ಶಾಸಕ ಯತ್ನಾಳ್ ಅವರು ಏನೇ ಮಾತನಾಡಿದ್ರು ಸಹ ಒಟ್ಟಿಗೆ ಹೋಗಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಬಿಎಸ್ವೈ ಹೇಳಿದರು.
ಶಿವಮೊಗ್ಗ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊರಗಿನವರಲ್ಲ, ಅವರು ಆಕ್ರೋಶಗೊಂಡಿರಬಹುದು, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕೆಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರೂ ಆಗಿರುವ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಜೊತೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಅಪೇಕ್ಷೆ ಸಹ ಅದೇ ಆಗಿದೆ. ಏನೇ ಕೊರತೆಗಳಿದ್ರು ಎದುರು ಕುಳಿತುಕೊಂಡು ಮಾತನಾಡಿ ಬಗೆಹರಿಸಿಕೊಂಡು ಒಟ್ಟಾಗಿ ಹೋಗಬೇಕೆಂಬುದು ನನ್ನ ಅಭಿಪ್ರಾಯ. ಅದಕ್ಕೆ ಎಲ್ಲರೂ ಸಹಕರಿಸುತ್ತಾರೆಂದು ನಾನು ಭಾವಿಸಿರುವೆ. ಅವರು ಏನೇ ಮಾತನಾಡಿದ್ರು ಸಹ ಪಕ್ಷಕ್ಕೆ ಡ್ಯಾಮೇಜ್ ಆಗದ ರೀತಿಯಲ್ಲಿ ಒಟ್ಟಿಗೆ ಹೋಗಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.
ಇ.ಡಿ ಪುರಾವೆ ಇಲ್ಲದೆ ಮಾತನಾಡಲ್ಲ: ಮುಡಾ ಸೇರಿದಂತೆ ಇತರೆ ಹಗರಣಗಳು ಹೊರ ಬರುತ್ತಿವೆ. ಮುಡಾದ ಪೂರ್ಣ ಹಗರಣವನ್ನು ಮಾಧ್ಯಮಗಳಲ್ಲೇ ಭಿತ್ತರವಾಗಿದೆ. ಒಂದು ಸಾರಿ ಅಪರಾಧ ಮಾಡಿ ಸೈಟ್ ವಾಪಸ್ ಕೊಡೋದು ಬಿಡೋದು ಬೇರೆ ವಿಷಯವಾಗಿದೆ. ಕೇವಲ ಅಷ್ಟೇ ಅಲ್ಲ, ಸಾವಿರಾರು ಸೈಟುಗಳನ್ನು ಕಾನೂನು ಬಾಹಿರವಾಗಿ ಹಂಚಿದ್ದಾರೆಂದು ತಿಳಿಸಿದ್ದಾರೆ. ಇನ್ನು ಇಡಿ ಅವರು ಪುರಾವೆಗಳಿಲ್ಲದೆ ಹೇಳುವುದಿಲ್ಲ. ಏನೇನೂ ಆಗುತ್ತದೆ ನೋಡೋಣ ಎಂದರು.
ಸದನದಲ್ಲಿ ಬಿಜೆಪಿಯಿಂದ ಹೋರಾಟ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದ ಕುರಿತು ಪ್ರತಿಕ್ರಿಯಿಸಿ, ನಮ್ಮ ಶಾಸಕರೆಲ್ಲರೂ ಸದನದಲ್ಲಿ ಭಾಗವಹಿಸುತ್ತಾರೆ. ಸರ್ಕಾರದ ವೈಫಲ್ಯದ ವಿರುದ್ಧ ಜಾಗೃತಿ ಮೂಡಿಸುವಂತಹ ಕೆಲಸವನ್ನು ಎಲ್ಲ ಶಾಸಕರು ಒಟ್ಟಾಗಿ ಮಾಡುತ್ತಾರೆ ಎಂದು ಹೇಳಿದರು.
ಯತ್ನಾಳ್ಗೆ ನೋಟಿಸ್ ಕೊಟ್ಟಿದ್ದ ಬಿಜೆಪಿ ಶಿಸ್ತು ಸಮಿತಿ; ಪಕ್ಷದ ಆಂತರಿಕ ವಿಷಯ ಹಾಗೂ ನಾಯಕರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿ ಹೇಳಿಕೆ ನೀಡುತ್ತ ಬಂದಿದ್ದಾರೆ. ಇದರಿಂದ ಪಕ್ಷದ ಇಮೇಜ್ಗೆ ಧಕ್ಕೆ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಅವರ ಬೆಂಬಲಿಗರು ಪಕ್ಷದ ಶಿಸ್ತು ಸಮಿತಿಗೆ ಕ್ರಮ ಕೈಗೊಳ್ಳುವಂತೆ ಇತ್ತೀಚೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಶಿಸ್ತು ಸಮಿತಿ ಯತ್ನಾಳ್ ಅವರಿಗೆ ಕಾರಣ ಕೇಳಿ ನೋಟಿಸ್ ಕಳಿಸಿತ್ತು.
ದೆಹಲಿಯಲ್ಲಿ ಬೀಡು ಬಿಟ್ಟಿರುವ ಯತ್ನಾಳ್ ಅಂಡ್ ಟೀಂ: ಈ ಮಧ್ಯೆ ತಮಗೆ ಶಿಸ್ತು ಸಮಿತಿ ನೀಡಿರುವ ನೋಟಿಸ್ಗೆ ಯತ್ನಾಳ್ 6 ಪುಟಗಳ ಉತ್ತರವನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಹರೀಶ್ ಬಿ ಪಿ, ಕುಮಾರ ಬಂಗಾರಪ್ಪ, ಮಾಜಿ ಸಂಸದ ಜಿ ಎಂ ಸಿದ್ದೇಶ್ವರ್ ಸೇರಿದಂತೆ ಕೆಲ ನಾಯಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ತಂಡ ರಾಜ್ಯಾದ್ಯಂತ ಪ್ರತ್ಯೇಕವಾಗಿ ವಕ್ಫ್ ಬೋರ್ಡ್ ನೀಡಿರುವ ನೋಟಿಸ್ ವಿರುದ್ಧ ಜನಜಾಗೃತಿ ಯಾತ್ರೆಯನ್ನು ಕೈಗೊಂಡಿದೆ.
Post a Comment