ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಲಹವನ್ನು ಪರಿಹರಿಸಲು ರಾಜ್ಯ ಬಿಜೆಪಿಯಲ್ಲಿನ ಎಲ್ಲ ಬೆಳವಣಿಗೆಗಳ ಬಗ್ಗೆ ವರದಿ ನೀಡುವಂತೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರಣ್‌ಚುಗ್ ಅವರಿಗೆ ಹೈಕಮಾಂಡ್ ಆದೇಶಿಸಿದೆ.
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟಕ್ಕೆ ಅಂತ್ಯ ಕಾಣಿಸಲು ಮುಂದಾಗಿರುವ ಬಿಜೆಪಿ ಹೈಕಮಾಂಡ್, ವಾಸ್ತವಾಂಶಗಳನ್ನು ಅವಲೋಕಿಸಿ ರಾಜ್ಯ ಬಿಜೆಪಿಯಲ್ಲಿನ ಎಲ್ಲ ಬೆಳವಣಿಗೆಗಳ ಬಗ್ಗೆ ವರದಿ ನೀಡುವಂತೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರಣ್‌ಚುಗ್ ಅವರಿಗೆ ಸೂಚನೆ ನೀಡಿದೆ. ಅದರಂತೆ ತರುಣ್‌ಚುಗ್ ಅವರು ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಎಲ್ಲ ಪ್ರಮುಖ ಮುಖಂಡರುಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಯತ್ನಾಳ್ ಉಚ್ಚಾಟನೆ ಇಲ್ಲ, ಎಚ್ಚರಿಕೆ ನೀಡುವ ಸಾಧ್ಯತೆ: ರಾಜ್ಯ ಬಿಜೆಪಿ ನಾಯಕತ್ವದ ವಿರುದ್ದ ವಾಗ್ದಾಳಿ ನಡೆಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವ ಬಿಜೆಪಿ ಹೈಕಮಾಂಡ್, ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳದೇ ಅವರಿಗೆ ಎಚ್ಚರಿಕೆ ನೀಡಿ ಮುಂದೆ ಲಕ್ಷ್ಮಣ ರೇಖೆಯನ್ನು ದಾಟದಂತೆ ತಾಕೀತು ಮಾಡುವ ಸಾಧ್ಯತೆ ಇದೆ.
ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂಬ ಪಕ್ಷನಿಷ್ಠರ ಬೇಡಿಕೆಯನ್ನು ಹೈಕಮಾಂಡ್ ಪರಿಗಣಿಸುವ ಸಾಧ್ಯತೆ ಕಡಿಮೆ ಇದ್ದು, ಯತ್ನಾಳ್ ಅವರಿಗೆ ಎಚ್ಚರಿಕೆ ನೀಡಿ ಮುಂದೆ ಪಕ್ಷದ ನಾಯಕರ ವಿರುದ್ಧ ನಾಲಿಗೆ ಹರಿ ಬಿಡದಂತೆ ಕಟ್ಟೆಚ್ಚರ ವಿಧಿಸಲಿದೆ ಎಂದು ಹೇಳಲಾಗುತ್ತಿದೆ. ಯತ್ನಾಳ್ ವಿರುದ್ಧ ಶಿಸ್ತುಕ್ರಮ ಕೈಗೊಂಡರೆ ಖಟ್ಟಾ ಹಿಂದುತ್ವ ವಾದಿಗಳಲ್ಲಿ ಅಸಮಾಧಾನ ಉಂಟುಮಾಡುವ ಸಾಧ್ಯತೆಗಳು ಹೆಚ್ಚಿರುವುದರಿಂದ, ಬಿಜೆಪಿ ಹೈಕಮಾಂಡ್ ಸದ್ಯಕ್ಕೆ ಯತ್ನಾಳ್ ವಿರುದ್ಧ ಗಂಭೀರ ಕ್ರಮಕ್ಕೆ ಮುಂದಾಗದೇ ಎಚ್ಚರಿಕೆಯನ್ನಷ್ಟೇ ನೀಡಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಶಾಸಕ ಯತ್ನಾಳ್ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿದ ನಂತರ ವರಿಷ್ಠರು ಯತ್ನಾಳ್ ಅವರಿಗೆ ಪಕ್ಷದ ನಾಯಕರ ವಿರುದ್ಧ ಮಾತನಾಡದಂತೆ ತಾಕೀತು ಮಾಡಲಿದೆ ಎಂದು ಮೂಲಗಳು ಹೇಳಿವೆ.
Post a Comment