ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ “ ಒಂದು ರಾಷ್ಟ್ರ, ಒಂದು ಚುನಾವಣೆ” ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಮಂಗಳವಾರ (ಡಿ.17) ಲೋಕಸಭೆಯಲ್ಲಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಡಿಸಿದರು.
ಒಂದು ದೇಶ, ಒಂದು ಚುನಾವಣೆಗೆ ಸಂಬಂಧಿಸಿದಂತೆ ಆಯೋಗ ಸಾರ್ವಜನಿಕರಿಂದ ಸುಮಾರು 21,000 ಸಲಹೆಗಳನ್ನು ಸ್ವೀಕರಿಸಿದ್ದು, ಇದರಲ್ಲಿ ಶೇ.81ರಷ್ಟು ಒಂದು ದೇಶ, ಒಂದು ಚುನಾವಣೆಯ ಪರವಾಗಿರುವುದಾಗಿ ಪಿಟಿಐ ನ್ಯೂಸ್ ಏಜೆನ್ಸಿ ವರದಿ ತಿಳಿಸಿದೆ.
ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡಿಸಿದ್ದು, ಬಳಿಕ ಉಭಯ ಸದನಗಳ ಜಂಟಿ ಸಮಿತಿ ಪರಾಮರ್ಶೆಗೆ ಹಸ್ತಾಂತರಿಸುವುದಾಗಿ ಸಚಿವ ಅರ್ಜುನ್ ಲೋಕಸಭೆಗೆ ತಿಳಿಸಿದರು. ಇಂದು ಸಂಜೆ ಸಮಿತಿ ಸದಸ್ಯರ ಹೆಸರನ್ನು ಘೋಷಿಸಲಾಗುತ್ತದೆ ಎಂದು ವರದಿ ವಿವರಿಸಿದೆ.
ಒಂದು ದೇಶ, ಒಂದು ಚುನಾವಣೆ ಕುರಿತು ಜಂಟಿ ಸದನ ಸಮಿತಿ 90 ದಿನದೊಳಗೆ ವರದಿ ನೀಡಬೇಕಿದೆ. ಅದರೆ ಈ ಅವಧಿಯನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಇದು ಸಂವಿಧಾನದ ಮೂಲ ರಚನೆಗೆ ಸವಾಲು ಹಾಕಿದಂತಾಗಲಿದೆ, ಕೂಡಲೇ ಈ ಮಸೂದೆಯನ್ನು ಹಿಂಪಡೆಯಬೇಕು ಎಂದು ಹೇಳಿದರು.
ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್ ಅವರು ಇದು ಸರ್ವಾಧಿಕಾರಿ ಧೋರಣೆಯ ಪ್ರತೀಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಎಂಸಿ, ಸಮಾಜವಾದಿ ಪಕ್ಷ ಕೂಡಾ ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
Post a Comment