ಚುನಾವಣಾ ಬಾಂಡ್ ಅಕ್ರಮ ಆರೋಪ: ನಿರ್ಮಲಾ, ನಡ್ಡಾ, ವಿಜಯೇಂದ್ರ ಮತ್ತಿತರ ವಿರುದ್ಧದ FIR ರದ್ದು

 ಚುನಾವಣಾ ಬಾಂಡ್‌ ಹೆಸರಲ್ಲಿ ಸುಲಿಗೆ ಆರೋಪದಲ್ಲಿ ಎಂದು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್,‌ ಜೆ.ಪಿ.ನಡ್ಡಾ ಸೇರಿದಂತೆ ಮತ್ತಿತರರ ವಿರುದ್ದ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್‌ ರದ್ದುಗೊಳಿಸಿದೆ.



ಬೆಂಗಳೂರು: ಜಾರಿ ನಿರ್ದೇಶನಾಲಯವನ್ನು(ಇ.ಡಿ.) ದುರ್ಬಳಕೆ ಮಾಡಿಕೊಂಡು ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಜೆ.ಪಿ.ನಡ್ಡಾ, ವಿಜಯೇಂದ್ರ ಸೇರಿದಂತೆ ಮತ್ತಿತರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಅನ್ನು ಹೈಕೋರ್ಟ್ ಇಂದು ರದ್ದುಪಡಿಸಿತು.


ಎಫ್‌ಐಆರ್ ರದ್ದುಪಡಿಸಬೇಕೆಂದು ಕೋರಿ 4ನೇ ಆರೋಪಿಯಾದ ಮಾಜಿ ಸಂಸದ ಹಾಗೂ ಬಿಜೆಪಿಯ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.



ಅರ್ಜಿದಾರರ ವಾದವೇನು?: ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಐಪಿಸಿ ಸೆಕ್ಷನ್ 384ರ ವ್ಯಾಖ್ಯಾನವು ಪ್ರತಿಯೊಂದು ಪ್ರಕರಣದ ವಾಸ್ತವಿಕ ವಿಚಾರದ ಮೇಲೆ ಬದಲಾಗುವುದಿಲ್ಲ. ಸಂತ್ರಸ್ತರು ನ್ಯಾಯಾಲಯದ ಮುಂದೆ ಬಂದಿಲ್ಲ. ಈ ಪ್ರಕರಣದಲ್ಲಿನ ದೂರುದಾರರಿಗೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ, ಇಲ್ಲಿ ಸುಲಿಗೆ ವಿಚಾರ ಅನ್ವಯಿಸುವುದಿಲ್ಲ. ರಂಜನೆಗಾಗಿ ಪ್ರಕರಣವನ್ನು ಪರಿಗಣಿಸಲಾಗದು ಎಂದರು.

ದೂರುದಾರರ ಪರ ವಕೀಲರು ಹೇಳಿದ್ದೇನು?: ಅರ್ಜಿ ಸಂಬಂಧ ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ ದೂರುದಾರರ ಪರ ವಕೀಲರು, ದೂರಿನಲ್ಲಿನ ಆರೋಪವು ಸುಲಿಗೆಗೆ ಸೂಕ್ತ ಉದಾಹರಣೆಯಾಗಿದೆ. ಸುಲಿಗೆಗೆ ಗುರಿಯಾಗಿರುವ ವ್ಯಕ್ತಿಯೂ ಅಪರಾಧದಿಂದ ಲಾಭ ಪಡೆದಿದ್ದಾರೆ. ಬಿಜೆಪಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿದ ಬಳಿಕ ಅವರ ವಿರುದ್ಧ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯ ತನಿಖೆ ನಿಲ್ಲಿಸಲಾಗಿದೆ. ಈ ಕಾರಣಕ್ಕಾಗಿ ಅವರು ದೂರು ನೀಡಿಲ್ಲ ಎಂದು ತಿಳಿಸಿದ್ದರು.


ಪ್ರಕರಣದ ವಿವರ: ಬೆಂಗಳೂರಿನ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷ ಆದರ್ಶ್ ಆರ್. ಐಯ್ಯರ್ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಜೆ.ಪಿ.ನಡ್ಡಾ, ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 384 (ಸುಲಿಗೆ), 120ಬಿ (ಕ್ರಿಮಿನಲ್ ಪಿತೂರಿ) ಜೊತೆಗೆ 34ರ ಅಡಿ ಪ್ರಕರಣ ದಾಖಲಿಸಲು ತಿಲಕ್ ನಗರ ಪೊಲೀಸರಿಗೆ ಆದೇಶಿಸಿತ್ತು. ಇದರನ್ವಯ ಎಫ್‌ಐಆರ್ ದಾಖಲಾಗಿತ್ತು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget