ನವದೆಹಲಿ: ಉದ್ಯಮಿ ಗೌತಮ್ ಅದಾನಿ ಲಂಚ ಹಗರಣ ವಿಚಾರವಾಗಿ ವಿಪಕ್ಷಗಳ ಒಕ್ಕೂಟ 'ಇಂಡಿಯಾ' ಸಂಸತ್ತಿನ ಹೊರಗೆ ಬುಧವಾರ ನಡೆಸಿದ ಎರಡನೇ ದಿನದ ಪ್ರತಿಭಟನೆಯಿಂದಲೂ ಸಮಾಜವಾದಿ ಪಕ್ಷ (ಎಸ್‌ಪಿ) ದೂರ ಉಳಿದಿತ್ತು. ಈ ನಡೆಯು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸಂದೇಹಕ್ಕೆ ಎಡೆಮಾಡಿಕೊಟ್ಟಿದೆ.
ಕಾಂಗ್ರೆಸ್ ಪಕ್ಷದ ಅದಾನಿ ಕೇಂದ್ರಿತ ರಣತಂತ್ರದಿಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈಗಾಗಲೇ ಅಂತರ ಕಾಯ್ದುಕೊಂಡಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜು ಖರ್ಗೆ ಅವರು ಕರೆ ನೀಡಿದ್ದ ಸಭೆಗೂ ಗೈರಾಗಿತ್ತು ಮತ್ತು ಯಾವುದೇ ಪ್ರತಿಭಟನೆಗಳಲ್ಲೂ ಪಾಲ್ಗೊಂಡಿಲ್ಲ.
ಸಂಸತ್ ಅಧಿವೇಶದಲ್ಲಿ ಪ್ರಸ್ತಾಪಿಸಬೇಕಾದ ವಿಚಾರಗಳ ಕುರಿತ ರಣತಂತ್ರಗಳ ಬಗ್ಗೆ ಕಾಂಗ್ರೆಸ್ ಕಡೆಯಿಂದ ಸಹಕಾರ ದೊರೆಯುತ್ತಿಲ್ಲ ಎಂದು ಸಮಾಜವಾದಿ ಪಕ್ಷ ಅಸಮಾಧಾನ ಹೊರಹಾಕಿದೆ.
ಪಕ್ಷದ ಹಿರಿಯ ನಾಯಕರೊಬ್ಬರು, 'ಸದನದಲ್ಲಿ ಕಾಂಗ್ರೆಸ್ ನಡೆಯು ಅಚ್ಚರಿ ಉಂಟುಮಾಡಿದೆ' ಎಂದು ಹೇಳಿದ್ದಾರೆ.
'ಸಂಭಲ್ ಹಿಂಸಾಚಾರ ವಿಚಾರವಾಗಿ ಗಮನಸೆಳೆಯಲು ಸಮಾಜವಾದಿ ಪಕ್ಷ ಬಯಸುತ್ತಿದೆ. ಆದರೆ ಕಾಂಗ್ರೆಸ್ ಗಮನಸೆಳೆಯಲು ಇಚ್ಛಿಸುತ್ತಿರುವ ವಿಷಯ 'ಅದಾನಿ'. ನಮ್ಮದು ಪ್ರಾದೇಶಿಕ ಪಕ್ಷ. ನಮ್ಮ ಸಮಸ್ಯೆ ಸಂಭಲ್. ಹೀಗಾಗಿ ಕಾಂಗ್ರೆಸ್ ನೇತೃತ್ವದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅಥವಾ ಆ ಮೂಲಕ ಕಲಾಪಕ್ಕೆ ಅಡ್ಡಿ ಮಾಡಲು ನಮಗೆ ಇಷ್ಟವಿಲ್ಲ' ಎಂದು ಅವರು 'ಪ್ರಜಾವಾಣಿ'ಗೆ ತಿಳಿಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದ ನಿಯೋಗದ ಸಂಭಲ್ ಭೇಟಿಗೆ ತಡೆ ನೀಡಿದ ವಿಚಾರವಾಗಿ ಕಾಂಗ್ರೆಸ್ ಸಭಾತ್ಯಾಗ ಮಾಡಿದಾಗ ಡಿಂಪಲ್ ಯಾದವ್ ನೇತೃತ್ವದಲ್ಲಿ ಎಸ್‌ಪಿ ಸಂಸದರು ಸಹ ಹೊರ ನಡೆದರು ಎಂದು ಹೇಳಿದರು.
ಅದಾನಿ ವಿರುದ್ದ ಪ್ರತಿಭಟನೆಯಲ್ಲಿ ಏಕೆ ಪಾಲ್ಗೊಂಡಿಲ್ಲ ಎಂಬ ಪ್ರಶ್ನೆಗೆ ಪಕ್ಷದ ರಾಜ್ಯಸಭೆ ಸದಸ್ಯ ರಾಮಗೋಪಾಲ್ ಯಾದವ್ ಅವರು, 'ಸಂಭಲ್ ಮಾತ್ರ ನಮ್ಮ ಸಮಸ್ಯೆ' ಎಂದರು.
ಮಂಗಳವಾರ ಎಸ್‌ಪಿ, ಸಂಭಲ್ ವಿಚಾರವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಸದನದಿಂದ ಹೊರನಡೆದಾಗ ಕಾಂಗ್ರೆಸ್ ಅದರೊಂದಿಗೆ ಕೈಜೋಡಿಸಿತ್ತು. ಆದರೆ ಕಾಂಗ್ರೆಸ್, ರೈತರ ವಿಚಾರ ಪ್ರಸ್ತಾಪಿಸಿ ಸಭಾತ್ಯಾಗ ಮಾಡಿದಾಗ ಸಮಾಜವಾದಿ ಪಕ್ಷ ಅದರೊಂದಿಗೆ ಬಂದಿರಲಿಲ್ಲ. ನಂತರ ರಾಜ್ಯಸಭೆಯಲ್ಲಿ ಸಂಭಲ್ ವಿಚಾರವಾಗಿ
ಎಸ್‌ಪಿ ಹೊರನಡೆದಾಗ ಕಾಂಗ್ರೆಸ್ ಕೈಜೋಡಿಸಲಿಲ್ಲ.
ಆದರೆ 'ಕಾಂಗ್ರೆಸ್ ಕಡೆಯಿಂದ ಹೆಚ್ಚಿನ ಸಹಕಾರ ದೊರೆಯುತ್ತಿಲ್ಲ' ಎಂದು ಸಮಾಜವಾದಿ ಪಕ್ಷ ದೂರಿದೆ. ಬುಧವಾರ ರಾಜ್ಯಸಭೆಯಲ್ಲಿ ರೈತರ ವಿಚಾರ ಪ್ರಸ್ತಾಪಿಸುವ ಬಗ್ಗೆ ಮೊದಲೇ ಗೊತ್ತಿದ್ದರೆ ಕಾಂಗ್ರೆಸ್ ಪಕ್ಷದ ಜತೆ ನಾವೂ ಸದನದಿಂದ ಹೊರಬರುತ್ತಿದ್ದೆವು. ಆದರೆ ಅದು ಪ್ರಸ್ತಾಪಿಸಿದಾಗಲೇ ನಮಗೆ ಆ ಬಗ್ಗೆ ಗೊತ್ತಾಯಿತು' ಎಂದು ಪಕ್ಷದ ನಾಯಕರೊಬ್ಬರು ಹೇಳಿದರು.
ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸುವ ವಿಷಯಗಳ ಕುರಿತು 'ಇಂಡಿಯಾ' ಒಕ್ಕೂಟ ಕರೆದಿದ್ದ ಯಾವುದೇ ಸಭೆಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಭಾಗಿಯಾಗಿಲ್ಲ.
ವಿಧಾನಸಭೆ ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರಿಯಾಗಿ ಪ್ರಚಾರ ನಡೆಸಿಲ್ಲ ಎಂದು ಎಸ್‌ಪಿ ಸಮಾಧಾನಗೊಂಡಿದೆ.
Post a Comment