ಅಟಲ್ ಬಿಹಾರಿ ವಾಜಪೇಯಿ ಸುವರ್ಣ ಚತುಷ್ಪಥ ರಸ್ತೆ ಕನಸು ಕಂಡಿದ್ದೇ ಕರ್ನಾಟಕದಲ್ಲಿ!

 


ಅಟಲ್​ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ: ದೇಶ ಕಂಡ ಅದ್ವೀತಿಯ ಆಡಳಿತಗಾರ, ಭಾರತೀಯ ಜನತಾ ಪಾರ್ಟಿಯ ಸಂಘಟನಾ ಚತುರ, ಅಜಾತ ಶತ್ರುವೆನಿಸಿಕೊಂಡ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿಯವರು ಜನಿಸಿ 100 ವರ್ಷಗಳಾದವು. ದೇಶದ ಉದ್ದಗಲಕ್ಕೂ ಸಂಚರಿಸಿ ಬಿಜೆಪಿಯನ್ನು ಕಟ್ಟಿ, ಬೆಳಸಿದ್ದವರು ವಾಜಪೇಯಿ. ಇದೀಗ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ, ಅಟಲ್ ಜೀವನದಲ್ಲಿ ನಡೆದಿದ್ದ ಕೆಲವು ಸ್ವಾರಸ್ಯಕರ ಘಟನೆಗಳನ್ನು ಅವರ ಒಡನಾಡಿಯಾಗಿದ್ದ ಹಿರಿಯ ಪತ್ರಕರ್ತ ಹೇಮಂತ್​ ಶರ್ಮಾ ‘ಟಿವಿ9’ ಕನ್ನಡ ಡಿಜಿಟಲ್​ ಜತೆ ಹಂಚಿಕೊಂಡಿದ್ದಾರೆ.


ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕರ್ನಾಟಕದ ಜತೆ ಸದಾ ಒಡನಾಟ ಹೊಂದಿದ್ದವರು. ದೇಶದಾದ್ಯಂತ ಸುವರ್ಣ ಚತುಷ್ಪಥ ರಸ್ತೆಯ ಹರಿಕಾರನಾಗಿ ಇಂದಿಗೂ ಅವರು ಗಮನ ಸೆಳಯುತ್ತಾರೆ. ಆದರೆ, ಅವರಿಗೆ ಇಂಥದ್ದೊಂದು ಯೋಚನೆ, ಯೋಜನೆ ಹೊಳೆದಿದ್ದೇ ಕರ್ನಾಟಕದಲ್ಲಿ ಎಂದರೆ ನೀವು ನಂಬಲೇಬೇಕು! ಹೌದು, ಈ ಬಗ್ಗೆ ಅವರ ಒಡನಾಡಿಯಾಗಿದ್ದ ಹಿರಿಯ ಪತ್ರಕರ್ತ ಹೇಮಂತ್​ ಶರ್ಮಾ ಬೆಳಕು ಚೆಲ್ಲಿದ್ದಾರೆ. ಇಷ್ಟೇ ಅಲ್ಲದೆ, ವಾಜಪೇಯಿ ಅವರ ಕರ್ನಾಟಕ ನಂಟು, ರಾಜಕೀಯ ಜೀವನದ ಸ್ವಾರಸ್ಯಕರ ಅಂಶಗಳು, ವೈಯಕ್ತಿಕ ಜೀವನದ ಬಗ್ಗೆಯೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅವುಗಳನ್ನು ಯಥಾವತ್ ಇಲ್ಲಿ ನೀಡಲಾಗಿದೆ;

1985ರಲ್ಲಿ ವಾಜಪೇಯಿ, ಬಿಆರ್​ ಶಂಕರಮೂರ್ತಿ ಮತ್ತು ಹೇಮಂತ ಶರ್ಮ ಅಂಬಾಸಿಡರ್​ ಕಾರಿನಲ್ಲಿ ರಾಯಚೂರಿನಿಂದ ಹೈದರಾಬಾದ್​ಗೆ ಹೋಗುತ್ತಿದ್ದರು. ತಗ್ಗು, ಗುಂಡಿಗಳಿಂದ ಕೂಡಿದ್ದ ಕೆಟ್ಟದಾದ ರಸ್ತೆ ಅದಾಗಿತ್ತು. ಈ ವೇಳೆ, ವಾಜಪೇಯವರು ‘‘ಈ ರಸ್ತೆ ನೋಡಿದರೆ ಏನು ಅನ್ನಿಸುತ್ತೆ ನಿನಗೆ’’ ಎಂದು ಕೇಳಿದರು. ಆಗ, ‘‘ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಕೆಟ್ಟ ಕೋಪ ಬರುತ್ತೆ, ಹೊಡೆಯಬೇಕು ಅನ್ನಿಸುತ್ತೆ’’ ಎಂದು ಉತ್ತರ ನೀಡಿದೆ.



ಕೂಡಲೇ ವಾಜಪೇಯಿಯವರು, “ಹಾಗೆಲ್ಲ ಮಾಡಬಾರದು, ಕಾನೂನು ಕೈಗೆ ತೆಗೆದುಕೊಳ್ಳಬಾರದು” ಎಂದು ಹೇಳಿದರು. ನಂತರ ಮುಂದುವರೆದು, “ಒಂದು ವೇಳೆ ನಾನು ಪ್ರಧಾನಿಯಾದರೆ ದೇಶಾದ್ಯಂತ ರಸ್ತೆ ನಿರ್ಮಾಣ ಮಾಡುತ್ತೇನೆ” ಎಂದು ಹೇಳಿದ್ದರು.

ಅಂದುಕೊಂಡಂತೆ ವಾಜಪೇಯಿಯವರು ಪ್ರಧಾನಿಯಾದ ಕೂಡಲೇ ಚತುಷ್ಪತ ರಸ್ತೆ ನಿರ್ಮಾಣಕ್ಕೆ ದಿಟ್ಟ ಹೆಜ್ಜೆಇಟ್ಟರು. 1985ರಲ್ಲಿ ಕರ್ನಾಟಕದಲ್ಲಿ ಕಂಡಿದ್ದ ಕನಸು ಅವರ ಆಡಳಿತಾವಧಿಯಲ್ಲಿ ಭಾಗಶಃ ನನಸಾಯಿತು.


ವಾಜಪೇಯಿಯವರಿಗೆ ಭಾಷಣ ಕಲೆ ಒಲಿದಿದ್ದು ಹೇಗೆ?

ಅಟಲ್​ ಬಿಹಾರಿ ವಾಜಪೇಯಿಯವರ ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿ ಪ್ರಸಿದ್ಧ ಹರಿಕಥೆ ದಾಸ. ಶ್ಯಾಮ್ ಲಾಲ್ ವಾಜಪೇಯಿಯವರು ಗ್ವಾಲಿಯರ್ ಬಳಿಯ ಬಟೇಶ್ವರ ಗ್ರಾಮದಲ್ಲಿ ನೆಲಸಿದ್ದ ಅವರ ಹರಿಕಥೆ ಕೇಳಲು ರಜೆ ದಿನಗಳಲ್ಲಿ ಅಟಲ್​ ಬಿಹಾರಿ ವಾಜಪೇಯಿ ಅಲ್ಲಿಗೆ ಹೋಗುತ್ತಿದ್ದರು. ಅಲ್ಲಿ, ರಾತ್ರಿ ಇಡೀ ಅಜ್ಜನ ಹರಿಕಥೆ ಕೇಳುತ್ತಾ, ಜತೆಗೆ ತಬಲ ಬಾರಿಸುತ್ತಾ, ಹಾರ್ಮೋನಿಯಮ್​ ನುಡಿಸುತ್ತಾ ಹರಿಕಥೆ ಕೇಳುತ್ತಿದ್ದರು.


