ಅರ್ಜಿದಾರರಿಗೆ ದಂಡ ವಿಧಿಸಿದ ಹೈಕೋರ್ಟ್
ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಅವರ ಸ್ಮಾರಕವನ್ನು ಮಡಿಕೇರಿ ಕೋಟೆಯೊಳಗೆ ಮಾಡುವುದಕ್ಕೆ ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕೋರ್ಟ್ ಅಮೂಲ್ಯ ಸಮಯ ವ್ಯರ್ಥ ಮಾಡಿದ ಹಿನ್ನೆಲೆಯಲ್ಲಿ 15 ಸಾವಿರ ರೂ.ರೂ. ದಂಡ ವಿಧಿಸಿದೆ.
ಕಾವೇರಿ ಸೇನೆ ಸಂಘಟನೆಯ ಅಧ್ಯಕ್ಷ ಕೆ.ಎ. ರವಿ ಚಂಗಪ್ಪ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಗುಡ್ಡೆಮನೆ ಅಪ್ಪಯ್ಯ ಬ್ರಿಟೀಷರ ವಿರುದ್ಧ ಹೋರಾಟಗಾರಾಗಿದ್ದರು. ಈ ಹಿನ್ನೆಲೆಯಲ್ಲಿ ಮಡಿಕೇರಿ ಕೋಟೆಯೊಳಗೆ ಅವರ ಸ್ಮಾರಕ ನಿರ್ಮಾಣಕ್ಕೆ ಸ್ಥಳೀಯ ಶಾಸಕರು ಸೂಚನೆ ನೀಡಿದ್ದಾರೆ. ಈ ಬಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ವರದಿ ಬಂದಿದೆ. ಅಸಲಿಗೆ ಗುಡ್ಡೆಮನೆ ಅಪ್ಪಯ್ಯ ಯಾರು ಎಂಬುದು ಯಾರೊಬ್ಬರಿಗೂ ಗೊತ್ತಿಲ್ಲ. ಇಲ್ಲದ ವ್ಯಕ್ತಿಯ ಬಗ್ಗೆ ಸುಳ್ಳು ಇತಿಹಾಸ ಸೃಷ್ಟಿಸಲಾಗಿದೆ. ಆದ್ದರಿಂದ ಸ್ಥಳೀಯ ಶಾಸಕರ ಸೂಚನೆ ಮೇರೆಗೆ ಗುಡ್ಡೆಮನೆ ಅಪ್ಪಯ ಸ್ಮಾರಕ ನಿರ್ಮಾಣ ಮಾಡದಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಸ್ಥಳೀಯ ಶಾಸಕರು ಮೌಖಿಕವಾಗಿ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ ಮಡಿಕೇರಿ ಕೋಟೆಯೊಳಗೆ ಗುಡ್ಡೆಮನೆ ಅಪ್ಪಯ್ಯ ಸ್ಮಾರಕ ನಿರ್ಮಿಸಲು ಮುಂದಾಗಿದ್ದಾರೆ ಎಂಬ ಪತ್ರಿಕಾ ವರದಿ ಆಧರಿಸಿ ಈ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಾಣುತ್ತಿಲ್ಲ. ಇಂತಹ ಅರ್ಜಿಗಳ ವಿಚಾರಣೆ ನಡೆಸುವುದು ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥ ಮಾಡಿದಂತೆ ಎಂದು ಅರ್ಜಿದಾರರಿಗೆ 15 ಸಾವಿರ ರೂ. ದಂಡ ವಿಧಿಸಿ ಅರ್ಜಿಯವನ್ನು ವಜಾಗೊಳಿಸಿತು.
ವಕೀಲರು ಕ್ಷಮೆಯಾಚನೆ
ಅರ್ಜಿದಾರರ ಪರ ವಕೀಲರು ಪೀಠ ಅರ್ಜಿ ವಜಾಗೊಳಿಸಿದ ಬಳಿಕವು ವಿವರಣೆ ನೀಡಲು ಮುಂದಾದರು ಮತ್ತು ಅರ್ಜಿಯು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು. ಆಗ, ಕೋರ್ಟ್ ಆದೇಶದ ಬಳಿಕವೂ ವಕೀಲರು ವಾದ ಮುಂದುವರಿಸಿದ್ದಾರೆ. ಆದ್ದರಿಂದ ದಂಡದ ಮೊತ್ತವನ್ನು 35 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ನ್ಯಾಯಪೀಠ ಹೇಳಿತು. ಆಗ, ಕ್ಷಮೆ ಯಾಚಿಸಿದ ವಕೀಲರು, ಅರ್ಜಿಯನ್ನು ವಾಪಸ್ ಪಡೆದುಕೊಳ್ಳುವುದಾಗಿ ಹೇಳಿದರು. ಅದನ್ನು ಒಪ್ಪಿದ ನ್ಯಾಯಪೀಠ, ಅರ್ಜಿ ವಾಪಸ್ ಪಡೆದುಕೊಳ್ಳುವುದಾಗಿ ವಕೀಲರು ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಳ್ಳಲಿದೆ ಎಂದು ಹೇಳಿದೆ.
Post a Comment