ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಬದುಕಿದ್ದಾಗ ನಿರಂತರವಾಗಿ ಅಪಮಾನ ಮಾಡಿದ್ದ ಕಾಂಗ್ರೆಸ್ಸಿಗರಿಗೆ ಅವರ ಹೆಸರು ಹೇಳುವ ನೈತಿಕ ಹಕ್ಕೇ ಇಲ್ಲ ಎಂದು ಬಿಜೆಪಿ ಸಹ ಉಸ್ತುವಾರಿ ಡಾ.ಪಿ.ಸುಧಾಕರ ರೆಡ್ಡಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಸೋಲಿನ ನಂತರ ಕಾಂಗ್ರೆಸ್ ಪಕ್ಷದವರು ಹತಾಶರಾಗಿದ್ದಾರೆ. ಅಂಬೇಡ್ಕರ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಸೋಲಿಸಿ ಅವಮಾನಿಸಿದ್ದ ಕಾಂಗ್ರೆಸ್ ಪಕ್ಷವು ಇದೀಗ ತಮ್ಮ ನಾಯಕನನ್ನು ಉಳಿಸಿಕೊಳ್ಳಲು ಅದೇ ಬಾಬಾ ಸಾಹೇಬರ ಹೆಸರನ್ನು ಬಳಸಿಕೊಳ್ಳುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದೇಶ ವಿಭಜಿಸುವುದನ್ನು ಅಂಬೇಡ್ಕರ್ ವಿರೋಧಿಸಿದ್ದರು. 370 ನೇ ವಿಧಿ ಹೇರುವುದನ್ನೂ ಅವರು ವಿರೋಧಿಸಿದ್ದರು. ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷವು ದೇಶವನ್ನೇ ಜೈಲಾಗಿ ಪರಿವರ್ತಿಸಿತ್ತು ಎಂದು ಅವರು ಟೀಕಿಸಿದರು.
ಅಮಿತ್ ಶಾ ಅವರ ಮೇಲೆ ಕೆಸರೆರಚುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಆದರೆ, ದೇಶದ ಜನರು ಮೋದಿ ಮತ್ತು ಅಮಿತ್ ಶಾ ಅವರ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಅಂಬೇಡ್ಕರ್ ಹೆಸರಿನಿಂದ ಮತ್ತೆ ರಾಜಕಾರಣ ಮಾಡಲು ಕಾಂಗ್ರೆಸ್ ಮುಂದಾಗಿದೆ. ಆದರೆ, ಜನರಿಗೆ ಕಾಂಗ್ರೆಸ್ಸಿಗರ ನೈಜ ಬಣ್ಣ ತಿಳಿದಿದೆ. ಕಾಂಗ್ರೆಸ್ಸಿಗರ ತಪ್ಪು ನೀತಿಗಳನ್ನು ಅಮಿತ್ ಶಾ ಅವರು ಜನರ ಮುಂದೆ ಅನಾವರಣಗೊಳಿಸಿದ್ದಾರೆ ಎಂದರು.
ಅಂಬೇಡ್ಕರ್ ಅವರನ್ನು ನಿರಂತರವಾಗಿ ಅಪಮಾನ ಮಾಡಿ, ಅವರಿಗೆ ಅಗೌರವ ತೋರಿಸಿದ್ದ ಕಾಂಗ್ರೆಸ್ ಪಕ್ಷ ಈಗ ಅಂಬೇಡ್ಕರ್ ಅವರ ಜಪ ಮಾಡುತ್ತಿದೆ. ಸಂವಿಧಾನ ನಮಗೆ ವರದಾನ ಎಂದು ಅಮಿತ್ ಶಾ ಟೀಕೆ ಮಾಡಿದ್ದರು. ಅಮಿತ್ ಶಾ ಕುರಿತು ಇಲ್ಲಿನ ಸಚಿವರು ಅಗೌರವದಿಂದ ಮಾತನಾಡುತ್ತಿದ್ದು, ಇದು ಶೋಭೆ ತರುವ ವಿಚಾರವಲ್ಲ ಎಂದರು.
ಸಾಮಾನ್ಯ ಕುಟುಂಬದಿಂದ ವ್ಯಕ್ತಿ 10 ವರ್ಷಕ್ಕೂ ಹೆಚ್ಚು ಕಾಲ ಪ್ರಧಾನಿ ಆಗಿರುವುದನ್ನು ಕಾಂಗ್ರೆಸ್ಸಿಗರಿಗೆ ಅದರಲ್ಲೂ ಗಾಂಧಿ ಕುಟುಂಬಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ರಾಹುಲ್ ಗಾಂಧಿ ತಮ್ಮದೇ ಯುಪಿಎ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅವಮಾನಿಸಿದ ವ್ಯಕ್ತಿ ಎಂದು ಸುಧಾಕರ ರೆಡ್ಡಿ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಜನಾರ್ದನ ರೆಡ್ಡಿ ಇದ್ದರು.
Post a Comment