ಅಜ್ಜನ ಹರಿಕಥೆ ಕೇಳುತ್ತಾ, ನಾನೂ ಉತ್ತಮ ಮಾತುಗಾರ ಆಗಬೇಕು ಎಂದು ವಾಜಪೇಯಿಗೆ ಆಸೆ ಹುಟ್ಟಿಕೊಂಡಿತು. ಅದಕ್ಕಾಗಿಯೇ, ವಾಜಪೇಯಿ ಬಟೇಶ್ವರ ಗ್ರಾಮದ ಯಮುನಾ ನದಿಯ ಮತ್ತೊಂದು ದಡದಲ್ಲಿರುವ ಬೆಟ್ಟಕ್ಕೆ ಹೋಗುತ್ತಿದ್ದರು. ಬೆಟ್ಟದ ಮೇಲಿನ ಈಶ್ವರನಿಗೆ ಐದು ಬಾರಿ ನಮಸ್ಕರಿಸಿ, ನದಿ ಕಡೆ ಮುಖ ಮಾಡಿ, ಕಣ್ಮುಚ್ಚಿಕೊಂಡು ತಮಗೆ ತೋಚಿದ್ದನ್ನು ಹೇಳುತ್ತಾ ಹೋಗುತ್ತಿದ್ದರು. ನನ್ನ ಕಣ್ಣ ಮುಂದೆ ಲಕ್ಷಾಂತರ ಜನ ಇದ್ದಾರೆ, ಅವರು ನನ್ನ ಮಾತು ಕೇಳುತ್ತಿದ್ದಾರೆ ಅಂದುಕೊಂಡು ಒಬ್ಬರೇ ಮಾತನಾಡುತ್ತಿದ್ದರು. ಹೀಗೆ ಅಭ್ಯಾಸ ಮಾಡಿ ಮಾಡಿ ಅವರಿಗೆ ಭಾಷಣದ ಕಲೆ ಸಿದ್ದಿಸಿತ್ತು. ಇದು ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಉತ್ತವ ವಾಕ್ಪಟು ಆಗಲು ಸಹಾಯ ಮಾಡಿತು.


ಕಾರ್ಯಾಲಯದಲ್ಲಿ ಸಂವಿಧಾನ ಪುಸ್ತಕ ಕಡ್ಡಾಯ

1982ರಲ್ಲಿ ವಾಜಪೇಯಿ ಬೆಂಗಳೂರಿಗೆ ಬಂದಾಗ ಅಂದಿನ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿಯಾಗಿದ್ದ ಹೇಮಂತ್​ ಶರ್ಮಾ ಅವರಿಗೆ ಕಾರ್ಯಾಲಯ ಹೇಗೆ ಇರಬೇಕು ಎಂದು ಕೆಲವು ಸೂಚನೆ ನೀಡಿದ್ದರು. ಕಾರ್ಯಲಯದಲ್ಲಿ ಮೊದಲಿಗೆ ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಸಂವಿಧಾನ ಪುಸ್ತಕ ಕಡ್ಡಯವಾಗಿ ಇರಲೇಬೇಕು. ಭಾರತೀಯ ದಂಡ ಸಂಹಿತೆ​ ಪುಸ್ತಕ,ಕ್ರಿಮಿನಲ್​ ಪ್ರೊಸೀಜರ್ ಪುಸ್ತಕ ಮತ್ತು ಡಿಕ್ಷನರಿ ಇರಬೇಕು ಎಂದು ಸೂಚನೆ ನೀಡಿದ್ದರು.


ಹೀಗಿತ್ತು ವಾಜಪೇಯಿ ಶಿಸ್ತಿನ ದಿನಚರಿ…

ವಾಜಪೇಯಿ ಬೆಳಗ್ಗೆ 5:30ಯಿಂದ 6 ಗಂಟೆಯ ಒಳಗೆ ಎದ್ದು, ನಿತ್ಯ ಕರ್ಮ ಮುಗಿಸಿ ಸ್ವಲ್ಪ ಹೊತ್ತು ವ್ಯಾಯಾಮ ಮಾಡುತ್ತಿದ್ದರು. ನಂತರ ಒಂದು ಲೋಟ ಬಿಸಿ ನೀರು ಕುಡಿಯುತ್ತಿದ್ದರು. ಬಳಿಕ ಚಹಾ ಸೇವಿಸಿ, ತಿಂಡಿ ತಿಂದು ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ವಾಜಪೇಯಿ ಅವರು ಇರುವ ಕೋಣೆ ಬಹಳ ಸ್ವಚ್ಛ ಮತ್ತು ಅಚ್ಚುಕಟ್ಟಾಗಿರಬೇಕೆಂದು ಬಯಸುತ್ತಿದ್ದರು. ಬಟ್ಟೆಗಳು ಇಸ್ತ್ರಿಯಾಗಿರಬೇಕು. ಗಡ್ಡ ಬಿಡುವಂತಿಲ್ಲ. ಯಾವಾಗಲೂ ಕ್ಲೀನ್​ ಶೇವ್​ ಇರಬೇಕು. ವಾಸಸ್ಥಳ ಐಷಾರಾಮಿಯಾಗಿರಬೇಕು ಎಂದು ಬಯಸುತ್ತಿರಲಿಲ್ಲ.



ವಾಜಪೇಯಿ ಮತ್ತು ಕರ್ನಾಟಕ

ವಾಜಪೇಯಿ ಬೆಂಗಳೂರಿಗೆ ಬಂದಾಗ ಕುಮಾರಕೃಪ ಅತಿಥಿ ಗೃಹದಲ್ಲಿ ಅಥವಾ ಶ್ರೀರಾಮಪುರದಲ್ಲಿರುವ ಗೋಪಿನಾಥ್​ ಎಂಬುವರ ಮನೆಯಲ್ಲಿ ಹೆಚ್ಚಾಗಿ ತಂಗುತ್ತಿದ್ದರು. ಗೋಪಿನಾಥ್​ ಅವರ ಕಾಂಟೆಸ್ಸಾ​ ಕಾರಿನಲ್ಲಿ ನಗರದಲ್ಲಿ ನಡೆಯುವ ವಿವಿಧ ಸಭೆಗಳಿಗೆ ತೆರಳುತ್ತಿದ್ದರು. ವಾಜಪೇಯವರು ಕರ್ನಾಟಕದ ಪ್ರತಿಯೊಂದು ಜಿಲ್ಲೆಗೂ ಭೇಟಿ ನೀಡಿ, ಪಕ್ಷ ಸಂಘಟನೆ ಮಾಡಿದ್ದರೆಂದು ಬೇರೆ ಹೇಳಬೇಕಾಗಿಲ್ಲವಷ್ಟೆ.


ಕರ್ನಾಟಕದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಬಿಬಿ ಶಿವಪ್ಪ, ಮಾಜಿ ಸಭಾಪತಿ ಡಿಎಚ್​ ಶಂಕರಮೂರ್ತಿ, ಮಾಜಿ ಸಂಸದ, ದಿ. ಅನಂತಕುಮಾರ್, ಮಾಜಿ ಸಿಎಂ ಬಿಎಸ್​ ಯಡಿಯೂಪ್ಪ, ಬಿಜೆಪಿಯ ಹಿರಿಯ ಮುಖಂಡರಾದ ರಾಮಚಂದ್ರೇ ಗೌಡ ಮತ್ತು ಹೇಮಂತ ಕುಮಾರ್​ ಅವರು ವಾಜಪೇಯಿಯೊಂಗೆ ನಿಕಟ ಸಂಪರ್ಕ ಹೊಂದಿದ್ದರು.

ಕರ್ನಾಟಕಕ್ಕೆ ವಾಜಪೇಯಿ ಬಂದಾಗ ಈ ಎಲ್ಲ ನಾಯಕರೊಂದಿಗೆ ರಾಜ್ಯ ಪ್ರವಾಸ ಮಾಡಿ, ಪಕ್ಷವನ್ನು ಸಂಘಟಿಸುತ್ತಿದ್ದರು. ವಾಜಪೇಯಿ ಯಾವುದೇ ಜಿಲ್ಲೆಗೆ ಹೋದರೂ ಆ ಜಿಲ್ಲೆಯ ಪ್ರತಿಯೊಂದು ಮಾಹಿತಿ ತಿಳಿದುಕೊಳ್ಳುವುದು ಅವರ ಕ್ರಮ. ಮತ್ತು ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ವಾಜಪೇಯಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಗೂ ತೆರಳಿ ಅಲ್ಲಿನ ಜನ ಮತ್ತು ಕಾರ್ಯಕರ್ತರೊಂದಿಗೆ ಬೆರೆಯುತ್ತಿದ್ದರು.


ಭೋಜನ ಪ್ರಿಯ ಅಟಲ್

ವಾಜಪೇಯಿ ಭೋಜನ ಪ್ರಿಯ. ಊಟಕ್ಕೆ ಕುಳಿತಾಗ ರೊಟ್ಟಿ, ಅನ್ನ, ಸಾರು, ಸಬ್ಜಿ, ಮೊಸರು ಮತ್ತು ಹಸಿ ತರಕಾರಿಗೆ ಅವರ ಆದ್ಯತೆ. ಕೆಲವೊಂದು ಬಾರಿ ಕೆಲಸದ ಒತ್ತಡದಲ್ಲಿ ಊಟ ಮಾಡದೆ ಕೇವಲ ಒಂದು ಲೋಟ ನೀರು, ಚಹಾ ಮತ್ತು ಬಿಸ್ಕಿಟ್​​ ತಿಂದುಕೊಂಡು 4-5 ಗಂಟೆ ಇದ್ದಿದ್ದೂ ಉಂಟು.


