ಸಿಎಂ ರೇಸ್ 2028ಕ್ಕೆ ನೋಡೋಣ, ರೈಟ್ ಸದ್ಯ ಮುಂದಕ್ಕೆ ಹೋಗೋಣ : ಡಾ. ಎಚ್.ಸಿ. ಮಹದೇವಪ್ಪ

 ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ, ಇದೊಂದು ಮುಗಿದ ಅಧ್ಯಾಯ. 2028ಕ್ಕೆ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆಗ, ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡೋಣ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಮಹದೇವಪ್ಪ ಹೇಳಿದ್ದಾರೆ.



ಮೈಸೂರು : ಭಾರೀ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದ್ದ ಮುಖ್ಯಮಂತ್ರಿ ಕೇಸ್ ವಿಚಾರ ಸದ್ಯದ ಮಟ್ಟಿಗೆ ಇತ್ಯರ್ಥವಾದಂತೆ ಕಾಣುತ್ತಿದೆ. ಇದರ ಮುನ್ಸೂಚನೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್, ಮೂರು ದಿನಗಳ ಹಿಂದೆಯೇ ನೀಡಿದ್ದರು. ಇದಕ್ಕೆ, ಪೂರಕ ಎನ್ನುವಂತೆ ಸಚಿವ ಡಾ. ಮಹದೇವಪ್ಪ ಹೇಳಿಕೆಯನ್ನು ನೀಡಿದ್ದಾರೆ.

ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಭಾರೀ ಪೈಪೋಟಿ ನಡೆಯುತ್ತಿದ್ದು, ಆ ಪಕ್ಷದ ಒಳಜಗಳ ಬೀದಿಗೆ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್, ರಾಜ್ಯ ಕಾಂಗ್ರೆಸ್ಸಿನಲ್ಲಿ ಕೊತಕೊತ ಕುದಿಯುತ್ತಿದ್ದ ಬಣ ರಾಜಕೀಯಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಈ ನಡುವೆ ನಗರದಲ್ಲಿ ಮಾತನಾಡುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹದೇವಪ್ಪ, " ಐದು ವರ್ಷ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿರುತ್ತದೆ, ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಭದ್ರವಾಗಿರಲಿದ್ದಾರೆ. ಈ ಬಗ್ಗೆ ಏನೂ ಗೊಂದಲ ಬೇಡ" ಎಂದು ಹೇಳಿದ್ದಾರೆ.

ಸಿಎಂ ಬದಲಾವಣೆ, ಕೆಪಿಸಿಸಿಗೆ ನೂತನ ಸಾರಥಿ ಮತ್ತು ಜಾತಿಗಣತಿಯ ಬಗ್ಗೆ ನಮ್ಮಲ್ಲಿ ಏನೂ ಗೊಂದಲಗಳಿಲ್ಲ. ಇದೆಲ್ಲಾ ಬಿಜೆಪಿ ಸೃಷ್ಟಿಸುತ್ತಿರುವ ಆವಾಂತರ, ಎಲ್ಲಾ ವಿಷಯಗಳ ಬಗ್ಗೆ ಸೂಕ್ತವಾದ ಸಮಯದಲ್ಲಿ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕೂಡಾ ಹೇಳಿದ್ದರು.

ಜಾತಿಗಣತಿ ಹೊಸ ವಿಚಾರವಲ್ಲ, ಹಾಗಾಗಿ ಸಿಎಂ ಬದಲಾವಣೆಯ ವಿಷಯವನ್ನು ಹಿನ್ನಲೆಗೆ ತಳ್ಳಲು ಜಾತಿಗಣತಿ ಸರ್ವೇ ಮಂಡನೆ ಮುಂದಾಗಿರುವುದು ಎನ್ನುವುದು ಬಿಜೆಪಿಯವರ ವೃಥಾ ಆರೋಪ. ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ ಎನ್ನುವುದನ್ನು ಬಹಳಷ್ಟು ಬಾರಿಗೆ ಸ್ಪಷ್ಟ ಪಡಿಸಲಾಗಿದೆ ಎಂದು ಸಚಿವ ಡಾ.ಮಹದೇವಪ್ಪ ಹೇಳಿದ್ದಾರೆ.

ಮುಖ್ಯಮಂತ್ರಿ ಕುರ್ಚಿ ಭದ್ರವಾಗಿದೆ, ಸಿದ್ದರಾಮಯ್ಯನವರಿಗೆ ಯಾವುದೇ ಕಂಟಕವಿಲ್ಲ. 2028ಕ್ಕೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆ ವೇಳೆ, ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವುದನ್ನು ಚರ್ಚಿಸೋಣ, ಸದ್ಯ ರೈಟ್ ಮುಂದಕ್ಕೆ ಹೋಗೋಣ ಎಂದು ಡಾ.ಮಹದೇವಪ್ಪ ಹೇಳುವ ಮೂಲಕ, ಇರುವ ಗೊಂದಲಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಜಾತಿಗಣತಿ ವರದಿ ಸೋರಿಕೆಯಾಗಿರುವುದು ಹೌದು, ಇದು ಕ್ಯಾಬಿನೆಟ್ ಅಜೆಂಡಾವನ್ನು ನಾನಿಲ್ಲೂ ನೋಡಿಲ್ಲ. 160 ಕೋಟಿ ರೂಪಾಯಿಯನ್ನು ನಾವೇ ಖರ್ಚು ಮಾಡಿ, ಈಗ ಹಿಂದಕ್ಕೆ ಸರಿಯುವ ಪ್ರಶ್ನೆಯಿಲ್ಲ. ಎಐಸಿಸಿ ಕೂಡಾ ಜಾತಿಗಣತಿ ಆಗಬೇಕೆನ್ನುವ ನಿಲುವನ್ನು ಹೊಂದಿದೆ ಎಂದು ಸಚಿವ ಡಾ.ಮಹದೇವಪ್ಪ ಹೇಳಿದ್ದಾರೆ.

ಜಾತಿಗಣತಿಯನ್ನು ಆಧರಿಸಿ ಹಣಕಾಸಿನ ನಿರ್ವಹಣೆ ಆಗಬೇಕು ಎನ್ನುವ ನಿಲುವನ್ನು ನಾವು ಹೊಂದಿದ್ದೇವೆ. ಇದು ಮಂಡನೆ ಆಗಬೇಕು ಎನ್ನುವ ಕಾರಣಕ್ಕಾಗಿಯೇ, ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಹಿಂದಕ್ಕೆ ಸರಿಯುವ ಪ್ರಶ್ನೆಯಿಲ್ಲ. ನಾಳಿನ ಅಜೆಂಡಾ ಇನ್ನೂ ಬಂದಿಲ್ಲ ಎಂದು ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

" ಜಾತಿಗಣತಿ ವರದಿಯಲ್ಲಿರುವ ಅಂಕಿಅಂಶ ಇನ್ನೂ ಸಾರ್ವಜನಿಕವಾಗದೇ, ಊಹಾಪೋಹಗಳಾಗಿರುವುದರಿಂದ, ಈ ವಿಚಾರದ ಬಗ್ಗೆ ವಿರೋಧ ಅನವಶ್ಯಕ. ನಾಳೆ ನಡೆಯುವ ಸಂಪುಟಸಭೆಯಲ್ಲಿ ಜಾತಿ ಗಣತಿ ವರದಿಯ ವಿಷಯವನ್ನು ಮಂಡಿಸಲಾಗುವುದಿಲ್ಲ. ಮುಂದಿನ ಸಂಪುಟಸಭೆಯಲ್ಲಿ ವಿಷಯ ಮಂಡಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು " ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿಯನ್ನು ನೀಡಿದ್ದಾರೆ.


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget