ರೈತರು ಬಳಸುವ ನೀರಿಗೆ ಶೇ.1ರಷ್ಟು ಹಣ ಪಾವತಿಸಿದರೆ ಅನುಕೂಲ: ಡಿಸಿಎಂ ಡಿ.ಕೆ.ಶಿವಕುಮಾರ್

 ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ-2025 ಮೇಳವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರಂಭಗೊಂಡಿದೆ.



ಬೆಂಗಳೂರು: ''ರೈತರು ಬಳಸುವ ನೀರಿಗೆ ಶೇ. 1ರಷ್ಟು ಹಣವನ್ನು ಪಾವತಿಸಿದರೆ ಅನುಕೂಲವಾಗುತ್ತದೆ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.


ಅರಮನೆ ಮೈದಾನದಲ್ಲಿ ಆರಂಭಗೊಂಡಿರುವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ-2025ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಈ ಹಿಂದೆ ನೀರಿಗೆ ಹಣವನ್ನು ಪಾವತಿಸಲಾಗುತ್ತಿತ್ತು. ಇತ್ತೀಚೆಗೆ ನೀರಿಗೆ ಹಣ ಕಟ್ಟುವುದನ್ನು ಬಿಟ್ಟಿದ್ದೇವೆ. ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಹಲವು ಯೋಜನಾ ಕಾರ್ಯಕ್ರಮಗಳಲ್ಲಿ ಸಹಾಯಧನ ಸಿಗುತ್ತಿದೆ'' ಎಂದು ಹೇಳಿದರು.


''ಮಹಾರಾಷ್ಟ್ರದಲ್ಲಿ ನೀರಿನ ದರ ನಿಗದಿ ಮಾಡುವ ಸಂಬಂಧ ವಿಧೇಯಕವನ್ನು ತರುತ್ತಿದ್ದಾರೆ. ಅದಕ್ಕೆ ಗೌರವ ಕೊಡುವ ಕೆಲಸವಾಗಬೇಕು. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ನೀರನ್ನು ರೈತರು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ'' ಎಂದರು.ಕರ್ನಾಟಕವು ಐಟಿ-ಬಿಟಿ ನವೋದ್ಯಮದಲ್ಲಿ ಮಾತ್ರ ಮುಂಚೂಣಿಯಲ್ಲಿ ಇಲ್ಲ. ಹಾಲು ಉತ್ಪಾದನೆ, ಹೂ, ಹಾಗೂ ಸಿರಿಧಾನ್ಯಗಳ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿದೆ'' ಎಂದ ಅವರು, ''ದನಕರು, ಕುದುರೆಗಳಿಗೆ ಮೊದಲು ಸಿರಿಧಾನ್ಯ ಬಳಕೆ ಮಾಡಲಾಗುತ್ತಿತ್ತು. ಈಗ ದೊಡ್ಡ ದೊಡ್ಡ ಮಾಲ್​ಗಳಲ್ಲೂ ಪವಿತ್ರ ಧಾನ್ಯ ಎಂಬ ರೀತಿ ಬಿಂಬಿಸುವ ಪರಿಸ್ಥಿತಿ ಬಂದಿದೆ. ಬೆಳೆಯುವ ರೈತರು ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ಮಾಡಬೇಕಿದೆ. ಆರೋಗ್ಯಕ್ಕೂ ಸೂಕ್ತವಾಗಿರುವುದರಿಂದ ಸಾವಯವ ಮತ್ತು ಸಿರಿಧಾನ್ಯ ಕೃಷಿಗೆ ಹೆಚ್ಚಿನ ಮಹತ್ವ, ಉತ್ತೇಜನ ನೀಡಲಾಗುತ್ತಿದೆ'' ಎಂದು ತಿಳಿಸಿದರು.

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ''ರೋಗನಿರೋಧಕ ಶಕ್ತಿಯುಳ್ಳ ಆಹಾರವಾಗಿರುವ ಸಿರಿಧಾನ್ಯವು ಈ ಹಿಂದೆ ಬಡವರ ಆಹಾರವಾಗಿತ್ತು. ಈಗದು ಉಳ್ಳವರ ಆಹಾರವಾಗಿದೆ ಎಂದು ತಿಳಿಸಿದರು. ಶೇ.10ರಷ್ಟಿದ್ದ ಸಿರಿಧಾನ್ಯ ಮತ್ತು ಸಾವಯವ ಬೆಳೆಯುವ ಪ್ರದೇಶ ಈಗ ಶೇ.25ಕ್ಕೆ ಹೆಚ್ಚಳವಾಗಿದೆ. ಸಿರಿಧಾನ್ಯಗಳ ಉತ್ಪಾದನೆಗೆ ಉತ್ತೇಜನ ನೀಡಲು ರೈತಸಿರಿ ಯೋಜನೆ ಮೂಲಕ ರೈತರಿಗೆ ಸಹಾಯಧನ ನೀಡಲಾಗುತ್ತಿದ್ದು, ಈ ಯೋಜನೆಯಡಿ 104 ಕೋಟಿ ರೂ. ಅನುದಾನ ನೀಡಲಾಗಿದೆ'' ಎಂದರು.

ಸಿರಿಧಾನ್ಯ ಹಬ್ ನಿರ್ಮಾಣ: ''ಹೆಬ್ಬಾಳದಲ್ಲಿ ಸಿರಿಧಾನ್ಯ ಹಬ್ ನಿರ್ಮಾಣ ಮಾಡಲು 20 ಕೋಟಿ ರೂ. ವೆಚ್ಚದಲ್ಲಿ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇಲ್ಲಿ ಸಿರಿಧಾನ್ಯ ಉತ್ಪನ್ನಗಳ ತರಬೇತಿ, ಮಾಹಿತಿ ಎಲ್ಲವೂ ಸಿಗಲಿದೆ. ಸಿರಿಧಾನ್ಯ ಉತ್ಪಾದನೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಪ್ರತೀ ವರ್ಷವೂ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗುತ್ತಿದೆ. ಇದರಿಂದ ಮಾರುಕಟ್ಟೆ ವ್ಯವಸ್ಥೆಯ ವಿಸ್ತರಣೆಗೆ ಅನುಕೂಲವಾಗಲಿದೆ. ಈ ಮೇಳದಲ್ಲಿ 20 ರಾಜ್ಯಗಳ ಪ್ರತಿನಿಧಿಗಳು, ರೈತರು, ಅಧಿಕಾರಿಗಳು, 10ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು, 60ಕ್ಕೂ ಹೆಚ್ಚು ತಜ್ಞರು ಭಾಗವಹಿಸಿದ್ದಾರೆ'' ಎಂದು ಹೇಳಿದರು.


''1,400 ಕೋಟಿ ರೂ.ಗಳನ್ನು ಯಂತ್ರೋಪಕರಣಕ್ಕಾಗಿ ಬಳಕೆ ಮಾಡಲಾಗುತ್ತಿದೆ. ಕೊಯ್ಲೋತ್ತರ ನಿರ್ವಹಣೆಗಾಗಿ ಸಹಾಯಧನ 50 ಲಕ್ಷ ರೂ.ಗಳವರೆಗೂ ದೊರೆಯಲಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

''ಕೃಷಿ ಇಲಾಖೆಯಲ್ಲಿ ಖಾಲಿ ಇದ್ದ 950 ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ. ಸರ್ಕಾರ ಕೃಷಿ ಕ್ಷೇತ್ರಗಳ ಉತ್ತೇಜನಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಪ್ರಗತಿಪರ ರೈತರು ಉತ್ತಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಸಮಗ್ರ ಕೃಷಿ ಮಾಡಿದರೆ ನೆಮ್ಮದಿ ಸಾಧ್ಯ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಹೆಚ್ಚು-ಹೆಚ್ಚು ಸಿರಿಧಾನ್ಯ ಬೆಳೆದು ಹಾಗೂ ಮಾರುಕಟ್ಟೆ ವಿಸ್ತರಣೆ ಮಾಡಲು ಉತ್ತೇಜನ ನೀಡಲಾಗುತ್ತಿದೆ'' ಎಂದು ಹೇಳಿದರು.


ಈ ಸಂದರ್ಭದಲ್ಲಿ ಹೊಸದುರ್ಗ ಶಾಸಕ ಹಾಗೂ ಸಿರಿಧಾನ್ಯ ಬೆಳೆಗಾರರಾದ ಗೋವಿಂದಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಭೈರತಿ ಸುರೇಶ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಾರ್ಖಂಡ್ ರಾಜ್ಯದ ಕೃಷಿ ಸಚಿವೆ ಶಿಲ್ಪಿ ನೇಹಾ ಟಿರ್ಕೆ,ಕೆಫೆಕ್ ಅಧ್ಯಕ್ಷ ಹರೀಶ್ ಸೇರಿದಂತೆ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget