ಅನಾರೋಗ್ಯಕ್ಕೆ ತುತ್ತಾಗಿದ್ದ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ನವದೆಹಲಿ: ತಬಲಾ ವಾದನದಿಂದ ವಿಶ್ವವನ್ನೇ ಬೆರಗು ಮೂಡಿಸಿದ್ದ 'ಮಾಂತ್ರಿಕ' ಜಾಕಿರ್ ಹುಸೇನ್ ಅವರು ಹೃದಯ ಸಂಬಂಧಿ ಸಮಸ್ಯೆ ತುತ್ತಾಗಿ ಭಾನುವಾರ ರಾತ್ರಿ ಅಮೆರಿಕದಲ್ಲಿ ನಿಧನರಾದರು. ಪ್ರಖ್ಯಾತ ಶಾಸ್ತ್ರೀಯ ಸಂಗೀತಗಾರನ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಸೋಮವಾರ ದೃಢಪಡಿಸಿದೆ. ಈ ಮೊದಲು ಅವರ ಪಿಆರ್ಒ ಪಿಆರ್ಒ ಮೃತಪಟ್ಟಿಲ್ಲ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಭಾನುವಾರ ತಿಳಿಸಿದ್ದರು. ಅಂತಿಮವಾಗಿ ಅವರ ಕುಟುಂಬ ವರ್ಗ ಹುಸೇನ್ ನಿಧನರಾಗಿದ್ದಾರೆ ಎಂದು ದೃಢಪಡಿಸಿದೆ.
"ಕಳೆದ ಎರಡು ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ನಂತರ ಅವರು ಅಸ್ವಸ್ಥರಾಗಿದ್ದು, ಐಸಿಯುನಲ್ಲಿ ದಾಖಲಾಗಿದ್ದರು. ನಾವೆಲ್ಲರೂ ಅವರ ಪರಿಸ್ಥಿತಿಯ ಬಗ್ಗೆ ಚಿಂತಿತರಾಗಿದ್ದೇವೆ" ಎಂದು ಅವರ ಸ್ನೇಹಿತ ಮತ್ತು ಕೊಳಲು ವಾದಕ ರಾಕೇಶ್ ಚೌರಾಸಿಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅವರು ಇಹಲೋಕ ತ್ಯಜಿಸಿದ್ದಾರೆ.
ಹೃದಯ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಅವರನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ತಬಲಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ 73 ವರ್ಷದ ಸಂಗೀತಗಾರನಿಗೆ ರಕ್ತದೊತ್ತಡ ಸಮಸ್ಯೆ ಉಂಟಾಗಿತ್ತು ಎಂದು ಹುಸೇನ್ ಅವರ ಮ್ಯಾನೇಜರ್ ನಿರ್ಮಲಾ ಬಚಾನಿ ಹೇಳಿದ್ದಾರೆ.
ಸಂಗೀತ ಲೋಕದ ದಿಗ್ಗಜನ ಅಗಲಿಕೆಗೆ ಕಂಬನಿ: ಭಾರತೀಯ ಶಾಸ್ತ್ರಿಯ ಸಂಗೀತ ಲೋಕದ ದಿಗ್ಗಜನ ಅಗಲಿಕೆಗೆ ಉದ್ಯಮಿ ಗೌತಮ್ ಅದಾನಿ, ಆನಂದ್ ಮಹೀಂದ್ರಾ, ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಶಿವರಾಜ್ ಸಿಂಗ್ ಚೌಹಾಣ್ ಸೇರಿದಣತೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಸಾಧಕ ದೈತ್ಯನ ಸಾಧನೆಯ ಹಾದಿ: ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾ ಅವರ ಹಿರಿಯ ಮಗನಾಗಿರುವ ಜಾಕಿರ್ ಹುಸೇನ್ ಅವರು ತಮ್ಮ ತಂದೆಯ ಹೆಜ್ಜೆಗಳನ್ನು ಅನುಸರಿಸಿದರು. ಭಾರತ ಸೇರಿದಂತೆ ವಿಶ್ವದಲ್ಲಿಯೇ ತಬಲಾ ವಾದನವನ್ನು ಪ್ರಖ್ಯಾತಿಗೆ ತಂದರು. ಹುಸೇನ್ ತಮ್ಮ ವೃತ್ತಿಜೀವನದಲ್ಲಿ ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ 66ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಮೂರು ಪ್ರಶಸ್ತಿ ಗೆದ್ದಿದ್ದರು.
ತಾಳವಾದ್ಯ ಮಾಂತ್ರಿಕ ಹುಸೇನ್ ಅವರು, ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾಗಿದ್ದು, ಅವರಿಗೆ 1988 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಅರಸಿ ಬಂದಿವೆ.
Post a Comment