ಮಸೀದಿಯೊಳಗೆ 'ಜೈ ಶ್ರೀರಾಮ್‌' ಘೋಷಣೆ ಕೂಗುವುದು ಅಪರಾಧವೇ?: ಸುಪ್ರೀಂ ಕೋರ್ಟ್

 


ನವದೆಹಲಿ: ಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ ಕೂಗುವುದು ಅಪರಾಧ ಹೇಗಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ದಕ್ಷಿಣ ಕನ್ನಡದ ಕಡಬ ತಾಲ್ಲೂಕಿನ ಮಸೀದಿ ಆವರಣಕ್ಕೆ ನುಗ್ಗಿ 'ಜೈ ಶ್ರೀರಾಮ್' ಘೋಷಣೆ ಕೂಗಿದ ಇಬ್ಬರು ವ್ಯಕ್ತಿಗಳ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯ ಪರಿಶೀಲನೆಗೆ ಪೀಠ ಒಪ್ಪಿಗೆ ಸೂಚಿಸಿದೆ. ಕೀರ್ತನ್ ಕುಮಾರ್ ಮತ್ತು ಸಚಿನ್ ಕುಮಾರ್ ಎನ್‌.ಎಂ. ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠವು ರದ್ದುಗೊಳಿಸಿತ್ತು.


ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಸಂದೀಪ್ ಮೆಹ್ರಾ ಅವರಿದ್ದ ಪೀಠವು, ದೂರುದಾರ ಹೈದ‌ರ್ ಅಲಿ ಸಿ.ಎಂ. ಸಲ್ಲಿಸಿದ ಅರ್ಜಿಯ ಬಗ್ಗೆ ನ್ಯಾಯಾಲಯವು ನೋಟಿಸ್‌ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಜನವರಿಯಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.


ಎಫ್‌ಐಆ‌ರ್ ದಾಖಲಾದ 20 ದಿನಗಳಲ್ಲಿ ಹೈಕೋರ್ಟ್‌ ತನಿಖೆಗೆ ತಡೆ ನೀಡಿದೆ ಎಂದು ಹಿರಿಯ ವಕೀಲ ದೇವದತ್ ಕಾಮತ್‌ ಅವರು ನ್ಯಾಯಪೀಠದ ಗಮನಕ್ಕೆ ತಂದರು. 'ಆರೋಪಿಗಳು ಧಾರ್ಮಿಕ ಘೋಷಣೆ ಕೂಗುತ್ತಿದ್ದರು. ಅದು ಅಪರಾಧವೇ' ಎಂದು ಪೀಠ ಕೇಳಿತು.

'ಇದು ಐಪಿಸಿಯ ಸೆಕ್ಷನ್ 153 ಎ ಅಡಿಯಲ್ಲಿ ಅಪರಾಧವಾಗಿದೆ. ಪುಂಡ ಪೋಕರಿಗಳು ಇತರ ಪೂಜಾ ಸ್ಥಳಗಳಿಗೆ ಹೋಗಿ ಘೋಷಣೆಗಳನ್ನು ಕೂಗಿದ್ದಾರೆ. ಈ ರೀತಿಯ ಚಟುವಟಿಕೆಗೆ ಅನುಮತಿ ಇದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ' ಎಂದು ಕಾಮತ್ ವಾದಿಸಿದರು.


'ದೂರು ದಾಖಲಿಸಿದ್ದು ಯಾರು? ಆರೋಪಿಗಳನ್ನು ಗುರುತಿಸಿದ್ದು ಹೇಗೆ? ಸಿ.ಸಿ.ಟಿ.ವಿಯಲ್ಲಿ ಆರೋಪಿಗಳು ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣ ನಡೆದ ಪ್ರದೇಶದ ಸುತ್ತಮುತ್ತ ಕಂಡುಬಂದರೆ, ಅವರು ಭಾಗಿಯಾಗಿದ್ದಾರೆ ಎಂದರ್ಥವೇ' ಎಂದು ಪೀಠ ಪ್ರಶ್ನಿಸಿತು.

ಪ್ರಕರಣದ ಹಿನ್ನೆಲೆ:


ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕು ಐತ್ತೂರು ಗ್ರಾಮದ ಮರ್ಧಾಳದ ಬದ್ರಿಯಾ ಜುಮ್ಮಾ ಮಸೀದಿ ಆವರಣವನ್ನು ಸೆಪ್ಟೆಂಬರ್ 24ರಂದು ರಾತ್ರಿ 10.50ರಲ್ಲಿ ಅಕ್ರಮವಾಗಿ ಪ್ರವೇಶಿಸಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಬ್ಯಾರಿಗಳನ್ನು ಬದುಕಲು ಬಿಡುವುದಿಲ್ಲ ಎಂದು ಬೊಬ್ಬೆ ಹಾಕಿದ್ದಾರೆ ಎಂದು ಆರೋಪಿಸಿ ಕೀರ್ತನ್ ಕುಮಾರ್ ಮತ್ತು ಎನ್.ಎಂ.ಸಚಿನ್ ಕುಮಾರ್ ವಿರುದ್ಧ ಮಸೀದಿ ಸಿಬ್ಬಂದಿ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.


ಈ ದೂರಿನನ್ವಯ ಆರೋಪಿಗಳಿಬ್ಬರ ವಿರುದ್ಧ ಐಪಿಸಿಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಗಳು ತಮ್ಮ ವಿರುದ್ಧದ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ 'ಹಿಂದೂ, ಮುಸಲ್ಮಾನರು ಸೌಹಾರ್ದತೆಯಿಂದ ಜೀವಿಸುತ್ತಿದ್ದೇವೆ ಎಂದು ಸ್ವತಃ ದೂರುದಾರರೇ ಹೇಳಿದ್ದಾರೆ. ಆದರೆ, ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 295ಎ(ಧಾರ್ಮಿಕ ಭಾವನೆ, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು) ಅಡಿಯಲ್ಲಿ ದೂರು ದಾಖಲಿಸಲಾಗಿದೆ'


'ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆಗೆ ಹೇಗೆ ಧಕ್ಕೆಯಾಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಈ ಪ್ರಕರಣದಲ್ಲಿ ಯಾವುದೇ ಅಪರಾಧ ಕಂಡು ಬರುತ್ತಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ' ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಪೀಠ ಇಬ್ಬರು ವ್ಯಕ್ತಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿತ್ತು.


ಕರ್ನಾಟಕ ಹೈಕೋರ್ಟ್ ನೀಡಿದ್ದ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget