ಕುಂಭಮೇಳ ಜಗತ್ತಿನಲ್ಲೇ ಅತೀ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾಗಿದೆ. ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಪ್ರತಿ 12ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಹೀಗೆ ಭಾರತದಲ್ಲಿ ಕುಂಭಮೇಳ ನಡೆಯುವ ನಾಲ್ಕು ಪವಿತ್ರ ಸ್ಥಳಗಳಿವೆ. ಅವು ಯಾವುದೆಂದರೆ ಪ್ರಯಾಗ್ ರಾಜ್, ಹರಿದ್ವಾರ, ಉಜ್ಜೈನ್ ಹಾಗೂ ನಾಸಿಕ್. ಈ ವರ್ಷ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ನಡೆಯುತ್ತಿದೆ.
144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳ!
2025ರ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವುದು ಮಹಾಕುಂಭ ಮೇಳ…ಇದು 144 ವರ್ಷಗಳಿಗೊಮ್ಮೆ ಬರುವ ಅತ್ಯಪರೂಪದ ಘಟನೆಯಾಗಿದೆ. ಗ್ರಹಮಂಡಲ, ನಕ್ಷತ್ರಗಳ ಅಪರೂಪದ ಖಗೋಳ ಕೌತುಕದಲ್ಲಿ 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ ಜರಗುತ್ತದೆ. ಅದು 2025ರಲ್ಲಿ ನಡೆಯುತ್ತಿರುವುದು ವಿಶೇಷತೆಯಾಗಿದೆ.
ಮಹಾಕುಂಭ ಮೇಳದಲ್ಲಿ ಜಗತ್ತಿನಾದ್ಯಂತದಿಂದ ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಭಾಗವಹಿಸಿ ಪವಿತ್ರ ಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ. ಗಂಗಾ, ಯುಮುನಾ ಹಾಗೂ ಅದೃಶ್ಯವಾಗಿ ಹರಿಯುತ್ತಿದ್ದಾಳೆಂಬ ಸರಸ್ವತಿ ನದಿಯ ಸಂಗಮವೇ ತ್ರಿವೇಣಿ ಸಂಗಮ! ಈ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲಾ ತೊಳೆದು ಹೋಗಿ ಮೋಕ್ಷ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ನೂರಾರು ವರ್ಷಗಳಿಂದ ಚಾಲ್ತಿಯಲ್ಲಿದೆ.
ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ 44ಕ್ಕೂ ಅಧಿಕ ದಿನಗಳ ಕಾಲ ನಡೆಯಲಿರುವ ಮಹಾಕುಂಭ ಮೇಳವು ಮಕರ ಸಂಕ್ರಾಂತಿ (ಜನವರಿ 14)ಯಂದು ಆರಂಭಗೊಳ್ಳಲಿದ್ದು, ಫೆ.26ರ ಮಹಾ ಶಿವರಾತ್ರಿಯಂದು ಸಮಾಪ್ತಿಯಾಗಲಿದೆ.
ಭಾರತದಲ್ಲಿನ ನಾಲ್ಕು ವಿಧದ ಕುಂಭಮೇಳ:
1)ಕುಂಭ ಮೇಳ (ನಾಲ್ಕು ವರ್ಷಗಳಿಗೊಮ್ಮೆ)
2)ಅರ್ಧ ಕುಂಭ ಮೇಳ (6 ವರ್ಷಗಳಿಗೊಮ್ಮೆ)
3)ಪೂರ್ಣ ಕುಂಭ ಮೇಳ (12 ವರ್ಷಗಳಿಗೊಮ್ಮೆ)
4)ಮಹಾಕುಂಭ ಮೇಳ (144 ವರ್ಷಗಳಿಗೊಮ್ಮೆ)
ಕುಂಭ, ಅರ್ಧ ಕುಂಭ, ಮಹಾಕುಂಭದ ನಡುವಿನ ವ್ಯತ್ಯಾಸವೇನು?
ಕುಂಭಮೇಳ:
ಕುಂಭಮೇಳ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಕುಂಭಮೇಳ ನಾಲ್ಕು ಸ್ಥಳಗಳ ನಡುವೆಯೇ ಸುತ್ತುತ್ತಿರುತ್ತದೆ. ಅವು ಹರಿದ್ವಾರ, ಪ್ರಯಾಗ್ ರಾಜ್, ಉಜ್ಜೈನ್ ಹಾಗೂ ನಾಸಿಕ್. ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರು, ಸಾಧು, ಸಂತರು ಭಾಗಿಯಾಗಿ ಪವಿತ್ರ ನದಿಯಲ್ಲಿ ಸ್ನಾನ ಮಾಡುವ ಮೂಲಕ ತಮ್ಮ ಪಾಪಗಳಿಂದ ಮುಕ್ತಿ ಹೊಂದುತ್ತಾರೆ ಎಂಬುದು ನಂಬಿಕೆ.
ಕುಂಭಮೇಳದ ಸ್ಥಳಗಳು ಹಾಗೂ ಪವಿತ್ರ ನದಿಗಳು:
ಹರಿದ್ವಾರ- ಉತ್ತರಾಖಂಡ್ ನಲ್ಲಿ ಗಂಗಾನದಿಯ ದಡದಲ್ಲಿದೆ.
ಉಜ್ಜೈನ್, ಮಧ್ಯಪ್ರದೇಶ ಶಿಪ್ರಾ ನದಿ ದಡದಲ್ಲಿದೆ.
ನಾಸಿಕ್, ಮಹಾರಾಷ್ಟ್ರ ಗೋದಾವರಿ ನದಿ ದಡದಲ್ಲಿದೆ.
ಪ್ರಯಾಗ್ ರಾಜ್, ಉತ್ತರಪ್ರದೇಶ ಗಂಗಾ, ಯಮುನಾ ಮತ್ತು ಅದೃಶ್ಯದ ಸರಸ್ವತಿ ನದಿಯನ್ನು ಒಳಗೊಂಡ ತ್ರಿವೇಣಿ ಸಂಗಮವನ್ನು ಹೊಂದಿದೆ.
ಅರ್ಧ ಕುಂಭಮೇಳ:
ಅರ್ಧ ಕುಂಭಮೇಳ ಪ್ರತಿ 6 ವರ್ಷಗಳಿಗೊಮ್ಮೆ ಪ್ರಯಾಗ್ ರಾಜ್ ಮತ್ತು ಹರಿದ್ವಾರ್ ದಲ್ಲಿ ಮಾತ್ರ ನಡೆಯುತ್ತದೆ. ಅರ್ಧ ಕುಂಭಮೇಳದ ಘಟನೆಯ ಮುಖ್ಯ ಮಹತ್ವವೆಂದರೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದಾಗಿದೆ.
ಪೂರ್ಣಕುಂಭ ಮೇಳ:
ಪೂರ್ಣ ಕುಂಭಮೇಳ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಪ್ರಕ್ರಿಯೆಯಾಗಿದೆ. ಇದು ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತದೆ. ನಕ್ಷತ್ರ, ಗ್ರಹಮಂಡಲದ ಮಂಗಳಕರ ಸಂಯೋಜನೆಯ ಲೆಕ್ಕಾಚಾರದ ಆಧಾರದಲ್ಲಿ ಪೂರ್ಣಕುಂಭ ಮೇಳದ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ.
ಮಹಾಕುಂಭ ಮೇಳ:
12 ಪೂರ್ಣ ಕುಂಭ ಮೇಳದ ಆಚರಣೆಯ ನಂತರ 144 ವರ್ಷಗಳಿಗೊಮ್ಮೆ ಈ ಮಹಾಕುಂಭ ಮೇಳ ನಡೆಯುತ್ತದೆ. ಹೌದು ಈಗಾಗಲೇ 12 ಪೂರ್ಣಕುಂಭ ಮೇಳ ನಡೆದಿದ್ದು, 2025 ಅತ್ಯಪರೂಪದ ಮಹಾಕುಂಭಮೇಳಕ್ಕೆ ಸಾಕ್ಷಿಯಾಗಿದ್ದು, ಈ ಕುಂಭಮೇಳದಲ್ಲಿ ಪವಿತ್ರ ಸ್ನಾನಕ್ಕೆ ಭಕ್ತರು ಹೆಚ್ಚಿನ ಮಹತ್ವ ನೀಡುತ್ತಾರೆ ಎಂಬುದು ವಿಶೇಷ.
ಕುಂಭಮೇಳದ ಸಂದರ್ಭದಲ್ಲಿ ಪೇಶ್ವಾಯಿ ಎಂದು ಕರೆಯಲ್ಪಡುವ ಅಖಾರಗಳ ಸಾಂಪ್ರದಾಯಿಕ ಮೆರವಣಿಗೆ ಸೇರಿದಂತೆ ಹಲವಾರು ಸಂಭ್ರಮಕ್ಕೆ ಭಕ್ತರು ಸಾಕ್ಷಿಯಾಗಲಿದ್ದಾರೆ. ಆನೆ, ಕುದುರೆಗಳ ಸಾಲಿನ ನಡುವೆ ರಥದಲ್ಲಿ ಕತ್ತಿ ಛಳಪಿಳಿಸುತ್ತಾ ನಾಗಾ ಸಾಧುಗಳು ಆಗಮಿಸಿ ಶಾಹಿ ಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ. ಮಹಾಕುಂಭ ಮೇಳದಲ್ಲಿ ನಡೆಯಲಿರುವ ಸಾಂಸ್ಕೃತಿಕ ಚಟುವಟಿಕೆ ಲಕ್ಷಾಂತರ ಭಕ್ತರ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತದೆ.
ಶಾಹಿ ಸ್ನಾನ ಯಾವಾಗ ನಡೆಯುತ್ತದೆ?
ಜನವರಿ 13( ಪುಷ್ಯ ಪೂರ್ಣಿಮಾ ಸ್ನಾನ)
ಜನವರಿ 15 (ಮಕರ ಸಂಕ್ರಾಂತಿ ಸ್ನಾನ)
ಜನವರಿ 29(ಮೌನಿ ಅಮಾವಾಸ್ಯೆ ಸ್ನಾನ-ಶಾಹಿ ಸ್ನಾನ)
ಫೆಬ್ರುವರಿ 03(ಬಸಂತ್ ಪಂಚಮಿ ಸ್ನಾನ-ಶಾಹಿ ಸ್ನಾನ)
ಫೆಬ್ರುವರಿ 12(ಮಾಘಿ ಹುಣ್ಣಿಮೆ ಸ್ನಾನ
ಫೆಬ್ರುವರಿ 26(ಮಹಾ ಶಿವರಾತ್ರಿ ಸ್ನಾನ (ಮಹಾಕುಂಭ ಮೇಳ ಮುಕ್ತಾಯ)
ಮಾಘ ಮೇಳ:
ಮಾಘ ಮೇಳವನ್ನು ಚೋಟಾ ಕುಂಭ ಎಂದೇ ಕರೆಯಲಾಗುತ್ತದೆ. ಇದು ಪ್ರಯಾಗ್ ರಾಜ್ ನಲ್ಲಿ ಮಾತ್ರ ವಾರ್ಷಿಕವಾಗಿ ನಡೆಯುತ್ತದೆ. ಇದನ್ನು ಹಿಂದೂ ಪಂಚಾಂಗದ ಪ್ರಕಾರ ಮಾಘ ಮಾಸದಲ್ಲಿ ಆಯೋಜಿಸಲಾಗುತ್ತದೆ. ಇದು ಜನವರಿ-ಫೆಬ್ರುವರಿ ನಡುವೆ ಚೋಟಾ ಕುಂಭ ಮೇಳ ನಡೆಯುತ್ತದೆ.
ಕುಂಭಮೇಳದ ದಿನಾಂಕ ಹೇಗೆ ನಿರ್ಧರಿಸುತ್ತಾರೆ?
ಜ್ಯೋತಿಷಿಗಳು ಹಾಗೂ ವಿವಿಧ ಅಖಾರಗಳ ಮುಖಂಡರು ಒಟ್ಟು ಸೇರಿ ಗುರು ಗ್ರಹ ಮತ್ತು ಸೂರ್ಯನ ಸ್ಥಾನವನ್ನು ಪರಿಶೀಲಿಸಿ ಕುಂಭಮೇಳ ನಡೆಯುವ ಸ್ಥಳ ಮತ್ತು ದಿನಾಂಕವನ್ನು ನಿರ್ಧರಿಸುತ್ತಾರೆ. ಗುರು ಗ್ರಹ ಮತ್ತು ಸೂರ್ಯ ಎರಡೂ ಕೂಡಾ ಜ್ಯೋತಿಷ್ಯ ಶಾಸ್ತ್ರದ ಪ್ರಮುಖ ಗ್ರಹಗಳಾಗಿವೆ. ಗುರು ಹಾಗೂ ಸೂರ್ಯನ ಸ್ಥಾನಗಳ ಆಧಾರದ ಮೇಲೆ ಕುಂಭಮೇಳದ ದಿನಾಂಕ , ಸ್ಥಳ ನಿಗದಿಪಡಿಸಲಾಗುತ್ತದೆ.
Post a Comment