ಬೆಂಗಳೂರು: ಉಪಚುನಾವಣೆ ಸೋಲು, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಣ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣಗಳ ಜಗಳ, ಶಾಸಕರಾದ ಎಸ್ಟಿ ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಪಕ್ಷ ವಿರೋಧಿ ಚಟುವಟಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಯಿತು. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯ ಪಕ್ಷದ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಎಸ್ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಬಗ್ಗೆ ಹೈಕಮಾಂಡ್ಗೆ ದೂರು ನೀಡುವ ತೀರ್ಮಾನಕ್ಕೆ ಬರಲಾಯಿತು. ಬಣ ಬಡಿದಾಟ, ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ ಹೀಗೆ ಹತ್ತು ಹಲವು ವಿಚಾರಗಳನ್ನಿಟ್ಟುಕೊಂಡು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಸಭೆಯಲ್ಲಿ ವಿಜಯೇಂದ್ರ ಬಣದ ನಾಯಕರು ಭಾಗಿಯಾಗಿದ್ದರು. ರಾಧಾ ಮೋಹನ್ ದಾಸ್ ಮುಂದೆ ಬಣ ಬಡಿದಾಟದ ಬಗ್ಗೆ ಪ್ರಸ್ತಾಪ ಮಾಡಲಾಯಿತು. ಆದರೆ, ಯತ್ನಾಳ್ ಬಣದ ಯಾವ ನಾಯಕರೂ ಸಭೆಗೆ ಬಂದಿರಲಿಲ್ಲ. ಸಭೆಯ ಬಳಿಕ ಮಾತನಾಡಿದ ರಾಧಾ ಮೋಹನ್ ದಾಸ್, ಶಾಸಕ ಯತ್ನಾಳ್ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಉತ್ತರ ಬಂದ ಮೇಲೆಯೇ ಮುಂದಿನ ನಡೆ ಎಂದರು. ಪ್ರಸ್ತುತ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಸೂಕ್ತ ಎನಿಸಿದೆ, ಹೀಗಾಗಿ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿದ್ದಾರೆ ಎಂದರು.
Post a Comment