ನವದೆಹಲಿ: ಸಂವಿಧಾನವನ್ನು ಅಂಗೀಕರಿಸಿದ 75 ನೇ ವಾರ್ಷಿಕೋತ್ಸವದ ವಿಶೇಷ ಚರ್ಚೆಯ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ(ಡಿ14) ಲೋಕಸಭೆಯಲ್ಲಿ ತಮ್ಮ ಸುದೀರ್ಘ ಭಾಷಣದಲ್ಲಿ ಕಾಂಗ್ರೆಸ್ ಮತ್ತು ವಿಪಕ್ಷಗಳತ್ತ ತೀವ್ರ ವಾಗ್ದಾಳಿ ನಡೆಸಿದರು.
‘ಭಾರತದ ಸಂವಿಧಾನದ 75 ವರ್ಷಗಳ ಪ್ರಯಾಣವು ವಿಶ್ವದ ಶ್ರೇಷ್ಠ ಮತ್ತು ದೊಡ್ಡ ಪ್ರಜಾಪ್ರಭುತ್ವದ ಸ್ಮರಣೀಯ ಪ್ರಯಾಣವಾಗಿದೆ. ಇದು ನಮ್ಮ ಸಂವಿಧಾನ ರಚನೆ ಮಾಡಿದವರ ದೃಷ್ಟಿ, ಅವರ ಕೊಡುಗೆಗಳು ಮತ್ತು ಮುಂದುವರಿಯುವ ನಮ್ಮ ಸಂಕಲ್ಪವನ್ನು ಸಂಕೇತಿಸುತ್ತದೆ’ ಎಂದರು.
’75 ವರ್ಷಗಳನ್ನು ಪೂರ್ಣಗೊಳಿಸುವುದು ನಮ್ಮ ಸಂವಿಧಾನ ಮತ್ತು ಅದರ ನಿಬಂಧನೆಗಳ ಮಹತ್ವವನ್ನು ಆಚರಿಸುವ ಕ್ಷಣವಾಗಿದೆ.ನೀವೆಲ್ಲರೂ ಈ ಆಚರಣೆಯಲ್ಲಿ ಭಾಗವಹಿಸಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಭಾಗವಹಿಸಿದ ಎಲ್ಲಾ ಗೌರವಾನ್ವಿತ ಸಂಸತ್ತಿನ ಸದಸ್ಯರಿಗೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ’ ಎಂದು ಪ್ರಧಾನಿ ಮೋದಿ ಹೇಳಿದರು.
‘ಇಂದು, ಮಹಿಳೆಯರು ನಮ್ಮ ಪ್ರತಿಯೊಂದು ಯೋಜನೆಗಳ ಕೇಂದ್ರವಾಗಿದ್ದಾರೆ. ನಾವು ಸಂವಿಧಾನದ 75 ನೇ ವರ್ಷವನ್ನು ಆಚರಿಸುತ್ತಿರುವಾಗ, ಬುಡಕಟ್ಟು ಮಹಿಳೆಯೊಬ್ಬರು ಭಾರತದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುತ್ತಿರುವುದು ನಿಜವಾಗಿಯೂ ಕಾಕತಾಳೀಯವಾಗಿದೆ. ಅಷ್ಟೇ ಅಲ್ಲ, ನಮ್ಮ ಸದನದಲ್ಲಿ ಮಹಿಳಾ ಸಂಸದರ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ’ ಎಂದರು.
