ಮುಸ್ಲಿಮರು ನಿರ್ಮಿಸಿರುವ ಕೆಂಪು ಕೋಟೆ, ತಾಜ್ ಮಹಲ್ ಕೆಡವುತ್ತೀರಾ: ಖರ್ಗೆ ಪ್ರಶ್ನೆ

 


ನವದೆಹಲಿ: 'ಮುಸ್ಲಿಮರು ನಿರ್ಮಿಸಿರುವ ಕೆಂಪು ಕೋಟೆ, ತಾಜ್ ಮಹಲ್ ಅನ್ನು ಹಿಂದುತ್ವ ಸಂಘಟನೆಗಳು ತಮ್ಮ ಗುರಿಯಾಗಿಸುವುದೇ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಚಂದೌಸಿಯಲ್ಲಿನ ಶಾಹಿ ಜಾಮಾ ಮಸೀದಿ ಮತ್ತು ಅಜೇರ್‌ದಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿತ್ತಿ ದರ್ಗಾಗೆ ಸಂಬಂಧಿಸಿದಂತೆ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.


1991ರ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಗೆ ತನ್ನ 'ದೃಢ ಬದ್ಧತೆ'ಯನ್ನು ಪುನರುಚ್ಚರಿಸಿದ್ದ ಕಾಂಗ್ರೆಸ್, ಬಿಜೆಪಿಯು ಈ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿತ್ತು.



ಭಾನುವಾರ ಆಯೋಜಿಸಿದ್ದ 'ಸಂವಿಧಾನ ಉಳಿಸಿ' ರ್ಯಾಲಿಯಲ್ಲಿ ಮಾತನಾಡಿದ ಖರ್ಗೆ, 'ಮುಸ್ಲಿಮರು ಕಟ್ಟಿದ ಕೆಂಪು ಕೋಟೆಯನ್ನು ಈಗ ಕೆಡವುತ್ತೀರಾ? ಕುತುಬ್ ಮಿನಾ‌ರ್ ಮತ್ತು ತಾಜ್‌ಮಹಲ್‌ಅನ್ನು ಕೆಡವುತ್ತೀರಾ? ಹೈದರಾಬಾದ್‌ಗೆ ಹೋಗಿ ಚಾರ್‌ಮಿನಾರ್‌ಅನ್ನು ನೆಲಸಮಗೊಳಿಸುವಿರಾ? ಗೋಲ್ ಗುಂಬಜ್‌ ಅನ್ನು ಕೆಡವಲು ವಿಜಯಪುರಕ್ಕೆ ಹೋಗುತ್ತೀರಾ? ಎಂದು ಕೇಳಿದರು.

'ರಾಮ ಮಂದಿರ ನಿರ್ಮಿಸುವುದೇ ನಮ್ಮ ಗುರಿಯಾಗಿದೆ. ಎಲ್ಲ ಮಸೀದಿಗಳಲ್ಲಿ ಶಿವಲಿಂಗವನ್ನು ಹುಡುಕುವ ಅಗತ್ಯವಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ 2022ರ ಜೂನ್‌ನಲ್ಲಿ ಹೇಳಿದ್ದರು. ಆದರೆ ಅವರ ಬೆಂಬಲಿಗರು ಇನ್ನೂ ಮಸೀದಿಗಳಲ್ಲಿ ಶಿವಲಿಂಗ ಹುಡುಕುತ್ತಿದ್ದಾರೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಾನೂನು ಹೇಳುತ್ತಿದೆಯಾದರೂ, ಇವರು ವಿವಾದ ಸೃಷ್ಟಿಸುತ್ತಿರುವುದು ಏಕೆ' ಎಂದು ಪ್ರಶ್ನಿಸಿದ್ದಾರೆ.


ನಿವೃತ್ತ ಸಿಜೆಐ ಡಿ.ಚೈ.ಚಂದ್ರಚೂಡ್ ಅವರು ಪೂಜಾ ಸ್ಥಳಗಳ ಕಾಯ್ದೆ ಕುರಿತು ನೀಡಿದ್ದ ಮೌಖಿಕ ಹೇಳಿಕೆಯನ್ನು ಮುಂದಿಟ್ಟುಕೊಂಡು ಹಿಂದುತ್ವ ಸಂಘಟನೆಗಳು ಇಂತಹ ಹೆಜ್ಜೆಯಿಟ್ಟಿವೆ ಎಂದು ದೂರಿದರು.


“ಅವರು ಈಗ ಎಲ್ಲೆಡೆ ಸಮೀಕ್ಷೆ ನಡೆಸುವುದನ್ನು ಬಯಸುತ್ತಾರೆ. ಈ ಹಿಂದೆ ದೇವಸ್ಥಾನ ಇತ್ತು ಎಂದು ಹೇಳಿ ಮಸೀದಿಗಳಿಗೆ ತೆರಳಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಒಂದಲ್ಲ, ಎರಡಲ್ಲ ಇಂತಹ ಹಲವಾರು ಬೇಡಿಕೆಗಳನ್ನು ಮುಂದಿಡಲಾಗುತ್ತಿದೆ' ಎಂದು ಹೇಳಿದರು.


2022ರ ಮೇ ನಲ್ಲಿ ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಡಿ.ವೈ.ಚಂದ್ರಚೂಡ್ ಅವರು, '1991ರ ಕಾಯ್ದೆಯು ಯಾವುದೇ ಕಟ್ಟಡದ ಧಾರ್ಮಿಕ ಸ್ವರೂಪವನ್ನು ಖಚಿತಪಡಿಸಿಕೊಳ್ಳುವುದರಿಂದ ಒಬ್ಬ ವ್ಯಕ್ತಿಯನ್ನು ತಡೆಯುವುದಿಲ್ಲ' ಎಂದು ಹೇಳಿದ್ದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget