ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ವಹಿಸಿಕೊಂಡಿದ್ದಾರೆ.
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷರಾಗಿ ರವಿವಾರ ತಮ್ಮ ಅಧಿಕಾರಾವಧಿಯನ್ನು ಆರಂಭಿಸಲಿರುವ ಜಯ್ ಶಾ, ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಕ್ರೀಡೆಯ ಉಪಸ್ಥಿತಿಯನ್ನು ಸದುಪಯೋಗಪಡಿಸಿಕೊಳ್ಳುವ ಮತ್ತು ವಿಶ್ವದಾದ್ಯಂತ ಮಹಿಳಾ ಕ್ರಿಕೆಟ್ ಅನ್ನು ಬೆಳೆಸುವ ತಮ್ಮ ದೃಷ್ಟಿಕೋನದ ರೂಪುರೇಷೆಗಳ ಬಗ್ಗೆ ಮಾತನಾಡಿದ್ದಾರೆ.
2020 ರ ನವೆಂಬರ್ನಿಂದ ಈವರೆಗೆ ಐಸಿಸಿ ಅಧ್ಯಕ್ಷರಾಗಿದ್ದ ಗ್ರೆಗ್ ಬಾರ್ಕ್ ಲೇ ಅವರ ಸ್ಥಾನಕ್ಕೆ 36 ವರ್ಷದ ಶಾ ಅವರನ್ನು ಹೊಸ ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ನಂತರ ಐಸಿಸಿ ಅಧ್ಯಕ್ಷರಾದ ಐದನೇ ಭಾರತೀಯರಾಗಿದ್ದಾರೆ ಜಯ್ ಶಾ.
"ಐಸಿಸಿ ಅಧ್ಯಕ್ಷನಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ನನ್ನ ಪಾಲಿಗೆ ಗೌರವದ ವಿಷಯವಾಗಿದ್ದು, ಐಸಿಸಿ ನಿರ್ದೇಶಕರು ಮತ್ತು ಸದಸ್ಯ ಮಂಡಳಿಗಳ ಬೆಂಬಲ ಮತ್ತು ನಂಬಿಕೆಗೆ ಕೃತಜ್ಞನಾಗಿದ್ದೇನೆ. ನಾವು ಲಾಸ್ ಎಂಜೆಲೀಸ್ 28 ಒಲಿಂಪಿಕ್ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿರುವ ಈ ಸುಸಂದರ್ಭವು ಕ್ರಿಕೆಟ್ ಅನ್ನು ಹೆಚ್ಚು ಅಂತರ್ಗತ ಮತ್ತು ವಿಶ್ವಾದ್ಯಂತದ ಅಭಿಮಾನಿಗಳಿಗೆ ಆಕರ್ಷಕವಾಗಿಸಲು ಕೆಲಸ ಮಾಡುವ ಸಮಯವಾಗಿದೆ" ಎಂದು ಅವರು ಹೇಳಿದರು.
"ನಾವು ಬಹು ಸ್ವರೂಪಗಳ ಕ್ರಿಕೆಟ್ ಮತ್ತು ಮಹಿಳಾ ಕ್ರಿಕೆಟ್ ಬೆಳವಣಿಗೆಯನ್ನು ವೇಗಗೊಳಿಸುವ ಅಗತ್ಯದೊಂದಿಗೆ ನಿರ್ಣಾಯಕ ಘಟ್ಟದಲ್ಲಿದ್ದೇವೆ. ಕ್ರಿಕೆಟ್ ಜಾಗತಿಕವಾಗಿ ಅಪಾರ ಸಾಮರ್ಥ್ಯವನ್ನು ಹೊಂದಿದೆ ಮತ್ತು ಈ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಕ್ರೀಡೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಐಸಿಸಿ ತಂಡ ಮತ್ತು ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ" ಎಂದು ಶಾ ಐಸಿಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2009ರಲ್ಲಿ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ನಿಂದ ಶಾ ಕ್ರಿಕೆಟ್ ಆಡಳಿತ ಮಂಡಳಿಗಳಲ್ಲಿ ತಮ್ಮ ಸೇವೆ ಆರಂಭಿಸಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಅವರು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದ ಅಭಿವೃದ್ಧಿಯ ಮೇಲ್ವಿಚಾರಣೆ ನಡೆಸಿರುವುದು ಗಮನಾರ್ಹ.
2019 ರಲ್ಲಿ, ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿಯಾದರು. ಈ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿ ಮತ್ತು ಐಸಿಸಿಯ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿ ಪ್ರಮುಖ ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಬಿಸಿಸಿಐನಲ್ಲಿದ್ದಾಗ ಶಾ ದಾಖಲೆಯ ಮೊತ್ತದ ಐಪಿಎಲ್ ಮಾಧ್ಯಮ ಹಕ್ಕುಗಳ ಒಪ್ಪಂದ, ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ರಚನೆ, ಬೆಂಗಳೂರಿನಲ್ಲಿ ಹೊಸ ಅತ್ಯಾಧುನಿಕ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ ಮತ್ತು ಉದ್ಘಾಟನೆ ಮತ್ತು ಟೆಸ್ಟ್ ಕ್ರಿಕೆಟ್ ಪ್ರೋತ್ಸಾಹಕ ಯೋಜನೆಗಳ ಮೇಲ್ವಿಚಾರಣೆ ನಡೆಸಿದರು.
"ಕಳೆದ ನಾಲ್ಕು ವರ್ಷಗಳಿಂದ ಈ ಹುದ್ದೆಯಲ್ಲಿದ್ದ ಗ್ರೆಗ್ ಬಾರ್ಕ್ ಲೇ ಅವರ ನಾಯಕತ್ವ ಮತ್ತು ಆ ಅವಧಿಯಲ್ಲಿ ಸಾಧಿಸಿದ ಮೈಲಿಗಲ್ಲುಗಳಿಗಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಜಾಗತಿಕ ವೇದಿಕೆಯಲ್ಲಿ ಆಟದ ವ್ಯಾಪ್ತಿ ಮತ್ತು ವಿಕಾಸವನ್ನು ವಿಸ್ತರಿಸಲು ಐಸಿಸಿ ತಂಡ ಮತ್ತು ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಶಾ ಹೇಳಿದರು.
Post a Comment