ಕರ್ನಾಟಕದ ಶಾವಿಗೆ ಪಾಯಸ, ತಿಳಿಸಾರು ಪಂಚಪ್ರಾಣ

ಸಿಹಿ ಪದಾರ್ಥದಲ್ಲಿ ಜಿಲೇಬಿ ಮತ್ತು ಶಾವಿಗೆ ಪಾಯಸ ವಾಜಪೇಯಿಗೆ ಅಚ್ಚುಮೆಚ್ಚು. ತಿಳಿಸಾರು (ರಸಂ) ಅಂದ್ರೆ ಮುಗಿತು, ಊಟದ ಸಮಯದಲ್ಲಿ ಎರೆಡೇರಡು ಲೋಟ ಕುಡಿದೇ ತೀರುತ್ತಿದ್ದರು ವಾಜಪೇಯಿ. ವಾಜಪೇಯಿ ಬೆಂಗಳೂರಿನಲ್ಲಿದ್ದಾಗ ಕೆಲವೊಂದು ಸಾರಿ ಸಾಯಂಕಾಲದ ಹೊತ್ತಲ್ಲಿ ಬೀದಿ ಬದಿಯ ಹೋಟೆಲ್​ಗಳಲ್ಲಿ ದೋಸೆ ತಿದ್ದಿದ್ದು ಇದೆ.


ಕರ್ನಾಟಕದಲ್ಲಿ ಆ ಸುದ್ದಿ ಕೇಳಿ ಕುಸಿದಿದ್ದ ವಾಜಪೇಯಿ!

ತುಮಕೂರು ರಸ್ತೆಯಲ್ಲಿರುವ ಹತ್ತಿರ ಇರುವ ಜಿಂದಾಲ್ ನೇಚರ್‌ಕ್ಯೂರ್ ಇನ್‌ಸ್ಟಿಟ್ಯೂಟ್​ನಲ್ಲಿ ಚಿಕಿತ್ಸೆಗೆಂದು 1984ರ ಮೇ 28ರಂದು ವಾಜಪೇಯಿ ಬೆಂಗಳೂರಿಗೆ ಬಂದಿದ್ದರು. ಇಲ್ಲಿದ್ದಕೊಂಡೆ ದೇಶದಲ್ಲಿ ನಡೆಯುವ ಎಲ್ಲ ವಿದ್ಯಮಾನಗಳ ಮಾಹಿತಿ ಸಂಗ್ರಹಿಸುತ್ತಿದ್ದರು. ನಿತ್ಯ ರಾತ್ರಿ 11:30 ಸುಮಾರಿಗೆ ಆಸ್ಪತ್ರೆಯ ಲ್ಯಾಂಡ್​ಲೈನ್ ಮೂಲಕ ಎಲ್​ಕೆ ಅಡ್ವಾಣಿ ಜೊತೆ ಪಕ್ಷದ ಬಗ್ಗೆ ಮತ್ತು ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದ್ದ ಸಮಾಚಾರಗಳ ಕುರಿತಾಗಿ ಚರ್ಚಿಸುತ್ತಿದ್ದರು.


ಈ ಸಮಯದಲ್ಲಿ ಪಂಜಾಬ್​ನಲ್ಲಿ ಖಾಲಿಸ್ತಾನರ ಹಾವಳಿ ಜೋರಾಗಿತ್ತು. ಅಲ್ಲಿಯ, ಬಿಜೆಪಿ ಮುಖಂಡರನ್ನು ಸಂಪರ್ಕಿಸಿ ಎಲ್ಲ ಮಾಹಿತಿಯನ್ನು ಪಡೆದು, ಬರೆದಿಟ್ಟುಕೊಳ್ಳುತ್ತಿದ್ದರು. ಹೀಗೆ, ಪ್ರತಿದಿನ ರಾತ್ರಿ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದರು.


ಅದು 1984 ಜೂನ್​ 5. ಆಫರೇಷನ್​ ಬ್ಲೂ ಸ್ಟಾರ್ ಸಂದರ್ಭ. ವಾಜಪೇಯಿ ಇಡೀ ರಾತ್ರಿ ಎಚ್ಚರ ಇದ್ದು, ನಸುಕಿನ ಜಾವ 3:30ರ ಸುಮಾರಿಗೆ ಎಲ್​ಕೆ ಅಡ್ವಾಣಿಗೆ ಕರೆ ಮಾಡಿ, ಏನಾಗುತ್ತಿದೆ ಎಂದು ವಿಚಾರಿಸಿದ್ದರು.


ಅತ್ತ ತಕಡೆಯಿಂದ, ಎಲ್​ಕೆ ಅಡ್ವಾಣಿಯ ಆ ಒಂದು ಮಾತು ಕೇಳಿ ವಾಜಪೇಯಿ ಆಘಾತಕ್ಕೆ ಒಳಗಿ, ಅಳಲು ಆರಂಭಿಸಿದರು. ನೋಡು ನೋಡುತ್ತಲೇ ನಿಂತಲ್ಲೇ ಕುಸಿದರು. ಈ ವೇಳೆ ಪಕದಲ್ಲೇ ಇದ್ದ ಹೇಮಂತ​ ಕುಮಾರ್​ ಕೂಡಲೆ ವಾಜಪೇಯಿ ಕೈ ಹಿಡಿದು ಕೋಣೆಯೊಳಗೆ ಕರೆದುಕೊಂಡು ಹೋಗಿ ಕೂರಿಸಿದರು. ಹಾಗೇ, ವಾಜಪೇಯಿ ನಿದ್ರೆಗೆ ಜಾರಿದರು. ಮರುದಿನ ಕೂಡ ಅಡ್ವಾಣಿ ಅವರ ಉತ್ತರ ನೆನೆಸಿಕೊಂಡು ವಾಜಪೇಯಿ ಅಳುತ್ತಲೇ ಇದ್ದರು. ಬಳಿಕ ತಮ್ಮ ಚಿಕಿತ್ಸೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಜೂನ್​ 7 ರಂದು ದೆಹಲಿಗೆ ಹಾರಿದರು. ಇಂದಿಗೂ ಕೂಡ ಅಡ್ವಾಣಿ ಹೇಳಿದ ಆ ಒಂದು ಮಾತು ನಿಗೂಢವಾಗಿಯೇ ಉಳಿದಿದೆ.


ವಂದನಕೀ ಭೂಮಿ, ಅಭಿನಂದನಕೀ ಭೂಮಿ ಘೋಷಣೆ ಮೊದಲು ಮೊಳಗಿದ್ದು ಕರ್ನಾಟಕದಲ್ಲಿ

ಯೇ ವಂದನ್ ಕೀ ಭೂಮಿ ಹೇ


ಅಭಿನಂದನ್ ಕಿ ಭೂಮಿ ಹೇ


ಯೇ ತರ್ಪಣ್ ಕೀ ಭೂಮಿ ಹೇ


ಯೇ ಅರ್ಪಣ್ ಕೀ ಭೂಮಿ


ಇಸ್ ಕಾ ಕಂಕರ್ ಕಂಕರ್ ಶಂಕರ್ ಹೇ


ಇಸ್ ಕಾ ಬಿಂದು ಬಿಂದು ಗಂಗಾ ಜಲ್ ಹೇ


ಹಮ್ ಜೀಯೇಂಗೇತೋ ಇಸ್ ಕೇ ಲಿಯೇ,


ಹಮ್ ಮರೇಂಗೇ ತೋ ಇಸ್ ಕೇ ಲಿಯೇ..


ಮರನೆ ಕೀ ಬಾದ ಹಮಾರಿ ಹಡ್ಡಿಯಾ ಗಂಗಾ ಜಲ ಮೇ ಫೇದಿಗಯಿ


ಔರ್​ ಕಿ ಸಿನೇ ದ್ಯಾನ್​ ಕೆ ಸುನಾ ಏಕಿ ಅವಾಜ ಸುನಾಯೆಗಿ ಭಾರತ್​ ಮಾ ಕೀ ಜೈ​


ಈ ಭಾಷಣವನ್ನು ವಾಜಪೇ 1984ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕರ್ತ ಸಭೆಯಲ್ಲಿ ಈ ಮಾತುಗಳನ್ನು ಹೇಳಿ ಭಾಷಣವನ್ನು ಅಂತ್ಯಗೊಳಿಸಿದ್ದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget