ತಿರುವಣ್ಣಾಮಲೈ: 'ಫೆಂಜಲ್' ಚಂಡಮಾರುತದ ಪರಿಣಾಮ ಸುರಿದ ನಿರಂತರ ಮಳೆಯಿಂದಾಗಿ ಮನೆಯೊಂದರ ಮೇಲೆ ಬೃಹತ್ ಬಂಡೆಯೊಂದು ಬಿದ್ದು ಐವರು ಮಕ್ಕಳು ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ.
ಎನ್‌ಡಿಆರ್‌ಎಫ್ ತಂಡ ಮತ್ತು ಪೊಲೀಸ್ ಸಿಬ್ಬಂದಿಯ ಸತತ ಕಾರ್ಯಾಚರಣೆ ಬಳಿಕ ಅವಶೇಷಗಳಡಿ ಸಿಲುಕಿದ್ದ ಮಗು ಸೇರಿದಂತೆ ಐವರ ಶವಗಳನ್ನು ಹೊರತೆಗೆದಿದ್ದಾರೆ. ಇನ್ನು ಇಬ್ಬರಿಗಾಗಿ ಶೋಧ ಮುಂದುವರಿದಿದೆ.
ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಕುಟುಂಬಕ್ಕೆ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಫೆಂಜಲ್ ಚಂಡಮಾರುತದ ಪರಿಣಾಮ ಉಂಟಾದ ಮಳೆಯಿಂದಾಗಿ ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಾದ ತಿರುವಳ್ಳೂರ್, ಕಾಂಚೀಪುರಂ ಮತ್ತು ಚೆಂಗಲ್‌ಪಟ್ಟುನಲ್ಲಿ ಚಂಡಮಾರುತವು ಮೊದಲು ಪ್ರಭಾವ ಬೀರಿತ್ತು. ನಂತರ ತಮಿಳುನಾಡಿನ ವಿಲ್ಲುಪುರಂ, ಕಡಲೂರು ಮತ್ತು ಪುದುಚೇರಿಯತ್ತ ಸಾಗಿ ಅಧಿಕ ಮಳೆ ಸುರಿಸಿದೆ. ಬಳಿಕ ತಿರುವಣ್ಣಮಲೈ, ರಾಣಿಪೇಟ್, ವೆಲ್ಲೂರು, ಧರ್ಮಪುರಿ, ಕೃಷ್ಣಗಿರಿ, ಸೇಲಂನಲ್ಲೂ ಮಳೆ ಸುರಿಸಿದೆ.
ಉತ್ತರ ತಮಿಳುನಾಡಿನ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಲ್ಲುಪುರಂ ಮತ್ತು ಕಡಲೂರಿನ ಹಲವು ಕಡೆಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ವಾಹನಗಳು ಎರಡು ಅಡಿವರೆಗೆ ಮುಳುಗಿದ್ದವು. ಹಲವೆಡೆ ಮನೆಗಳು ಮುಳುಗಿದ್ದು, ಮರಗಳು ಬುಡಮೇಲಾಗಿ ಉರುಳಿ ಬಿದ್ದಿವೆ.
ಭಾರಿ ಮಳೆಯ ಪರಿಣಾಮ ತಿರುವಣ್ಣಾಮಲೈ ಸಮೀಪದ ಸೇತುವೆಯೊಂದು ಭಾಗಶಃ ಮುರಿದುಬಿದ್ದಿದೆ. ಕರುಣಾಪುರಂ ಸಮೀಪದ ಸೇತುವೆ ಮುಳುಗಿ ಸಮೀಪದ ಪ್ರದೇಶಗಳಿಗೆ ನೀರು ನುಗ್ಗಿದೆ. ಗಿಂಗಿ ಸರ್ಕಾರಿ ಆಸ್ಪತ್ರೆಗೆ ನೀರು ನುಗ್ಗಿದ್ದು, ಎಚ್ಚೆತ್ತ ಅಧಿಕಾರಿಗಳು ಕೂಡಲೇ ರೋಗಿಗಳನ್ನು ಸ್ಥಳಾಂತರಿಸಿದ್ದಾರೆ.
ಭಾನುವಾರ ಚಂಡಮಾರುತದ ಕಾರಣದಿಂದಾಗಿ ಪುದುಚೇರಿ, ತಮಿಳುನಾಡಿನಲ್ಲಿ ತಲಾ ನಾಲ್ವರು ಮೃತಪಟ್ಟಿದ್ದರು.
Post a Comment