖಾಸಗೀ ಬಸ್‌ ಕಾರ್ಮಿಕರ ಸಂಘ, ಆರ್ಜಿ ಗ್ರಾಮಸ್ಥರು, ಕದನೂರು ಗ್ರಾಮಸ್ಥರು, ಗೋಣೀಕೊಪ್ಪ ಚಿನ್ನ ಬೆಳ್ಳಿ ವರ್ತಕರ ಸಂಘ, ಟಿ.ಶೆಟ್ಟಿಗೇರಿ ಮಾಜೀ ಸೈನಿಕರ ಸಂಘ, ಕನೆಕ್ಟಿಂಗ್‌ ಕೊಡವಾಸ್‌, ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದು, ಬಾರತೀಯ ಜನತಾ ಪಕ್ಷವೂ ತನ್ನ ಸಂಪೂರ್ಣ ಬೆಂಬಲ ನೀಡಿದರೆ, ಜಿಲ್ಲಾ ಕಾಂಗ್ರೆಸ್‌ ಕೂಡ ತನ್ನ ಬಾಹ್ಯ ಬೆಂಬಲ ಇದೆ ಎಂದಿದೆ. 


ಇನ್ನೂ ಯಾವುದೇ ಬಂದ್‌ನಲ್ಲಿ ನಿರ್ಣಾಯಕ ಪಾತ್ರವಾಗುವ ಚೇಂಬರ್‌ ಆಫ್‌ ಕಾಮರ್ಸ್‌ ಮತ್ತು ವಾಹನ ಚಾಲಕರಲ್ಲಿ ಸಾಕಷ್ಟು ಗೊಂದಲಮಯ ಅಭಿಪ್ರಾಯ ಕೇಳಿ ಬರುತಿದ್ದು, ಮಡಿಕೇರಿ, ನಾಪೋಕ್ಲು, ಗೋಣಿಕೊಪ್ಪ ಮತ್ತಿತರ ಸ್ಥಾನೀಯ ಸಮಿತಿಗಳು ತಮ್ಮ ಬೆಂಬಲ ಸೂಚಿಸಿದರೆ, ಸೋಮವಾರಪೇಟೆ ಮತ್ತು ಕುಶಾಲನಗರ ಚೇಂಬರ್‌ ಆಫ್‌ ಕಾಮರ್ಸ್‌ ಎಂದಿನಂತೆ ಅಂಗಡಿ ಮುಂಗಟ್ಟುಗಳನ್ನು ತೆರೆಯುತ್ತೇವೆ ಎಂದಿದ್ದಾರೆ.


ಈ ಕುರಿತು ಪ್ರತಿಕ್ರಿಯೆ ನೀಡಿದ ಕುಶಾಲನಗರ ವರ್ತಕರ ಸಂಘದ ಅಧ್ಯಕ್ಷ ನಾಗೇಶ್‌ ಅವರು, ಯಾವುದೇ ಒಂದು ಹೋರಾಟದ ರೂಪುರೇಶೆ ತಯಾರಿಸುವ ಮೊದಲು ಒಂದು ಪೂರ್ವಭಾವಿ ಸಭೆ ಕರೆಯಬೇಕು, ವರ್ತಕರ ಸಾವಿರ ಸಮಸ್ಯೆಗಳಿರುತ್ತವೆ, ಏಕಾಏಕಿ ಬಂದ್‌ ಎಂದು ಬಿಟ್ಟರೆ ಹೇಗೆ ಸಹಕರಿಸಲು ಸಾದ್ಯ, ಸೇನಾನಿಗಳ ಬಗ್ಗೆ ನಮಗೂ ಅಭಿಮಾನವಿದ್ದು, ಯಾರು ಬಂದ್‌ ಕರೆ ಮಾಡಿದ್ದಾರೆ ಯಾವ ಸಂಘಟನೆ ಎಂಬ ಅರಿವೂ ನಮಗಿಲ್ಲ ಕನಿಷ್ಟ ನಮ್ಮನ್ನು ಸೌಜನ್ಯಕ್ಕಾದರೂ ಮಾತನಾಡಿಸಲಿಲ್ಲ. ಆರೋಪಿ ವಿದ್ಯಾಧರನ ವಿರುದ್ದ ನಮಗೂ ಕೋಪವಿದೆ, ಕಾನೂನು ಅದರ ಕೆಲಸವನ್ನೂ ಮಾಡುತ್ತಿದೆ. ಆದರೆ ಬಂದ್‌ ಒಂದೇ ಎಲ್ಲಕೂ ಪರಿಹಾರ ಅಲ್ಲ, ಆತನನ್ನ ಹೀರೋ ಮಾಡಲು ನಮ್ಮ ಹೊಟ್ಟೆಯಮೇಲೆ ಹೊಡೆಯಲಾಗುತ್ತದೆ ಆದ್ದರಿಂದ ಕುಶಾಲನಗರದ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಲಿದೆ ಎಂದಿದ್ದಾರೆ. ಇನ್ನು ಸೋಮವಾರಪೇಟೆ ಸ್ಥಾನೀಯ ಸಮಿತಿ ಆಧ್ಯಕ್ಷ ಧನುಕುಮಾರ್‌ ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತ ಪಡಿಸಿದ್ದು, ನಮ್ಮ ಅಭಿಪ್ರಾಯ ಕೇಳಿದ್ದರೆ, ನಾಳೆ ಇಡೀ ದಿನ ಬಂದ್‌ ಮಾಡುವ ಸಲಹೆ ನೀಡುತಿದ್ದೇವು ಅಥವಾ ಮಧ್ಯಾಹ್ನ ಸಮಯದಲ್ಲಿ ಒಂದೆರಡು ಘಂಟೆ ಬಂದ್‌ ಮಾಡಬಹುದಿತ್ತು, ಬೆಳಿಗ್ಗೆಯಿಂದ ಮದ್ಯಾಹ್ನದವರೆಗೆ ಬಂದ್‌ ಮಾಡಿದರೆ ವರ್ತಕರಿಗೆ ಭಾರೀ ನಷ್ಟವಾಗಲಿದ್ದು, ಸ್ಥಳಿಯ ವರ್ತಕರ ಹಿತ ದೃಷ್ಟಿಯಿಂದ, ಘಟನೆಯನ್ನು ಖಂಡಿಸಿ ಎಂದಿನಂತೆ ವ್ಯಾಪಾರ ವ್ಯವಹಾರ ನಡೆಸಲಿದ್ದೇವೆ ಎಂದಿದ್ದಾರೆ. ಈ ಭಾಗದ ಆಟೋ ಮತ್ತು ವಾಹನ ಚಾಲಕರದ್ದೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ.


ಇನ್ನು ಖಾಸಗೀ ಶಾಲಾ ಒಕ್ಕೂಟದ ಅಧ್ಯಕ್ಷರಾದ ಝರುಗಣಪತಿ ಅವರು ಕೂಡ ಈ ಘಟನೆಯನ್ನು ನಾವೂ ಖಂಡಿಸುತ್ತೇವೆ ಆದರೆ ಬಂದ್‌ ಕರೆ ಕೊಟ್ಟವರು, ಸೌಜನ್ಯಕ್ಕಾದರೂ ನಮ್ಮ ಅಭಿಪ್ರಾಯ ಕೇಳಲಿಲ್ಲ, ಈಗಾಗಲೇ ಸಾಕಷ್ಟು ರಜೆಗಳು ಬಂದಿರೋದರಿಂದ ತರಗತಿ ಪಾಠಗಳು ಹಿಂದುಳಿದಿವೆ. ಹಾಗಾಗಿ ನಾಳೆ ನಾವು ಎಲ್ಲಾ ಶಾಲೆಗಳಲ್ಲಿಯೂ ಖಂಡನಾ ನಿರ್ಣಯ ಮಾಡಿ, ಎಂದಿನಂತೆ ಶಾಲಾ ಪಾಠ ನಡೆಸಲಿದ್ದೇವೆ ಎಂದರು.


ಖಾಸಗೀ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್‌ಜೋಯಪ್ಪ ಅವರು ಮಾತನಾಡಿ, ಬಂದ್‌ ಕರೆ ಕೊಡುವ ಮುನ್ನ ಸಾರ್ವಜನಿಕ ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆಯಬೇಕಿತ್ತು, ಆದರೆ ಇಲ್ಲಿ ಏಕಾ ಏಕಿ ತೀರ್ಮಾನ ಕೈಗೊಂಡು, ನಂತರ ಬೆಂಬಲ ಕೇಳಲಾಗುತ್ತಿದೆ, ನಾವು ನಾಳೆ ಪ್ರಯಾಣಿಕರ ಕೊರತೆ ಆಗಬಹುದಾದ ಸಂಭವದಿಂದ ಬಸ್‌ ಓಡಿಸದಿರಲು ನಿರ್ಧರಿಸಿದ್ದೇವೆ. ಆದರೆ ಬಂದ್‌ಗೆ ಪರ ಅಥವಾ ವಿರೋದ ಯಾವುದೇ ನಿಲುವು ನಮ್ಮದಿಲ್ಲ ಎಂದಿದ್ದಾರೆ.


ಆರೋಪಿ ಈಗಾಗಲೇ ಕಾನೂನು ಕುಣಿಕೆಯಲ್ಲಿದ್ದು, ಶಿಕ್ಷೆ ಆಗುತ್ತದೆ ಎಂಬ ನಂಬಿಕೆ ಇದೆ, ಆದರೆ ಮತ್ತೆ ಕೆಲವರು ಬಂದ್‌ ಮಾಡುವ ಮೂಲಕ ಬೇರೆಯದೇ ಉದ್ದೇಶ ಹೊರಹಾಕುತಿದ್ದಾರೆ, ಹಾಗಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟ ನಾಮ್ಮ ಬೆಂಬಲ ಎಲ್ಲ ಎಂದಿದೆ.


ಇನ್ನೂ ಸರ್ಕಾರಿ ಸಾರಿಗೆ ಬಸ್‌ಗಳು ಎಂದಿನಂತೆ ಕಾರ್ಯಾಚರಣೆ ಮಾಡಲಿದ್ದು, ವಿರೋಧ ವ್ಯಕ್ತವಾದರೆ ಕಾನೂನಿ ಮೊರೆ ಹೋಗಲಾಗವುದು ಎಂದಿದ್ದಾರೆ. ಹಾಗೇ ಸರ್ಕಾರಿ ಕಛೇರಿಗಳು ಮತ್ತು ಶಾಲಾ ಕಾಲೇಜುಗಳು ಎಂದಿನಂತೆ ನಡೆಯುವ ಮಾಹಿತಿ ಲಭ್ಯವಾಗಿದೆ.


ನಾಳಿನ ಬಂದೋ ಬಸ್ತ್‌ನ ಕುರಿತು ಮಾಹಿತಿ ನೀಡಿದ ಹಿರಿಯ ಪೊಲೀಸ್‌ ಅಧಿಕಾರಿಗಳು, ಸಂಘಟಕರು ಶಾಂತಿಯುತ ಬಂದ್‌ ನಡೆಸುವುದಾಗಿ, ಮನವಿ ಪತ್ರ ನೀಡಿದ್ದು, ಯಾವುದೇ ಹೆಚ್ಚುವರಿ ಪೊಲೀಸ್‌ ತುಕಡಿಗಳ ಅಗತ್ಯ ಕಂಡುಬಂದಿರುವುದಿಲ್ಲ ಆದ್ದರಿಂದ ಜಿಲ್ಲಾ ಪೊಲೀಸರೇ ಬಂದೋಬಸ್ತ್‌ ನೋಡಿಕೊಳ್ಳಲಿದ್ದು, ಸುಪ್ರಿಂ ಕೋರ್ಟ್‌ ಆದೇಶದಂತೆ ಯಾರನ್ನೂ ಬಲವಂತ ಬಂದ್‌ ಮಾಡಿಸುವುದಾಗಲಿ, ಕಾನೂನಿಗೆ ವಿರೋಧ ನಡೆಗಳಾಗಲಿ ಕಂಡುಬಂದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. 


ಒಟ್ಟಾರೆಯಾಗಿ ನಾಳಿನ ಕೊಡಗು ಬಂದ್‌, ಪರಸ್ಪರ ಹೊಂದಾಣಿಕೆ, ಮಾಹಿತಿ, ಮತ್ತು ಸೂಕ್ತ ನಾಯಕತ್ವದ ತೀರ್ಮಾನದ ಕೊರತೆ ಕಂಡುಬರುತಿದ್ದು, ಬಹುಪಾಲು ಸಂಘ ಸಂಸ್ಥೆಗಳು ಬಂದ್‌ಗೆ ಬಾಹ್ಯ ಬೆಂಬಲ ಸೂಚಿಸಿ, ತಟಸ್ಥವಾಗಿ ಉಳಿಯುವ ತೀರ್ಮಾನ ಕೈಗೊಂಡಿದ್ದು, ದಕ್ಷಿಣ ಕೊಡಗಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾದರೆ ಉತ್ತರ ಕೊಡಗಿನಲ್ಲಿ ಬಹುಪಾಲು ಘಟನೆಯನ್ನು ಖಂಡಿಸಿ, ಎಂದಿನಂತೆ ಚಟುವಟಿಕೆ ನಡೆಸುವ ಅಭಿಪ್ರಾಯ ಕೇಳಿಬರುತ್ತಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget