ಎಚ್‌ಎಂಟಿ, ಮೈಸೂರು ರಾಜವಂಶಸ್ಥರ ವಶದಲ್ಲಿರುವ ₹17,311 ಕೋಟಿ ಆಸ್ತಿ: ವಶಕ್ಕೆ ಯತ್ನ

 ಎಚ್‌ಎಂಟಿ ಹಾಗೂ ಮೈಸೂರು ರಾಜವಂಶಸ್ಥರ ವಶದಲ್ಲಿರುವ ಒಟ್ಟು ₹17,311 ಕೋಟಿ ಮೌಲ್ಯದ ಆಸ್ತಿಯನ್ನು ತನ್ನ ಸ್ವಾಧೀನಕ್ಕೆ ಪಡೆಯಲು ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ. ಎರಡು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲು ಗುರುವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಬೆಂಗಳೂರು: ಎಚ್‌ಎಂಟಿ ಸ್ವಾಧೀನದಲ್ಲಿರುವ ₹14,300 ಕೋಟಿ ಮೌಲ್ಯದ 180 ಎಕರೆ ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಹಿಂಪಡೆಯಲು ಅಗತ್ಯ ಕ್ರಮ ಜರುಗಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಸಂಪುಟ ಸಭೆ ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು, ಎಚ್‌ಎಂಟಿಗೆ ನೀಡಲಾಗಿದ್ದ 443 ಎಕರೆ ಜಮೀನಿನ ಪೈಕಿ 160 ಎಕರೆ ಪ್ರದೇಶವನ್ನು ಸರ್ಕಾರಿ ಮತ್ತು ಖಾಸಗಿಯವರಿಗೆ ಮಾರಾಟ ಅಥವಾ ಲೀಸ್‌ ಆಧಾರದಲ್ಲಿ ಈಗಾಗಲೇ ಪರಭಾರೆ ಮಾಡಲಾಗಿದೆ. ಆ ಬಳಿಕ 180 ಎಕರೆ ಪ್ರದೇಶದಲ್ಲಿ ಅರಣ್ಯದ ಯಾವುದೇ ಲಕ್ಷಣ ಇಲ್ಲದೇ ಇರುವುದರಿಂದ ಡಿನೋಟಿಫಿಕೇಷನ್ ಮಾಡಲು ಅನುಮತಿ ಕೋರಿ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಾಪಸ್ ಪಡೆಯಲಾಗುವುದು ಎಂದು ತಿಳಿಸಿದರು.


ಎಚ್‌ಎಂಟಿ ವ್ಯಾಪ್ತಿಯಲ್ಲಿರುವ 180 ಎಕರೆ ಅರಣ್ಯ ಭೂಮಿಯ ಡಿನೋಟಿಫಿಕೇಶನ್‌ಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು 2015ರಲ್ಲಿ ಸಚಿವ ಸಂಪುಟದ ಪೂರ್ವಾನುಮತಿ ಪಡೆಯದೇ ಮತ್ತು ಉನ್ನತ ಮಟ್ಟದ ಸಮಿತಿಯ ಅನುಮೋದನೆ ಪಡೆಯದೇ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಾಪಸ್‌ ಪಡೆಯುವುದರ ಜತೆಗೆ, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಮಧ್ಯಂತರ ಅರ್ಜಿಯನ್ನು ಹಿಂದಕ್ಕೆ ಪಡೆಯುವ ವಿಚಾರದಲ್ಲಿ ಅರಣ್ಯ ಸಚಿವರು ತೆಗೆದುಕೊಂಡಿರುವ ನಿರ್ಣಯಕ್ಕೆ ಸಂಪುಟ ಸಭೆ ಘಟನೋತ್ತರ ಮಂಜೂರಾತಿ ನೀಡಿದೆ ಎಂದು ಹೇಳಿದರು.

2015ರಲ್ಲಿ ಅಂದಿನ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯ ಹಲವು ಸಭೆಗಳಲ್ಲಿ ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯ ಕುರಿತು ಚರ್ಚೆ ನಡೆಸಲಾಗಿತ್ತು. 2018ರ ಜುಲೈ 17ರಂದು ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡಾವಳಿಯಲ್ಲಿ, 'ಇನ್ನೂ ಹಸಿರು ಹೊದಿಕೆಯನ್ನು ಹೊಂದಿದ ಅರಣ್ಯ ಭೂಮಿಯನ್ನು ಎಚ್‌ಎಂಟಿ ಸಂಸ್ಥೆ ಮಾರಾಟ ಮತ್ತು ಹರಾಜು ಮಾಡುತ್ತಿದ್ದು, ಇದು ಬೆಂಗಳೂರಿನ ಶ್ವಾಸಕೋಶದಂತಹ ಸ್ಥಳವಾಗಿದೆ. ಅಲ್ಲಿ ಹಸಿರು ಉಳಿಸುವುದು ಅಗತ್ಯ' ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು.


2020ರ ಜುಲೈ 15ರಂದು ನಡೆದ ಸಭೆಯಲ್ಲಿ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆಗೆ ಸಲ್ಲಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರು. ಆದರೆ, ಅಧಿಕಾರಿಗಳು ಸಚಿವ ಸಂಪುಟ ಸಭೆಗೆ ತರದೇ, ತಮ್ಮಷ್ಟಕ್ಕೇ ತಾವೇ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಕಾಯ್ದಿರಿಸಿದ ಅರಣ್ಯ ಭೂಮಿ ಡಿನೋಟಿಫೈ ಮಾಡಲು ಮಧ್ಯಂ


ತರ ಅರ್ಜಿ ಸಲ್ಲಿಸಿರುವುದು ಕರ್ತವ್ಯ ಲೋಪ ಎಂದು ಪಾಟೀಲ ಹೇಳಿದರು.ಎಚ್‌ಎಂಟಿ ಸಂಸ್ಥೆಯು ಈ ಎಲ್ಲಾ ಭೂಮಿಯನ್ನು ಇತರೆ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿರುವುದರಿಂದ ರಾಜ್ಯಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗುತ್ತದೆ ಮತ್ತು ಬೆಂಗಳೂರಿಗರು ಅಮೂಲ್ಯ ಹಸಿರು ಪ್ರದೇಶವನ್ನು ಕಳೆದುಕೊಂಡಂತೆ ಆಗುತ್ತದೆ ಎಂದು ಕಾನೂನು ಇಲಾಖೆ ಅಭಿಪ್ರಾಯ ನೀಡಿದೆ ಎಂದು ಅವರು ತಿಳಿಸಿದರು.


ಅರಮನೆ ಮಾಲೀಕತ್ವ ವಿಷಯ ಸತ್ಯ: 'ಸುಪ್ರೀಂ'ಗೆ ಮನವಿ


ಬೆಂಗಳೂರು ಅರಮನೆಯನ್ನು ವಶಪಡಿಸಿಕೊಂಡಿರುವ 1997ರ ಕಾಯ್ದೆಯ ಸಿಂಧುತ್ವವನ್ನು ಎತ್ತಿ ಹಿಡಿಯಲು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ತುರ್ತು ವಿಚಾರಣೆ ನಡೆಸಿ, ಪ್ರಕರಣವನ್ನು ಬೇಗನೆ ಇತ್ಯರ್ಥ ಪಡಿಸಬೇಕು ಎಂದು ಮನವಿ ಸಲ್ಲಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.


ಸುಪ್ರೀಂ ಕೋರ್ಟ್ 2024ರ ಡಿಸೆಂಬ‌ರ್ 10ರಂದು ನೀಡಿದ ತೀರ್ಪಿನ ಪ್ರಕಾರ ಬೆಂಗಳೂರು ಅರಮನೆ ಮೈದಾನಕ್ಕೆ ಸೇರಿದ 15 ಎಕರೆ 17.5 ಗುಂಟೆ ಜಮೀನು ಉಪಯೋಗಿಸಿಕೊಳ್ಳುವುದಕ್ಕೆ ನಿಗದಿಪಡಿಸಿದ ಟಿಡಿಆ‌ರ್ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ದರದ ಬಗ್ಗೆ ಸಚಿವ ಸಂಪುಟ ಇಂದು ವಿಸ್ತ್ರತವಾಗಿ ಚರ್ಚಿಸಿತು. ನ್ಯಾಯಾಂಗ ನಿಂದನೆ ಅರ್ಜಿಯ ವಿಷಯದಲ್ಲಿ ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು ಎಂದರು.

ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಬಳ್ಳಾರಿ ರಸ್ತೆಯ ಬದಿಯಲ್ಲಿ ಪ್ರತಿ ಚದರ ಮೀಟರ್‌ಗೆ ₹2,83,500 ಮತ್ತು ಜಯಮಹಲ್ ರಸ್ತೆಯ ಕಡೆ ಪ್ರತಿ ಚದರ ಮೀಟರ್‌ಗೆ ₹2,04,000ರಂತೆ ಒಟ್ಟು ₹3,011 ಕೋಟಿ ಟಿಡಿಆರ್ ಪಾವತಿಸಬೇಕು. ಇದು ಸರ್ಕಾರಕ್ಕೆ ಆರ್ಥಿವಾಗಿ ಹೊರೆ ಆಗುತ್ತದೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅಪೀಲು ಸಲ್ಲಿಸಿದರೂ ಅದನ್ನು ತಿರಸ್ಕರಿಸಲಾಗಿದೆ ಎಂದು ಎಚ್‌.ಕೆ.ಪಾಟೀಲ ತಿಳಿಸಿದರು.


ಕರ್ನಾಟಕ ರಾಜ್ಯವು ಬೆಂಗಳೂರು ಅರಮನೆ (ಭೂಸ್ವಾಧೀನ ಮತ್ತು ವರ್ಗಾವಣೆ) ಅಧಿನಿಯಮ, 1996ರ ಕಾಯ್ದೆಯನ್ನು 1996ರ ನವೆಂಬರ್ 21ರಂದು ಜಾರಿ ಮಾಡಲಾಗಿತ್ತು. ಅದರ ಪ್ರಕಾರ, ಬೆಂಗಳೂರು ಅರಮನೆಗೆ ಸೇರಿದ ಎಲ್ಲಾ ಸ್ಥಿರ- ಚರ ಸ್ವತ್ತುಗಳ ಎಲ್ಲಾ ವಿಧವಾದ ಹಕ್ಕುಗಳು ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಡುತ್ತದೆ.


ರಾಜವಂಶಸ್ಥರು ಈ ಕಾಯ್ದೆಯನ್ನು ಪ್ರಶ್ನಿಸಿ 1997ರಲ್ಲಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಈ ಕಾಯ್ದೆಯನ್ನು ಎತ್ತಿ ಹಿಡಿದಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿತ್ತು. ಇದೀಗ ಪ್ರಕರಣವನ್ನು ತುರ್ತಾಗಿ ಇತ್ಯರ್ಥಗೊಳಿಸಲು ಮನವಿ ಮಾಡಲಾಗುವುದು. ಮಾಲೀಕತ್ವದ ಪ್ರಶ್ನೆಯು ಇತ್ಯರ್ಥವಾಗುವವರೆಗೆ ಟಿಡಿಆರ್ ಪ್ರಕರಣವನ್ನು ಕಾನೂನು ಪ್ರಕಾರ ನಿರ್ವಹಿಸಲು ಸಚಿವ ಸಂಪುಟ ನಿರ್ದೇಶನ ನೀಡಲಾಗಿದೆ ಎಂದರು.

ಅರಮನೆ ಆವರಣದಲ್ಲಿ ಚಟುವಟಿಕೆಗೆ ನಿರ್ಬಂಧ

ಸುಪ್ರೀಂ ಕೋರ್ಟ್‌ 2000ರ ಆದೇಶ ಉಲ್ಲಂಘಿಸಿ ಬೆಂಗಳೂರು ಅರಮನೆ ಮೈದಾನದಲ್ಲಿ ಸುಮಾರು 2 ಲಕ್ಷ ಚದರ ಮೀಟರ್ ವ್ಯಾಪ್ತಿಯಲ್ಲಿ ಕಾಯಂ ಕಟ್ಟಡ ಗಳನ್ನು ನಿರ್ಮಿಸಿರುವ ಮಹಾರಾಜರ ಉತ್ತರಾಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ.

15 ದಿನಗಳಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ನೋಟಿಸ್‌ ಜಾರಿ ಮಾಡಲಾಗಿದೆ. ಅಲ್ಲಿ ಯಾವುದೇ ಚಟುವಟಿಕೆಗೆ ಅನುಮತಿ ನೀಡದಿರಲು ತೀರ್ಮಾನಿಸಲಾಗಿದೆ ಎಂದು ಎಚ್.ಕೆ.ಪಾಟೀಲ ಹೇಳಿದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget