ಚಂಡೀಗಢ: ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಮುಖ್ಯಸ್ಥ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ(89) (Om Prakash Chautala) ಶುಕ್ರವಾರ (ಡಿಸೆಂಬರ್ 20) ಇಹಲೋಕ ತ್ಯಜಿಸಿದ್ದಾರೆ. ಐದು ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿದ್ದ ಚೌತಾಲಾ ಅವರು ಗುರುಗ್ರಾಮ್‌ನಲ್ಲಿರುವ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಈ ವರ್ಷದ ಅಕ್ಟೋಬರ್ 5 ರಂದು ನಡೆದ ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ಓಂ ಪ್ರಕಾಶ್ ಚೌತಾಲಾ ಕೊನೆಯ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅವರು ಸಿರ್ಸಾದ ಚೌತಾಲಾ ಗ್ರಾಮದ ಮತಗಟ್ಟೆಯಲ್ಲಿ ಕಾಣಿಸಿಕೊಂಡಿದ್ದರು. ಭಾರತದ ಮಾಜಿ ಉಪಪ್ರಧಾನಿ ಚೌಧರಿ ದೇವಿ ಲಾಲ್ ಅವರ ಪುತ್ರ ಓಂ ಪ್ರಕಾಶ್ ಚೌತಾಲಾ ಅವರು ಹರಿಯಾಣದ ಏಳನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅಭಯ್ ಸಿಂಗ್ ಚೌತಾಲಾ ಅವರು ಹರಿಯಾಣದ ಎಲೆನಾಬಾದ್ ಕ್ಷೇತ್ರದ ಶಾಸಕರಾಗಿದ್ದಾರೆ ಮತ್ತು ಅಕ್ಟೋಬರ್ 2014 ರಿಂದ ಮಾರ್ಚ್ 2019 ರವರೆಗೆ ಹರಿಯಾಣ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ.
27 ಮೇ 2022ರಂದು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ನ್ಯಾಯಾಲಯವು 16 ವರ್ಷಗಳಷ್ಟು ಹಳೆಯದಾದ ಅಕ್ರಮ ಆಸ್ತಿ ಪ್ರಕರಣದಲ್ಲಿ ಚೌತಾಲಾ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಇದರಿಂದ ಅವರು 87ನೇ ವಯಸ್ಸಿನಲ್ಲಿ ಜೈಲಿಗೆ ಸೇರಿದ್ದು ದೆಹಲಿಯ ತಿಹಾರ್ ಜೈಲಿನ ಅತ್ಯಂತ ಹಿರಿಯ ಕೈದಿಯಾದರು. ಓಂ ಪ್ರಕಾಶ್ ಚೌತಾಲಾ ಅವರ ಪತ್ನಿ ಸ್ನೇಹ ಲತಾ ಅವರು ಆಗಸ್ಟ್ 2019ರಲ್ಲಿ ನಿಧನರಾದರು. ಚೌತಾಲಾ ಅವರಿಗೆ ಅಭಯ್ ಸಿಂಗ್ ಚೌತಾಲಾ ಮತ್ತು ಅಜಯ್ ಸಿಂಗ್ ಚೌತಾಲಾ ಸೇರಿದಂತೆ ಮೂವರು ಪುತ್ರಿಯರು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.
Post a Comment