'ಮಹಿಳೆಯರಿಗೆ ಅವರ ಹಕ್ಕುಗಳನ್ನು ನೀಡಲು ಹಲವು ದೇಶಗಳು ದಶಕಗಳನ್ನು ತೆಗೆದುಕೊಂಡರೆ, ಭಾರತವು ನಮ್ಮ ಸಂವಿಧಾನದ ಮೂಲಕ ಮಹಿಳೆಯರಿಗೆ ಮತದಾನದ ಹಕ್ಕನ್ನು ಮೊದಲಿನಿಂದಲೂ ನೀಡಿದೆ ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ. G20 ಶೃಂಗಸಭೆಯ ಸಮಯದಲ್ಲಿ, ನಾವು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದೇವೆ ಮತ್ತು ಮಹಿಳೆಯರ ಪ್ರಗತಿಗೆ ನಮ್ಮ ಬದ್ಧತೆಯನ್ನು ಮುಂದಕ್ಕೆ ತೆಗೆದುಕೊಂಡು ‘ಮಹಿಳಾ ನೇತೃತ್ವದ ಅಭಿವೃದ್ಧಿ’ ಮೇಲೆ ಕೇಂದ್ರೀಕರಿಸಿದ್ದೇವೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತ ತನ್ನ ಸಂವಿಧಾನದ 25 ನೇ ವರ್ಷವನ್ನು ಆಚರಿಸುತ್ತಿರು ವೇಳೆ ನಮ್ಮ ದೇಶದ ಸಂವಿಧಾನವನ್ನು ಹರಿದು ಹಾಕಲಾಯಿತು. ತುರ್ತು ಪರಿಸ್ಥಿತಿ ಹೇರಲಾಯಿತು. ಸಾಂವಿಧಾನಿಕ ನಿಬಂಧನೆಗಳನ್ನು ಅಮಾನತುಗೊಳಿಸಲಾಯಿತು. ದೇಶವನ್ನು ಸೆರೆಮನೆಯಾಗಿ ಪರಿವರ್ತಿಸಲಾಯಿತು, ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಯಿತು’ ಎಂದು ಪ್ರಧಾನಿ ಕಿಡಿ ಕಾರಿದರು.
‘ಕಾಂಗ್ರೆಸ್ ನಿರಂತರವಾಗಿ ಸಂವಿಧಾನವನ್ನು ಕಡೆಗಣಿಸಿದೆ. ಸಂವಿಧಾನದ ಮಹತ್ವವನ್ನು ಕಡಿಮೆ ಮಾಡಿದೆ. ಕಾಂಗ್ರೆಸ್‌ನ ಇತಿಹಾಸವು ಇದಕ್ಕೆ ಹಲವಾರು ಉದಾಹರಣೆಗಳಿವೆ. ಈ ಹಿಂದೆ ಪಂಡಿತ್ ನೆಹರೂ ಅವರು ತಮ್ಮದೇ ಆದ ಸಂವಿಧಾನವನ್ನು ಹೊಂದಿದ್ದರು ಮತ್ತು ಆದ್ದರಿಂದ ಅವರು ಹಿರಿಯ ಗಣ್ಯರ ಸಲಹೆಯನ್ನು ಅನುಸರಿಸಲಿಲ್ಲ.
ಸುಮಾರು 6 ದಶಕಗಳಲ್ಲಿ 75 ಬಾರಿ ಸಂವಿಧಾನ ಬದಲಾಯಿತು, ದೇಶದ ಮೊದಲ ಪ್ರಧಾನಿ ಬಿತ್ತಿದ ಬೀಜಕ್ಕೆ ಮತ್ತೊಬ್ಬ ಪ್ರಧಾನಿ ಗೊಬ್ಬರ ಹಾಕಿ ನೀರುಣಿಸಿದರು, ಅವರ ಹೆಸರು ಶ್ರೀಮತಿ ಇಂದಿರಾ ಗಾಂಧಿ’ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
‘ಸಂವಿಧಾನದ 50 ನೇ ವರ್ಷಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವು 2000 ನವೆಂಬರ್ 26 ರಂದು ರಾಷ್ಟ್ರವ್ಯಾಪಿ ಆಚರಣೆಗಳನ್ನು ಆಯೋಜಿಸಿತು. ಪ್ರಧಾನ ಮಂತ್ರಿಯಾಗಿ, ಅಟಲ್ ಜಿ ಅವರು ರಾಷ್ಟ್ರೀಯ ಏಕತೆ ಮತ್ತು ಜಬ್ ಭಾಗಿದಾರಿಗೆ ಒತ್ತು ನೀಡುವ ವಿಶೇಷ ಸಂದೇಶವನ್ನು ಹರಡಿದರು.ಅವರು ಸಂವಿಧಾನದ ಆಶಯವನ್ನು ಎತ್ತಿ ತೋರಿಸಿದರು ಮತ್ತು ಅದರ ಮಹತ್ವವನ್ನು ಜನರನ್ನು ಜಾಗೃತಗೊಳಿಸಿದರು. ಅವರ ಸಂದೇಶವು ನಾಗರಿಕರನ್ನು ಸಂವಿಧಾನದ ತತ್ವಗಳನ್ನು ಅಳವಡಿಸಿಕೊಳ್ಳಲು ಮತ್ತು ಅದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಉತ್ತೇಜಿಸಿತು, ರಾಷ್ಟ್ರೀಯ ಏಕತೆ ಮತ್ತು ಸಮೃದ್ಧಿಯನ್ನು ಬಲಪಡಿಸಿತು’ ಎಂದರು.
‘ನಮ್ಮ ನೀತಿಗಳನ್ನು ಗಮನಿಸಿದರೆ, ಕಳೆದ 10 ವರ್ಷಗಳಿಂದ ದೇಶದ ಜನರು ನಮಗೆ ಸೇವೆ ಮಾಡಲು ಅವಕಾಶವನ್ನು ನೀಡಿದ ನೀತಿಗಳು ಮತ್ತು ನಿರ್ಧಾರಗಳನ್ನು ನೋಡಿದರೆ, ನಾವು ಭಾರತದ ಏಕತೆಯನ್ನು ಬಲಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಆರ್ಟಿಕಲ್ 370 ದೇಶದ ಏಕತೆಗೆ ತಡೆಗೋಡೆಯಾಗಿ ಮಾರ್ಪಟ್ಟಿತ್ತು, ಆದರೆ ದೇಶದ ಏಕತೆ ನಮ್ಮ ಆದ್ಯತೆಯಾಗಿತ್ತು, ಅದು ನಮ್ಮ ಸಂವಿಧಾನದ ಆಶಯವಾಗಿತ್ತು.ಅದಕ್ಕಾಗಿಯೇ ನಾವು 370 ನೇ ವಿಧಿಯನ್ನು ಮಣ್ಣಿನಲ್ಲಿ ಹೂತು ಹಾಕಿದ್ದೇವೆ’ ಎಂದು ಮೋದಿ ಹೇಳಿದರು.
ಸಂವಿಧಾನದ ಪುಸ್ತಕವನ್ನು ಆನೆಯ ಮೇಲೆ ಕುಳಿತ ಅಂಬಾರಿ ಮೇಲೆ ಇಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
‘1971 ರಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು ಇದ್ದರೂ ಸಂವಿಧಾನವನ್ನು ಬದಲಾಯಿಸುವ ಮೂಲಕ ಆ ನಿರ್ಧಾರವನ್ನು ರದ್ದುಗೊಳಿಸಲಾಯಿತು. ಸಾಂವಿಧಾನಿಕ ತಿದ್ದುಪಡಿಯನ್ನು 1971 ರಲ್ಲಿ ಮಾಡಲಾಯಿತು. ನಮ್ಮ ದೇಶದ ನ್ಯಾಯಾಲಯದ ರೆಕ್ಕೆಗಳನ್ನು ಕತ್ತರಿಸಲಾಯಿತು’ ಎಂದು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
‘ವೈವಿಧ್ಯತೆಯಲ್ಲಿ ಏಕತೆ ಭಾರತದ ವಿಶೇಷತೆಯಾಗಿದೆ ಮತ್ತು ಈ ದೇಶದ ಪ್ರಗತಿಯು ವೈವಿಧ್ಯತೆಯನ್ನು ಆಚರಿಸುವುದರಲ್ಲಿದೆ. ಆದರೆ ಗುಲಾಮಗಿರಿಯ ಮನಸ್ಥಿತಿಯಲ್ಲಿ ಬೆಳೆದ ಜನರು, ಭಾರತದ ಒಳಿತನ್ನು ನೋಡಲಾಗದ ಜನರು ವೈವಿಧ್ಯತೆಯಲ್ಲಿ ವಿರೋಧಾಭಾಸಗಳನ್ನು ಕಂಡುಕೊಳ್ಳುತ್ತಲೇ ಇದ್ದರು.ಅಷ್ಟೇ ಅಲ್ಲ, ನಮ್ಮ ಅಮೂಲ್ಯ ಸಂಪತ್ತಾಗಿರುವ ವೈವಿಧ್ಯತೆಯನ್ನು ಸಂಭ್ರಮಿಸುವ ಬದಲು ಆ ವೈವಿಧ್ಯದಲ್ಲಿ ವಿಷಬೀಜಗಳನ್ನು ಬಿತ್ತಿ ದೇಶದ ಏಕತೆಗೆ ಧಕ್ಕೆ ಬರುವಂತೆ ಮಾಡುವ ಪ್ರಯತ್ನಗಳು ನಡೆಸಿದರು’ ಎಂದು ವಿಪಕ್ಷಗಳತ್ತ ವಾಗ್ದಾಳಿ ನಡೆಸಿದರು.
Post a Comment
Click to see the code!
To insert emoticon you must added at least one space before the code.