ಕಾರ್ಯಕ್ರಮವೊಂದರಲ್ಲಿ ಎಸ್.ಎಂ.ಕೃಷ್ಣ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪಾಲ್ಗೊಂಡಿದ್ದ ಮನಮೋಹನ ಸಿಂಗ್ ಅವರು ಜನರತ್ತ ಕೈಬೀಸಿದ್ದು ಹೀಗೆ
ಮೌನಿ ಸಿಂಗ್, ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್, ಮೌನಿ ಬಾಬಾ... ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಜರಿಯಲು ವಿರೋಧ ಪಕ್ಷಗಳು ಬಳಸಿದ ಟೀಕಾನಾಮಗಳಿವು. ದೇಶದ ಬೇರೆಲ್ಲಾ ಪ್ರಧಾನಿಗಳಂತೆ ಮನಮೋಹನ ಸಿಂಗ್ ಅವರು ಜನಪ್ರಿಯ ನಾಯಕರಾಗಿರಲಿಲ್ಲ. ಈಚಿನ ದಶಕದಲ್ಲಿ ಮನಮೋಹನ ಸಿಂಗ್ ಕುರಿತ ಸುದ್ದಿಗಳಲ್ಲಿ ಬಹುತೇಕವು ಅವರ ವಿರುದ್ಧ ಟೀಕೆಗಳೇ ಆಗಿದ್ದವು ಬಿಟ್ಟರೆ, ಅವರು ಮಾತನಾಡಿದ ಸುದ್ದಿಗಳು ಜನರಿಗೆ ತಲುಪಿದ್ದು ಕಡಿಮೆ. ಒಮ್ಮೆಯೂ ಚುನಾವಣೆ ಎದುರಿಸಿ ಸಂಸತ್ತು ಪ್ರವೇಶಿಸದ ಸಿಂಗ್ ಅವರನ್ನು, ಆ ಕಾರಣಕ್ಕೇ ವಿಪಕ್ಷಗಳು ಸದಾ ಜರಿಯುತ್ತಿದ್ದದೂ ಇದೆ. ತೀರಾ ಈಚಿನ ವರ್ಷಗಳಲ್ಲಿ ಅವರು ಟ್ವಿಟರ್ ಖಾತೆ ಆರಂಭಿಸಿದಾಗ, ಅವರನ್ನು ಅಲ್ಲಿ ಹಿಂಬಾಲಿಸಿದವರ ಸಂಖ್ಯೆ ತೀರಾ ಕಡಿಮೆ. ಹೀಗೆ ಅವರನ್ನು ಟೀಕೆ, ಅವಹೇಳನ, ಲೇವಡಿ ಮತ್ತು ನಿರ್ಲಕ್ಷ್ಯಕ್ಕೆ ಗುರಿ ಮಾಡುವಲ್ಲಿ, ಅವರು ಜಾರಿಗೆ ತಂದ ಕೆಲ ಮಹತ್ವದ ಬದಲಾವಣೆಗಳನ್ನು ಬಹುತೇಕರು ಮರೆತದ್ದೇ ಹೆಚ್ಚು.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಮನಮೋಹನ ಸಿಂಗ್ ಅವರ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದು. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡಿದ್ದಲ್ಲದೆ, ಸ್ವತ್ತು ನಿರ್ಮಾಣ, ಕೃಷಿ ಜಮೀನು ಅಭಿವೃದ್ಧಿಯಂತಹ ಅತ್ಯಂತ ಮಹತ್ವದ ಸುಧಾರಣೆಗಳನ್ನು ಈ ಯೋಜನೆ ಸಾಧ್ಯವಾಗಿಸಿದೆ. ಕೋವಿಡ್ ಲಾಕ್‌ಡೌನ್‌ನ ಅವಧಿಯಲ್ಲಿ ದೇಶದ ಗ್ರಾಮೀಣ ಪ್ರದೇಶದ ಬಹುಪಾಲು ಜನರಿಗೆ ಅನ್ನ-ಧನ ಒದಗಿಸಿದ್ದು ಇದೇ ಯೋಜನೆ. ಪ್ರತಿ ಕುಟುಂಬಕ್ಕೆ ಉದ್ಯೋಗ ನೀಡುವ ಮೂಲಕ ಅವರ ಆರ್ಥಿಕ ಅಗತ್ಯಗಳನ್ನು, ಆಹಾರದ ಅಗತ್ಯಗಳನ್ನು ಪೂರೈಸಬೇಕು ಎಂಬ ಉದ್ದೇಶದ ಈ ಯೋಜನೆಯ ಮೇಲೆ ವಿಶ್ವಬ್ಯಾಂಕ್ ಸಹ ಅಧ್ಯಯನ ನಡೆಸಿದೆ.
2013ರಲ್ಲಿ ಸಿಂಗ್ ಅವರ ಸರ್ಕಾರ ಜಾರಿಗೆ ತಂದ ಆಹಾರ ಭದ್ರತಾ ಕಾಯ್ದೆಯು ದೇಶದ ಅತ್ಯಂತ ದೊಡ್ಡ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದು. ದೇಶದ ಎಲ್ಲ ರಾಜ್ಯಗಳಲ್ಲೂ ಪಡಿತರ ಪೂರೈಕೆ ವ್ಯವಸ್ಥೆ ಏಕರೂಪದಲ್ಲಿ ಇಲ್ಲದೇ ಇದ್ದ ಸಂದರ್ಭದಲ್ಲಿ, ಯಾವೊಬ್ಬ ನಾಗರಿಕನೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಈ ಕಾಯ್ದೆ ರೂಪಿಸಲಾಗಿತ್ತು. ಅಂದು ಲಭ್ಯವಿದ್ದ 2011ರ ಜನಗಣತಿಯ ದತ್ತಾಂಶಗಳ ಆಧಾರದಲ್ಲಿ ಸುಮಾರು 80 ಕೋಟಿ ಜನರಿಗೆ ಆಹಾರ ಒದಗಿಸಲು ಸಿಂಗ್ ಸರ್ಕಾರ ಕಾರ್ಯಕ್ರಮ ರೂಪಿಸಿತ್ತು. ಕೋವಿಡ್ ಅವಧಿಯಲ್ಲಿ ಎನ್‌ಡಿಎ ಸರ್ಕಾರ ದೇಶದಜನರಿಗೆ ಉಚಿತ ಪಡಿತರ ಒದಗಿಸಿದ್ದು ಇದೇ ಯೋಜನೆ ಅಡಿಯಲ್ಲಿ. 2013ರಲ್ಲಿ ಎಷ್ಟು ಜನರನ್ನು ಫಲಾನುಭವಿಗಳು ಎಂದು ಗುರುತಿಸಲಾಗಿತ್ತೂ, ಅಷ್ಟೇ ಫಲಾನುಭವಿಗಳು ಈಗಲೂ ಇದ್ದಾರೆ. ಅರ್ಹರಿದ್ದರೂ ಫಲಾನುಭವಿಗಳ ಸಂಖ್ಯೆಯಲ್ಲಿ ಹೆಚ್ಚಿಸಲಾಗಿಲ್ಲ ಎಂದು ಹಿಂದಿನ ಎನ್‌ಡಿಎ ಸರ್ಕಾರ ಒಪ್ಪಿಕೊಂಡಿತ್ತು.
ಮಾಹಿತಿ ಹಕ್ಕು ಕಾಯ್ದೆ ಎಂದರೆ ಎಲ್ಲರಿಗೂ ಥಟ್ಟನೆ ಗೊತ್ತಾಗುವುದಿಲ್ಲ. ಬದಲಿಗೆ 'ಆರ್‌ಟಿಐ' ಎಂದರೆ ಪ್ರತಿಯೊಬ್ಬರಿಗೂ ಅದರ ಮಹತ್ವ ಗೊತ್ತಾಗುತ್ತದೆ. ಜನ ಸಾಮಾನ್ಯನ ಕೈಗೂ ಮಾಹಿತಿ ಹಕ್ಕನ್ನು ನೀಡಿದ ಕಾಯ್ದೆಯನ್ನು ಜಾರಿಗೆ ತಂದಿದ್ದು ಇದೇ ಮನಮೋಹನ ಸಿಂಗ್ ಅವರ ಸರ್ಕಾರ. ದೇಶದಲ್ಲಿ ಪತ್ರಿಕೋದ್ಯಮ, ಸಾಮಾಜಿಕ ಕಾರ್ಯಕರ್ತರ ಹೋರಾಟದ ದಿಕ್ಕು ಮತ್ತು ತೀವ್ರತೆಯನ್ನೇ ಬದಲಿಸಿದ ನಿರ್ಧಾರವದು. ಹಲವು ರಾಜ್ಯಗಳಲ್ಲಿ ಸರ್ಕಾರದ ಭ್ರಷ್ಟಾಚಾರಗಳು, ಜನವಿರೋಧಿ ನೀತಿಗಳು ಮತ್ತು ಸುಳ್ಳುಗಳನ್ನು ಬೆತ್ತಲುಗೊಳಿಸುವಲ್ಲಿ ಆರ್‌ಟಿಐ ಕಾಯ್ದೆಯ ಪಾತ್ರ ಮಹತ್ವದ್ದು.
ಇವುಗಳಂತೆಯೇ ಮನಮೋಹನ ಸಿಂಗ್ ಅವರ ಸರ್ಕಾರ ಜಾರಿಗೆ ತಂದ ಮತ್ತೊಂದು ಮಹತ್ವದ ಕಾಯ್ದೆ ಆರ್‌ಟಿಇ. ಬಡವರು ಮತ್ತು ವಂಚಿತರಿಗೂ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡುವುದನ್ನು ಈ ಕಾಯ್ದೆ ಕಡ್ಡಾಯ ಮಾಡಿತ್ತು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಕುಟುಂಬದ ಕೋಟ್ಯಂತರ ಮಕ್ಕಳು ಆರ್‌ಟಿಇ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಇದ್ದ 'ಸಾಮಾಜಿಕ ಮತ್ತು ಆರ್ಥಿಕ ಅಂತರ'ವನ್ನು ತುಸುಮಟ್ಟಿಗೆ ಹೋಗಲಾಡಿಸಿದ ಶ್ರೇಯವನ್ನು ಈ ಕಾಯ್ದೆಗೆ ಕೊಡಲೇಬೇಕು. ವಿಸ್ತರಿಸುತ್ತಲೋ ಅಥವಾ ದುರ್ಬಲಗೊಳಿಸುತ್ತಲೋ ಅಂತೂ ಈಗಿನ ಸರ್ಕಾರ ಈ ಯೋಜನೆಗಳನ್ನು ಮುಂದುವರೆಸುತ್ತಲೇ ಇದೆ. ದೇಶದ ಆರ್ಥಿಕ, ಸಾಮಾಜಿಕ ಜೀವನದ ಪ್ರಮುಖ ಭಾಗವಂತೆ ಆಗಿರುವ ಈ ಯೋಜನೆಗಳ ಫಲಾನುಭವಿಗಳು ಮನಮೋಹನ ಸಿಂಗ್ ಅವರನ್ನು ನೆನಪಿಸಿಕೊಳ್ಳಬೇಕಾದುದು ಅತ್ಯಗತ್ಯ.
Post a Comment