ಸಾಲ ಬಹಳ ಮುಖ್ಯವಾದ ಹಣಕಾಸು ಯೋಜನೆ. ಸಾಲ ಪಡೆದವರು ಸಾಲ ವಾಪಸ್ ನೀಡದೇ ಇದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಒಂದು ವೇಳೆ ಸಾಲ ಪಡೆದ ವ್ಯಕ್ತಿಯೇ ಸಾವನ್ನಪ್ಪಿಬಿಟ್ಟರೆ? ಸಾಲ ವಾಪಸ್ ಪಡೆಯಲು ಕೆಲ ಕಾನೂನು ಕ್ರಮಗಳಿವೆ. ಮೃತಪಟ್ಟ ವ್ಯಕ್ತಿಯ ಸಾಲಕ್ಕೆ ಅವರ ಕುಟುಂಬಸ್ಥರು ಬಾಧ್ಯಸ್ಥರಾಗಿರುತ್ತಾರಾ? ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಧ್ಯವಾ? ಇಲ್ಲಿ ವಾಹನ ಸಾಲ, ಗೃಹ ಸಾಲ ಮತ್ತು ವೈಯಕ್ತಿಕ ಸಾಲಗಳಲ್ಲಿ ಸಾಲ ವಸೂಲಾತಿ ಸಾಧ್ಯತೆ ಬೇರೆ ಬೇರೆ ಇರಬಹುದು. ಗೃಹಸಾಲ ಮತ್ತು ವಾಹನ ಸಾಲಗಳು ಅಡಮಾನ ಸಾಲ ಅಥವಾ ಸುರಕ್ಷಿತ ವಿಭಾಗಕ್ಕೆ ಸೇರಿವೆ. ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಸಾಲಗಳು ಅಸುರಕ್ಷಿತ ಸಾಲದ ಕೆಟಗರಿಯದ್ದಾಗಿದೆ. ಇಲ್ಲಿ ಅಡಮಾನ ಸಾಲದಲ್ಲಿ ಯಾವುದಾದರೂ ಬೆಲೆಯುತ ವಸ್ತುವನ್ನು ಗಿರವಿಯಾಗಿ ಇಟ್ಟುಕೊಂಡಿರಲಾಗುತ್ತದೆ. ಗೃಹಸಾಲದಲ್ಲಿ ಮನೆಯ ಮೂಲಪತ್ರವು ಬ್ಯಾಂಕ್ ಬಳಿ ಇರುತ್ತದೆ. ವೆಹಿಕಲ್ ಲೋನ್ನಲ್ಲಿ ವಾಹನದ ಪತ್ರವನ್ನು ಇಟ್ಟುಕೊಂಡಿರಲಾಗುತ್ತದೆ. ಈ ರೀತಿಯ ಸುರಕ್ಷಿತ ಸಾಲವನ್ನು ಪಡೆದ ವ್ಯಕ್ತಿ ಅಕಸ್ಮಾತ್ ಆಗಿ ಮೃತಪಟ್ಟರೆ ಆಗ, ಆ ಸಾಲವನ್ನು ಜಂಟಿಯಾಗಿ ಯಾರಾದರೂ ಪಡೆದವರಿದ್ದರೆ ಅವರನ್ನು ಬಾಧ್ಯಸ್ಥರನ್ನಾಗಿ ಪರಿಗಣಿಸಲಾಗುತ್ತದೆ. ಅವರಿಲ್ಲದಿದ್ದರೆ ಸಾಲಕ್ಕೆ ಶೂರಿಟಿ ಕೊಟ್ಟವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಅವರೂ ಇಲ್ಲದಿದ್ದರೆ ಆಗ ಸಾಲ ಪಡೆದ ವ್ಯಕ್ತಿಯ ಅಧಿಕೃತ ವಾರಸುದಾರರ ಬಳಿ ವಸೂಲಾತಿ ಮಾಡಲು ಬ್ಯಾಂಕ್ನವರು ಯತ್ನಿಸಬಹುದು.
ಒಂದು ವೇಳೆ ಸಾಲಕ್ಕೆ ಇನ್ಷೂರೆನ್ಸ್ ಪಡೆದಿದ್ದರೆ ಆಗ ಇನ್ಷೂರೆನ್ಸ್ ಕಂಪನಿ ಬಳಿ ಬ್ಯಾಂಕ್ನವರು ಬಾಕಿ ಹಣಕ್ಕೆ ಕ್ಲೇಮ್ ಮಾಡಬಹುದು. ಜಂಟಿ-ಸಾಲಗಾರರು, ಗ್ಯಾರಂಟರ್, ವಾರಸುದಾರರು ಇವರಾರೂ ಇಲ್ಲ ಎಂದಲ್ಲಿ ಆಗ ಅದನ್ನು ಎನ್ಪಿಎ ಆಗಿ ಪರಿಗಣಿಸಲಾಗುತ್ತದೆ. ಗಿರವಿ ಇಟ್ಟ ಆಸ್ತಿಪತ್ರವನ್ನು ಬಳಸಿ ಆಸ್ತಿಯನ್ನು ಹರಾಜು ಮಾಡಿ ಅದರಿಂದ ಬಂದ ಹಣದಲ್ಲಿ ಸಾಲದ ಮೊತ್ತವನ್ನು ಮುರಿದುಕೊಳ್ಳಲಾಗುತ್ತದೆ. ಇದು ಗೃಹಸಾಲ, ವಾಹನ ಸಾಲ, ಒಡವೆ ಸಾಲ ಇತ್ಯಾದಿ ಸುರಕ್ಷಿತ ಸಾಲಗಳಿಗೆ ಇರುವ ಕ್ರಮಾವಳಿಯಾಗಿರುತ್ತದೆ.
Post a Comment