08:30, 02 ಡಿಸೆಂಬರ್ 2024
ಜಿಟಿಜಿಟಿ ಮಳೆ
ಫೆಂಗಸ್ ಚಂಡಮಾರುತದ ಪ್ರಭಾವದಿಂದ ಭಾನುವಾರ ರಾತ್ರಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದೆ. ಮಳೆಯ ಜೊತೆಗೆ ಶೀತ ಗಾಳಿಯೂ ಬೀಸುತ್ತಿದ್ದು ಸಂಪೂರ್ಣ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ.
08:27, 02 ಡಿಸೆಂಬರ್ 2024
ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಶಾಲಾ- ಕಾಲೇಜುಗಳಿಗೆ ರಜೆ
ಮೈಸೂರು ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ ಮುಂದುವರಿದಿರುವ ಕಾರಣ ಇಂದು (ಸೋಮವಾರ) ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಡಿ.2ರಂದು ಸೋಮವಾರ (ಇಂದು) ಅಂಗನವಾಡಿ, ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಈ ರಜೆಯು ಜಿಲ್ಲೆಯ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ (ದ್ವಿತೀಯ ಪಿಯುಸಿವರೆಗೆ) ಅನ್ವಯವಾಗುತ್ತದೆ.
ಈ ರಜಾ ದಿನದ ಕಲಿಕಾ ಪ್ರಕ್ರಿಯೆಯನ್ನು ಮುಂದಿನ ಸರ್ಕಾರಿ ರಜೆ ದಿನಗಳಲ್ಲಿ ಸರಿದೂಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿಯೂ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಇಂದು ಶಾಲಾ ಕಾಲೇಜುಗಳಿಗೆ (ಪದವಿಪೂರ್ವ) ರಜೆ ಘೋಷಿಸಿದೆ.
ಪರೀಕ್ಷೆ ನಡೆಯುತ್ತಿರುವ ಪದವಿ ಕಾಲೇಜುಗಳಿಗೆ ರಜೆ ಅನ್ವಯಿಸುವುದಿಲ್ಲ, ರಜೆ ದಿನದ ಕಲಿಕೆಯನ್ನು ಭಾನುವಾರ ಸರಿದೂಗಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.
14 ಜಿಲ್ಲೆಗಳಿಗೆ 'ಭಾರಿ ಮಳೆ' ಮುನ್ಸೂಚನೆ
ತಮಿಳುನಾಡಿನಲ್ಲಿ ಭೂಸ್ಪರ್ಶ ಮಾಡಿರುವ ಫೆಂಜಲ್ ಚಂಡಮಾರುತದ ಪರಿಣಾಮ ರಾಜ್ಯಕ್ಕೂ ತಟ್ಟಿದ್ದು, ಸೋಮವಾರ 14 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಕೆಲವೆಡೆ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಉಡುಪಿ, ದಕ್ಷಿಣ ಕನ್ನಡ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್' ನೀಡಲಾಗಿದೆ. ಈ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
Post a Comment