ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಮ್ ಆದ್ಮ ಪಕ್ಷವನ್ನು ಮಣಿಸಲು ಹಲವು ತಂತ್ರಗಳನ್ನು ರೂಪಿಸುತ್ತಿರುವ ಬಿಜೆಪಿ, ಇಂದು ಮಧ್ಯಾಹ್ನ 2 ಗಂಟೆಗೆ ತನ್ನ ಚುನಾವಣಾ ಪ್ರಣಾಳಿಕೆಯನ್ನು ಜನರ ಮುಂದೆ ಬಹಿರಂಗಪಡಿಸಿತು. ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ, ರಾಜ್ಯದ ಮಹಿಳೆಯರು ಮತ್ತು ಯುವಕರ ಕಲ್ಯಾಣ ಯೋಜನೆಗಳ ಮೇಲೆ ಮುಖ್ಯವಾಗಿ ಕೇಂದ್ರೀಕರಿಸಿದ "ಸಂಕಲ್ಪ ಪತ್ರ”ವಿದು ಎಂದು ಗಟ್ಟಿಯಾಗಿ ನುಡಿದರು.
“ಹಿರಿಯ ನಾಗರಿಕರಿಗೆ ಮತ್ತು ಮಹಿಳಾ ಮತ್ತು ಕುಟುಂಬ ಕಲ್ಯಾಣ ಯೋಜನೆಗಳನ್ನು ಬಿಜೆಪಿ ಅನುಷ್ಠಾನಕ್ಕೆ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದೆಲ್ಲವೂ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಅನುಷ್ಠಾನಗೊಳ್ಳಲು ಸಾಧ್ಯ. ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ಎಲ್ಲಾ ಯೋಜನೆಗಳು ಮುಂದಿನ ದಿನಗಳಲ್ಲಿ ಬಿಜೆಪಿ ಅಡಿಯಲ್ಲಿ ಮುಂದುವರಿಯುತ್ತವೆ. ಎಎಪಿ ಪಕ್ಷವು ಅಭಿವೃದ್ಧಿ ಹೊಂದಲು ಮಾಡಿಕೊಂಡಿರುವ ಎಲ್ಲಾ ಭ್ರಷ್ಟಾಚಾರದ ಅಡ್ಡೆಗಳನ್ನು ನಾವು ಕಿತ್ತು ಬೀಸಾಡುತ್ತೇವೆ" ಎಂದು ನಡ್ಡಾ ಹೇಳಿದರು.
"ಈ ಹಿಂದೆ 2014ರಲ್ಲಿ ನಾವು ನಮ್ಮ ಪ್ರಣಾಳಿಕೆಯಲ್ಲಿ 500 ಭರವಸೆಗಳನ್ನು ನೀಡಿದ್ದೆವು. ಅವುಗಳ ಪೈಕಿ 499 ಭರವಸೆಗಳನ್ನು ಈಡೇರಿಸಿದ್ದೇವೆ. 2019ರಲ್ಲಿ 235 ಭರವಸೆಗಳನ್ನು ನೀಡಿದ್ದೆವು. ಅದರಲ್ಲಿ, 225 ಅನ್ನು ಪೂರ್ಣಗೊಳಿಸಿದ್ದೇವೆ. ಉಳಿದದ್ದು ಸಹ ಅನುಷ್ಠಾನದ ಹಂತದಲ್ಲಿವೆ" ಎಂದು ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಕೊಟ್ಟ ಭರವಸೆಗಳನ್ನು ನಡ್ಡಾ ಇಲ್ಲಿ ವಿವರಿಸಿದರು.
ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಗಳೇನು?
* ದೆಹಲಿ ಮಹಿಳೆಯರಿಗೆ ಮಹಿಳಾ ಸಮೃದ್ಧಿ ಯೋಜನೆ ಅಡಿಯಲ್ಲಿ ಮಾಸಿಕ 2500 ರೂ.
* ಬಡ ಮಹಿಳೆಯರಿಗೆ 500 ರೂ. ಸಿಲಿಂಡರ್ ಸಬ್ಸಿಡಿ ಹಣ
* ಪ್ರತಿ ಹೋಳಿ ಮತ್ತು ದೀಪಾವಳಿಗೆ ಒಂದು ಸಿಲಿಂಡರ್ ಉಚಿತ
* ಮಹಿಳೆಯರಿಗೆ 6 ಪೌಷ್ಠಿಕ ಕಿಟ್, ಗರ್ಭಿಣಿಯರಿಗೆ 21 ಸಾವಿರ ರೂ.
* ಮೊದಲ ಸಚಿವ ಸಂಪುಟದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಅನುಷ್ಠಾನ, ಹೆಚ್ಚುವರಿ ಆರೋಗ್ಯ ರಕ್ಷಣೆಗೆ 50,000 ರೂ.
* 60ರಿಂದ 70 ವರ್ಷದೊಳಗಿನ ಹಿರಿಯ ನಾಗರಿಕರಿಗೆ 2,000- 2,500 ರೂ. ಪಿಂಚಣಿ ಹಣ ಏರಿಕೆ.
* 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು, ವಿಧವೆಯರು ಮತ್ತು ವಿಶೇಷ ಚೇತನರಿಗೆ 2,500 ರೂ.ನಿಂದ 3,000 ರೂ.ಗೆ ಪಿಂಚಣಿ ಏರಿಕೆ.
* ಕೊಳೆಗೇರಿಗಳಲ್ಲಿ (ಜುಗ್ಗಿ ಜೋಷ್ಠಿ) ವಾಸಿಸುವ ಜನರಿಗೆ ಅಟಲ್ ಕ್ಯಾಂಟೀನ್ ಯೋಜನೆ ಅಡಿಯಲ್ಲಿ 5 ರೂ. ದರದಲ್ಲಿ ಊಟ.
Post a Comment