ಬೋಳಾರದ ಸಿಟಿ ಬೀಚ್ ನಲ್ಲಿ ಏರ್ಪಡಿಸಲಾಗಿದ್ದ ಇಸ್ರೇಲ್ ಮೂಲದ ಖ್ಯಾತ ಡಿಜೆ ಆರ್ಟಿಸ್ಟ್ ಸಜಂಕಾ ಡಿಜೆ ಪಾರ್ಟಿಯನ್ನು ಕೊನೆಕ್ಷಣದಲ್ಲಿ ರದ್ದು ಪಡಿಸಲಾಗಿದೆ. ಹಿಂದು ಸಂಘಟನೆಗಳ ವಿರೋಧ ಹಿನ್ನೆಲೆಯಲ್ಲಿ ಸಜಂಕಾ ಪಾರ್ಟಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಹೀಗಾಗಿ ಆಯೋಜಕರು ಸಜಂಕಾ ಬದಲು ಬೇರೆ ಆರ್ಟಿಸ್ಟ್ ಮೂಲಕ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದ್ದಾರೆ.
ಮಂಗಳೂರು, ಡಿ.27: ಬೋಳಾರದ ಸಿಟಿ ಬೀಚ್ ನಲ್ಲಿ ಏರ್ಪಡಿಸಲಾಗಿದ್ದ ಇಸ್ರೇಲ್ ಮೂಲದ ಖ್ಯಾತ ಡಿಜೆ ಆರ್ಟಿಸ್ಟ್ ಸಜಂಕಾ ಡಿಜೆ ಪಾರ್ಟಿಯನ್ನು ಕೊನೆಕ್ಷಣದಲ್ಲಿ ರದ್ದು ಪಡಿಸಲಾಗಿದೆ. ಹಿಂದು ಸಂಘಟನೆಗಳ ವಿರೋಧ ಹಿನ್ನೆಲೆಯಲ್ಲಿ ಸಜಂಕಾ ಪಾರ್ಟಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಹೀಗಾಗಿ ಆಯೋಜಕರು ಸಜಂಕಾ ಬದಲು ಬೇರೆ ಆರ್ಟಿಸ್ಟ್ ಮೂಲಕ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದ್ದಾರೆ.
ಹೊಸ ವರ್ಷದ ಪ್ರಯುಕ್ತ ಮಂಗಳೂರಿನ ಟಾಪ್ ಹೌಸ್ ರೆಸ್ಟೋರೆಂಟ್ ಮಾಲೀಕರು ಅದ್ದೂರಿ ಡಿಜೆ ಪಾರ್ಟಿಯನ್ನು ಆಯೋಜಿಸಿದ್ದರು. ಡಿಜೆ ಪಾರ್ಟಿಗೆ ಇಸ್ರೇಲ್ ಮೂಲದ ಖ್ಯಾತ ಆರ್ಟಿಸ್ಟ್ ಸಜಂಕಾ ಬರುವುದೆಂದು ನಿಗದಿಯಾಗಿತ್ತು. ಹಿಂದು ಸಂಘಟನೆಗಳ ವಿರೋಧ ನಡುವೆಯೂ ಸಂಘಟಕರು ಮೇಲಿನ ಲೆವೆಲಲ್ಲಿ ಮಾತುಕತೆ ಮಾಡಿ ಡಿ.27ರ (ಇಂದು) ರಾತ್ರಿಗೆ ಪಾರ್ಟಿ ಆಯೋಜಿಸಿದ್ದರು.
ಆದರೆ ಡಿಜೆ ಪಾರ್ಟಿಯಲ್ಲಿ ಡ್ರಗ್ಸ್ ನೀಡಲಾಗುತ್ತದೆ, ಹಿಂದು ದೇವರ ಅಣಕಿಸುವ ಸಜಂಕಾಗೆ ಅವಕಾಶ ನೀಡಬಾರದು ಎಂದು ವಿಎಚ್ ಪಿ ಮತ್ತು ಬಜರನಂಗದಳ ಪೊಲೀಸರಿಗೆ ದೂರು ನೀಡಿತ್ತು. ಅಲ್ಲದೆ, ವಿಎಚ್ ಪಿ, ಬಜರಂಗದಳದಿಂದ ಜಾಲತಾಣದಲ್ಲಿಯೂ ಅಭಿಯಾನ ನಡೆದಿತ್ತು. ಸಜಂಕಾ ಪಾರ್ಟಿಯಲ್ಲಿ ಪಾಲ್ಗೊಂಡರೆ ಬಜರಂಗದಳದಿಂದ ಪ್ರತಿಭಟನೆ ನಡೆಸುವ ಬೆದರಿಕೆಯನ್ನೂ ಒಡ್ಡಿದ್ದರು. ಈ ಹಿನ್ನೆಲೆಯಲ್ಲಿ ಸಜಂಕಾ ಪಾಲ್ಗೊಳ್ಳುವುದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಇತ್ತ ಸಜಂಕಾ ಮಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದ್ದು ಪಾರ್ಟಿಗೆ ಹೋಗದೆ ಹೊಟೇಲಿನಲ್ಲೇ ಉಳಿದುಕೊಳ್ಳುವ ಸಾಧ್ಯತೆಯಿದೆ.
ಇದೇ ವೇಳೆ, ಇಂದು ರಾತ್ರಿ ಆಯೋಜನೆಗೊಂಡಿದ್ದ ಡಿಜೆ ಪಾರ್ಟಿ ನಡೆಯುತ್ತದೆ. ಸಜಂಕಾ ಬದಲು ಬೇರೆಯವರನ್ನು ಕರೆಸಿಕೊಂಡಿದ್ದೇವೆ. ಮ್ಯೂಸಿಕ್ ಪ್ರಿಯರು ಬನ್ನಿ ಎಂದು ಟಾಪ್ ಹೌಸ್ ತಂಡ ಪೋಸ್ಟರ್ ಬಿಟ್ಟಿದೆ. ಮೊದಲ ಬಾರಿಗೆ ಮಂಗಳೂರಿನಲ್ಲಿ ಸಜಂಕಾ ಪಾರ್ಟಿ ಆಯೋಜಿಸಲಾಗಿತ್ತು. ವಿಭಿನ್ನ ಶೈಲಿಯ ಮ್ಯೂಸಿಕ್, ಭಾರತೀಯ ಹಾಡುಗಳನ್ನೂ ಪಾಪ್ ಶೈಲಿಗೆ ಸಂಯೋಜಿಸುವ ಸಜಂಕಾ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಇದೆ. ಈ ಬಾರಿ ಹೊಸ ವರ್ಷಕ್ಕೆ ಕೊಲ್ಕತ್ತಾ, ಮುಂಬೈನಲ್ಲಿಯೂ ಸಜಂಕಾ ಪಾರ್ಟಿ ಆಯೋಜನೆಯಾಗಿದೆ.
Post a Comment