ರಾಜಕೀಯಕ್ಕೆ ಬಂದ ಮೇಲೆ ಅನಗತ್ಯ ಹೇಳಿಕೆ ಸ್ವೀಕರಿಸಲು ಸಿದ್ಧವಾಗಿರಬೇಕು: ಕೋರ್ಟ್

 ಕೇಂದ್ರ ಸಚಿವ ಮುರುಗನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ



ನವದೆಹಲಿ: 'ರಾಜಕೀಯಕ್ಕೆ ಧುಮುಕಿದ ವ್ಯಕ್ತಿಯು ಎಲ್ಲ ರೀತಿಯ ಅನಪೇಕ್ಷಿತ ಮತ್ತು ಅನಗತ್ಯ ಹೊಗಳಿಕೆಯ ಮಾತುಗಳನ್ನು ಸ್ವೀಕರಿಸುವುದಕ್ಕೆ ಸಿದ್ಧನಾಗಿರಬೇಕು' ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಕೇಂದ್ರ ಸಚಿವ ಎಲ್‌.ಮುರುಗನ್ ಸಲ್ಲಿಸಿರುವ ಅರ್ಜಿಯೊಂದರ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಬಿ.ಆ‌ರ್.ಗವಾಯಿ ಹಾಗೂ ಕೆ.ವಿ.ವಿಶ್ವನಾಥನ್ ಅವರಿದ್ದ ನ್ಯಾಯಪೀಠ ಈ ಮಾತು ಹೇಳಿದೆ.


2020ರ ಡಿಸೆಂಬರ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಮುರುಗನ್, ಚೆನ್ನೈ ಮೂಲದ ಮುರಸೋಳಿ ಟ್ರಸ್ಟ್‌ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದರು.


ತನ್ನ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗಿದೆ ಎಂದು ಆರೋಪಿಸಿ, ಮುರುಗನ್‌ ವಿರುದ್ಧ ಟ್ರಸ್ಟ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಮಾನನಷ್ಟ ಮೊಕದ್ದಮೆ ಕುರಿತ ವಿಚಾರಣೆಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಡೆಯಾಜ್ಞೆ ನೀಡಿತ್ತು.

ಇನ್ನೊಂದೆಡೆ, ಮುರುಗನ್ ವಿರುದ್ಧದ ಮಾನನಷ್ಟ ಮೊಕದ್ದಮೆ ವಜಾಗೊಳಿಸಲು ನಿರಾಕರಿಸಿ ಮದ್ರಾಸ್ ಹೈಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್ 5ರಂದು ಆದೇಶಿಸಿತ್ತು. ಹೈಕೋರ್ಟ್‌ನ ಈ ಆದೇಶ ಪ್ರಶ್ನಿಸಿ ಮುರುಗನ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.


ಮುರುಗನ್ ಅವರ ಅರ್ಜಿ ವಿಚಾರಣೆಯನ್ನು ಬುಧವಾರ ನಡೆಸಿದ ನ್ಯಾಯಪೀಠ, 'ನೀವು ಟ್ರಸ್ಟ್‌ನ ಹೆಸರಿಗೆ ಮಸಿ ಬಳಿಯುವ ಉದ್ದೇಶ ಹೊಂದಿರಲಿಲ್ಲ ಎಂಬುದಾಗಿ ಹೇಳಿಕೆ ನೀಡಲು ಬಯಸುವಿರಾ' ಎಂದು ಅವರ ಪರ ವಕೀಲರನ್ನು ಪ್ರಶ್ನಿಸಿತು.


ಟ್ರಸ್ಟ್‌ ಪರ ಹಾಜರಿದ್ದ ವಕೀಲರು, 'ಸಚಿವ ಸ್ಥಾನದಲ್ಲಿರುವ ವ್ಯಕ್ತಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು' ಎಂದು ನ್ಯಾಯಪೀಠಕ್ಕೆ ತಿಳಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ವಾಕ್ ಸ್ವಾತಂತ್ರ್ಯದ ವಿಷಯ ಬಂದಾಗ ಉದಾರತೆ ಬೇಕು. ನೀವು ರಾಜಕೀಯ ಪ್ರವೇಶಿಸಿದ ನಂತರ ಕೇಳಿ ಬರುವ ಎಲ್ಲ ಬಗೆಯ ಅನಪೇಕ್ಷಿತ ಹಾಗೂ ಅನಗತ್ಯ ಹೇಳಿಕೆಗಳನ್ನು ಸ್ವೀಕರಿಸಲು ಸಿದ್ಧರಾಗಿರಬೇಕು' ಎಂದಿತು.


ಆಗ, 'ನಾವು ರಾಜಕೀಯದಲ್ಲಿ ಇಲ್ಲ' ಎಂದು ಟ್ರಸ್ಟ್‌ ಪರ ವಕೀಲರು ಹೇಳಿದರು.

'ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ತಾನು ಹೊಂದಿರಲಿಲ್ಲ ಎಂಬುದಾಗಿ ಅರ್ಜಿದಾರರು (ಸಚಿವ ಮುರುಗನ್) ಹೇಳಿದ್ದಾರೆ' ಎಂದು ಟ್ರಸ್ಟ್ ವಕೀಲರನ್ನು ಉದ್ದೇಶಿಸಿ ನ್ಯಾಯಪೀಠ ಹೇಳಿತು.


“ನಿಮ್ಮ ಹೋರಾಟಗಳು ಜನರ ನಡುವೆಯೇ ನಡೆಯಬೇಕು. ನೀವು ರಾಜಕೀಯದಲ್ಲಿ ಇರಬೇಕು ಎಂದಾದಲ್ಲಿ ದಪ್ಪ ಚರ್ಮದವರಾಗಿರಬೇಕು ಎಂಬ ಮಾತೊಂದು ಮಹಾರಾಷ್ಟ್ರದಲ್ಲಿ ಚಾಲ್ತಿಯಲ್ಲಿದೆ' ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.


ಆಗ, 'ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಲು ಗುರುವಾರದವರೆಗೆ ಸಮಯಾವಕಾಶ ನೀಡಬೇಕು' ಎಂದು ಟ್ರಸ್ಟ್ ಪರ ವಕೀಲರು ಕೋರಿದರು.


ಇದಕ್ಕೆ ಒಪ್ಪಿದ ನ್ಯಾಯಪೀಠ, ವಿಚಾರಣೆಯನ್ನು ಡಿ.5ಕ್ಕೆ ಮುಂದೂಡಿತು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget