ಸಂಭಾಲ್ (ಉತ್ತರ ಪ್ರದೇಶ): ಇಲ್ಲಿನ ದೀಪ್‌ಸರಾಯ್ ಪ್ರದೇಶದಲ್ಲಿರುವ ಸಂಭಾಲ್ ಸಂಸದ ಜಿಯಾ ಉರ್ ರೆಹಮಾನ್ ಅವರ ಮನೆಯಲ್ಲಿ ರಾಜ್ಯ ಇಂಧನ ಇಲಾಖೆ ಅಧಿಕಾರಿಗಳು ಮಂಗಳವಾರ ಹಳೆಯ ವಿದ್ಯುತ್ ಮೀಟರ್ ತೆಗೆದು ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಸಿದರು. ಈ ವೇಳೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಸಂಭಾಲ್‌ನ ಧಾರ್ಮಿಕ ಸ್ಥಳಗಳಲ್ಲಿ ಮಿನಿ ವಿದ್ಯುತ್ ಕೇಂದ್ರಗಳು ಕಾರ್ಯಾಚರಿಸುತ್ತಿವೆ ಎಂದು ಸಿಎಂ ಯೋಗಿ ಆದಿತ್ಯನಾಥ ಅವರು ವಿಧಾನಸಭೆಯಲ್ಲಿ ಹೇಳಿದ ಒಂದೇ ದಿನದಲ್ಲಿ ಈ ಬೆಳವಣಿಗೆ ನಡೆದಿರುವುದು ವಿಶೇಷ. ದೀಪ್‌ಸರಾಯ್ ಪ್ರದೇಶದಲ್ಲಿ ಇನ್ನೂ ಹಲವು ಮನೆಗಳಿಗೆ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆ ನಡೆಯಲಿದೆ ಎಂದು ಸಂಭಾಲ್‌ನ ವಿದ್ಯುತ್ ಇಲಾಖೆ ಅಧಿಕಾರಿ ಸಂತೋಷ ತ್ರಿಪಾಠಿ ತಿಳಿಸಿದ್ದಾರೆ. 'ಹಳೇ ಮೀಟರ್ ತೆಗೆದು ಹೊಸದು ಅಳವಡಿಸಲಾಗಿದೆ. ಇದರಲ್ಲಿ ವಿಶೇಷವಾದದ್ದು ಏನೂ ಇಲ್ಲ' ಎಂದು ಸಂಸದ ಜಿಯಾ ಉರ್ ರೆಹಮಾನ್ ಅವರ ತಂದೆ ಮಾಮ್ಲುಕ್ ರೆಹಮಾನ್ ಪ್ರತಿಕ್ರಿಯಿಸಿದ್ದಾರೆ.
ಸಂಭಾಲ್‌ನ ಅನೇಕ ಮಸೀದಿಗಳಲ್ಲಿ ಅಕ್ರಮವಾಗಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲಾಗಿದ್ದು, ಅಲ್ಲಿಂದ ಉಚಿತವಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ರಾಜ್ಯದಲ್ಲಿ ವಿದ್ಯುತ್ ಸಾಗಣೆ ನಷ್ಟ ಶೇ. 30 ಕ್ಕಿಂತ ಕಡಿಮೆ ಇದ್ದರೆ, ಸಂಭಾಲ್‌ನ ದೀಪ್‌ಸರಾಯ್ ಹಾಗೂ ಮಿಯಾಸರಾಯ್ ಭಾಗದಲ್ಲಿ ಕ್ರಮವಾಗಿ ಶೇ. 78 ಮತ್ತು ಶೇ. 82 ಇದೆ ಎಂದೂ ಸಿಎಂ ಆದಿತ್ಯನಾಥ ಹೇಳಿದ್ದರು. ಕೋಮುಗಲಭೆಗಳ ಹಿನ್ನೆಲೆಯಲ್ಲಿ 1978ರಿಂದ ಮುಚ್ಚಲ್ಪಟ್ಟಿದ್ದ, ಸಂಭಾಲ್‌ನ ಶಾಹಿ ಜಾಮಾ ಮಸೀದಿಗೆ ಸನಿಹದಲ್ಲಿನ ಭಸ್ಮ ಭಾಸ್ಕರ ದೇವಸ್ಥಾನ ಇತ್ತೀಚೆಗೆ ಪತ್ತೆಯಾಗಿದ್ದು ಇಲ್ಲಿ ಉಲ್ಲೇಖನೀಯ.
Post a Comment