'ಭಾಷಣದಿಂದ ದೇಶ ಕಟ್ಟಲು ಸಾಧ್ಯವಿಲ್ಲ, ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಬೇಕೆಂದವರು ವಾಜಪೇಯಿ'

 ಭಾರತರತ್ನ ದಿ.ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮ ವಾರ್ಷಿಕೋತ್ಸವ ಹಾಗೂ ಸುಶಾಸನ ದಿನದ ಪ್ರಯುಕ್ತ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.



ಬೆಂಗಳೂರು: "ಮಾತಿನಿಂದ, ಭಾಷಣದಿಂದ ದೇಶ ಕಟ್ಟಲು ಆಗುವುದಿಲ್ಲವೆಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳುತ್ತಿದ್ದರು. ಪಕ್ಷದೊಳಗೂ ಕೂಡಾ ಅಂತರಿಕ ಪ್ರಜಾಪ್ರಭುತ್ವ ಇರಬೇಕು ಅಂತಾ ಹೇಳಿದವರು ವಾಜಪೇಯಿ" ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಹೇಳಿದರು.

ಮಾಜಿ ಪ್ರಧಾನಿ, ಭಾರತರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ವರ್ಷದ ಜನ್ಮದಿನದ ಸ್ಮರಣಾರ್ಥ ಹಾಗೂ ಸುಶಾಸನ ದಿನದ ನಿಮಿತ್ತ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಹಮ್ಮಿಕೊಂಡಿದ್ದ ಪ್ರದರ್ಶಿನಿ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

"ಅಧಿಕಾರಕ್ಕಾಗಿ ತತ್ವ, ಸಿದ್ಧಾಂತಗಳನ್ನು ಎಂದೂ ವಾಜಪೇಯಿ ರಾಜಿ ಮಾಡಿಕೊಳ್ಳಲಿಲ್ಲ. ಸಾಮಾನ್ಯ ಜನರ ಜೊತೆಗೆ ಸಂಬಂಧ ಇಟ್ಟುಕೊಂಡು ಹೋಗುವ ಕೆಲಸ ಮಾಡಬೇಕು ಅಂತಾ ವಾಜಪೇಯಿ ಹೇಳಿದ್ದರು. ವಾಜಪೇಯಿ ಅವರು ಹೇಳಿದ ನೈತಿಕತೆ ಮತ್ತು ನಡವಳಿಕೆ ಇಂದಿ‌ನ ರಾಜಕೀಯಕ್ಕೆ ಸೂಕ್ತ" ಎಂದು ಅಭಿಪ್ರಾಯಪಟ್ಟರು.


"ಇಂದು ಒಬ್ಬ ರಾಜಕಾರಣಿ ಆಗಬೇಕು ಅಂದರೆ ಸೂಟ್‌ಕೇಸ್ ಇರಬೇಕು, ಅವನ ಹಿಂದೆ ಹತ್ತು ಜನ ಇರಬೇಕು. ಹಸಿವು ಬಹಳ ಜಾಸ್ತಿಯಾದರೆ ನಮಗೆ ಅನ್ನದ ಬೆಲೆ ಗೊತ್ತಾಗುತ್ತದೆ. ನಾವು ಪ್ರಚಾರಪ್ರಿಯರಾಗುವುದಕ್ಕಿಂತ ವಿಚಾರಪ್ರಿಯರಾಗಬೇಕು. ಯಾವುದೋ ಒಂದು ಪ್ರಮಾಣ ವಚನ ಸ್ವೀಕಾರ ಮಾಡುವುದರಿಂದ ಎಲ್ಲವೂ ಸರಿಯಾಗುವುದಿಲ್ಲ. ಇಂದು ಚುನಾವಣಾ ಪ್ರಚಾರ ಸಭೆಗೆ ಒಂದಷ್ಟು ಜನ ಬರುತ್ತಾರೆ, ಒಂದಷ್ಟು ಜನರನ್ನು ಬಾಡಿಗೆಗೆ ಕರೆದು ತರುತ್ತೇವೆ. ಇಂದು ಪ್ರಚಾರ ಸಭೆಗೆ ಇನೋವಾ ಕಾರುಗಳು, ಎಸ್ಕಾರ್ಟ್​ಗಳು ಎಲ್ಲಾ ಇರುತ್ತದೆ. ನಾನು ಸುಳ್ಯದಲ್ಲಿ ಜಿಲ್ಲಾ ಪರಿಷತ್ ಚುನಾವಣೆಗೆ ನಿಂತಾಗ ನನ್ನ ಪರವಾಗಿ ಭಾಷಣ ಮಾಡಲು ಅಂದು ಕೆಎಸ್​ಆರ್​ಟಿಸಿ ಬಸ್​ನಲ್ಲಿ ಬಂದು ರಾಮಚಂದ್ರೇಗೌಡರು ಭಾಷಣ ಮಾಡಿದ್ದರು" ಎಂದು ನೆನಪಿಸಿಕೊಂಡರು.

"ನಮ್ಮ ಪಕ್ಷ ಒಂದಷ್ಟು ಸರಿದಾರಿಯಲ್ಲಿ ಹೋಗಬೇಕು. ಈಗ ಬೇರೆ ಬೇರೆ ದಾರಿಯಲ್ಲಿ ಹೋಗುತ್ತಿದೆ. ವಿಧಾನಸೌಧದ ಕಡೆಗೆ ನಾವು ಹೋಗಬೇಕು. ಅಧ್ಯಕ್ಷರ ನೇತೃತ್ವದಲ್ಲಿ ಅದೆಲ್ಲವೂ ಆಗಬೇಕು" ಎಂದು ಪಕ್ಷದ ಆಂತರಿಕ ಕಚ್ಚಾಟ ಬಗ್ಗೆ ಪ್ರಸ್ತಾಪಿಸಿ ವಿಜಯೇಂದ್ರ ಅವರಿಗೆ ಕಿವಿಮಾತು ಹೇಳಿದರು.


"ಸಂವಿಧಾನ ಹಿಡಿದುಕೊಂಡು ಓಡಾಡುವ, ಅಂಬೇಡ್ಕರ್​ ಕುರಿತು ಘೋಷಣೆ ಕೂಗುವವರ ಸಂಖ್ಯೆ ಇಂದು ಹೆಚ್ಚಾಗಿದೆ. ಸಂವಿಧಾನದ ಒಳಗಡೆ ಆಶಯ ಏನಿದೆ ಎಂದು ಅವರು ನೋಡಿಲ್ಲ. ಜನಪ್ರತಿನಿಧಿಗಳು ಇಂದು ತಮ್ಮ ನಡವಳಿಕೆ ಮತ್ತು ಪ್ರಮಾಣವಚನಕ್ಕೆ ಸಂಬಂಧ ಇದೆಯೇ ಎಂದು ಆತ್ಮಾವಲೋಕನ ಮಾಡಬೇಕಿದೆ" ಎಂದರು.


ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, "ವಾಜಪೇಯಿಯವರು ಈ ದೇಶದ ಪ್ರಧಾನಿ ಆಗುತ್ತಾರೆಂದು ಜವಾಹರಲಾಲ್ ನೆಹರೂ ಅವರು ಹೇಳಿದ್ದರು. ಭೌತಿಕವಾಗಿ ಅಟಲ್‍ಜೀ ನಮ್ಮ ಜೊತೆ ಇಲ್ಲದಿದ್ದರೂ ಅವರು ಈ ದೇಶದಲ್ಲಿ ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿದ್ದಾರೆ" ಎಂದು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, "ವಾಜಪೇಯಿ ಅವರು ಒಬ್ಬ ಕವಿ, ಸಹೃದಯಿ, ಒಬ್ಬ ರಾಜಕಾರಣಿ, ಒಬ್ಬ ಕಾರ್ಯಕರ್ತನಾಗಿ, ಒಬ್ಬ ನಾಯಕನಾಗಿ ಸದಾಕಾಲಕ್ಕೂ ಅವರ ನೆನಪುಗಳು ನಮ್ಮ ಜೊತೆ ಇರುವಂತೆ ಜೀವನ ನಡೆಸಿದ್ದಾರೆ. ಪಾಂಚಜನ್ಯದ ಉಪ ಸಂಪಾದಕರಾಗಿದ್ದ ವಾಜಪೇಯಿಯವರು ರಾಜಕೀಯಕ್ಕೆ ಬಂದದ್ದೇ ಆಕಸ್ಮಿಕ. ನಿಷೇಧಿತ ಔಷಧಿ ಕೊಟ್ಟು ಬಾಣಂತಿಯರನ್ನು ಕೊಲ್ಲುವುದು ಸುಶಾಸನ ಅಲ್ಲ. ಒಂದು ರೂಪಾಯಿ ದೆಹಲಿಯಿಂದ ಹಾಕಿದರೆ 15 ಪೈಸೆ ಹಳ್ಳಿಗೆ ತಲುಪುವುದು ಸುಶಾಸನ ಅಲ್ಲ. ಟೆಕ್ನಾಲಜಿ ಹಿಂದೆಯೂ ಇತ್ತು. ಅದರ ಬಳಕೆಯನ್ನು ಆರಂಭಿಸಿದ್ದು ವಾಜಪೇಯಿಯವರು; ಮುಂದುವರೆಸಿದ್ದು ನರೇಂದ್ರ ಮೋದಿಯವರು" ಎಂದರು.


ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, "ನೊಂದವರ ಕಣ್ಣೀರೊರೆಸುವ ಕಾರ್ಯವನ್ನು ಮೌನವಾಗಿಯೇ ಮಾಡುವುದನ್ನು ಸುಶಾಸನ ದಿನ ಎಂದು ಕರೆಯುತ್ತೇವೆ. ಆರ್ಭಟ ಮಾಡದೇ ಜನರ ಕಣ್ಣೀರನ್ನು ಒರೆಸಿ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ. ಕರ್ನಾಟಕದಲ್ಲಿ ಸುಶಾಸನ ಇಲ್ಲ; ಅದು ದುಶ್ಶಾಸನ ಆಗಿದೆ. ಇದು ನಮಗೆ ಬೇಕೇ? ಅಮಿತ್ ಶಾ ಅವರು ಅಂಬೇಡ್ಕರರಿಗೆ ನಿರಂತರ ಅವಮಾನ ಮಾಡಿದ ಕಾಂಗ್ರೆಸ್‍ನ ಮುಖವಾಡ ಕಳಚಿದ್ದಾರೆ" ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯರು ಮತ್ತು ಮಾಜಿ ಸಚಿವ ರಾಮಚಂದ್ರ ಗೌಡ ಅವರನ್ನು ಸನ್ಮಾನಿಸಲಾಯಿತು.


ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವ ಮತ್ತು ಶಾಸಕ ಎನ್.ಮುನಿರತ್ನ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಸಿ.ಮಂಜುಳಾ, ಸುಶಾಸನ ದಿನದ ರಾಜ್ಯ ಸಹ-ಸಂಚಾಲಕ ಜಗದೀಶ್ ಹಿರೇಮನಿ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ ಹಾಗೂ ಪಕ್ಷದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget