ಕೊರಗ ಕಾಲೊನಿ ರಸ್ತೆ ಅಭಿವೃದ್ಧಿಗೆ ಅಲಂಕಾರಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದ ಸಂಸದ ಕ್ಯಾ. ಚೌಟ
ಮಂಗಳೂರು: ಕೇಂದ್ರ ಸರ್ಕಾರದ ಪಿಎಂ ಜನ್ ಮನ್ ಯೋಜನೆಯಡಿ ಕಡಬ ತಾಲೂಕಿನ ರಾಮಕುಂಜ, ಪೆರಾಬೆ, ಅಲಂಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಕ್ಕಾಲು ಕೊರಗ ಕಾಲೊನಿಯ ರಸ್ತೆ ಅಭಿವೃದ್ಧಿಗೆ 2.75 ಕೋಟಿ ರೂ. ಅನುದಾನ ಮಂಜೂರು ಆಗಿದ್ದು, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಅಲಂಕಾರಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಈ ವೇಳೆ ಮಾತನಾಡಿದ ಸಂಸದ ಕ್ಯಾ. ಚೌಟ ಅವರು, ದೇಶದಲ್ಲಿ ಬಡವರ್ಗದ ಶೋಷಿತ ಕುಟುಂಬಸ್ಥರಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2023ರಲ್ಲಿ ಪಿಎಂ ಜನ್ಮನ್ ಎಂಬ ಈ ಮಹಕ್ವಾಂಕ್ಷೆಯ ಯೋಜನೆಯನ್ನು ಆರಂಭಿಸಿದ್ದು, 2026ರವರೆಗೆ ಇದು ಜಾರಿಯಲ್ಲಿರುತ್ತದೆ. ಈ ಯೋಜನೆಯಡಿ ಮಾರ್ಗಸೂಚಿ ಆಧರಿಸಿ ಕರ್ನಾಟಕದಲ್ಲಿ ಜೈನ ಕುರುಬ ಮತ್ತು ಕೊರಗ ಸಮುದಾಯ ಎಲ್ಲೆಲ್ಲಿ ಇವೆ ಎಂಬುದನ್ನು ಸಮೀಕ್ಷೆ ಮೂಲಕ ಗುರುತಿಸಿ ಆ ಪ್ರದೇಶದ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಂಸದನಾದ ಕೂಡಲೇ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಸಂಬಂಧಿಸಿದ ಕಾರ್ಯದರ್ಶಿಗಳನ್ನು ದಕ್ಷಿಣ ಕನ್ನಡಕ್ಕೆ ಕರೆದು ಪಿಎಂ ಜನ್ ಮನ್ ಯೋಜನೆ ಅನುಷ್ಠಾನ ಪ್ರಗತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೆ. ಈ ಯೋಜನೆಗೆ ಸಂಬಂಧಿಸಿದ ಅನುದಾನವನ್ನು ಫಾಲೋಅಪ್ ಮಾಡಿ ನಾವು ಇಲ್ಲಿಗೆ ತರಬೇಕು. ಇಲ್ಲದಿದ್ದರೆ ಆ ಹಣ ಅಲ್ಲಿಯೇ ಬಾಕಿಯಾಗಿರುತ್ತದೆ. ನನ್ನ ಮೊದಲ ಅಧಿವೇಶನದಲ್ಲೇ ಈ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆಯನ್ನೂ ಕೇಳಿದ್ದೆ. ಬಳಿಕ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಅನುದಾನದ ಮಾಹಿತಿ ಪಡೆದು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಹಣವನ್ನು ಬಿಡುಗಡೆ ಮಾಡಿಸಿದ್ದೇನೆ. ಇದೀಗ ರಸ್ತೆಗೆ ಸಂಬಂಧಿಸಿದ ಹಣ ಬಂದಿದ್ದು, ಬಹುಉದ್ದೇಶಿತ ಸೆಂಟರ್’ಗೆ ಸಂಬಂಧಿಸಿದ 2.4 ಕೋಟಿ ಹಣ ಕೇಂದ್ರ ಸರ್ಕಾರದಿಂದ ಮಂಜೂರಾಗಿದ್ದು, ಇನ್ನೂ ರಾಜ್ಯದಿಂದ ಅದು ಬಿಡುಗಡೆಯಾಗಿಲ್ಲ. ಹೀಗಾಗಿ, ಈ ನಾಲ್ಕು ಮಲ್ಟಿಪರ್ಪಸ್ ಸೆಂಟರ್ ನಿರ್ಮಾಣದ ಹಣ ಕೂಡ ಶೀಘ್ರ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರಧಾನಮಂತ್ರಿ ಜನ್ಮನ್ ಯೋಜನೆ ಒಂದು ಅದ್ಭುತ ಪರಿಕಲ್ಪನೆ ಯೋಜನೆಯಾಗಿದೆ. ಈ ಹಿಂದೆಯೆಲ್ಲ ವೋಟ್ಬ್ಯಾಂಕ್ ಲೆಕ್ಕಾಚಾರದಡಿ ರಸ್ತೆ ಅಭಿವೃದ್ಧಿಯಂಥ ಕೆಲಸಗಳು ಸಾಮಾನ್ಯವಾಗಿ ನಡೆಯುತ್ತಿತ್ತು. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಸಮಾಜದ ಎಲ್ಲ ವರ್ಗದ ಜನರು, ಶೋಷಿತ ಜನರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಪಿಎಂ ಜನ್ ಮನ್ ಸೇರಿದಂತೆ ಹತ್ತಾರು ಯೋಜನೆಗಳು ಜಾರಿಯಲ್ಲಿವೆ. ಅರ್ಹ ಎಲ್ಲ ಫಲಾನುಭವಿಗಳು ಈ ಯೋಜನೆಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ಪ್ರಧಾನಮಂತ್ರಿ ಮೋದಿ ಅವರ ಆಶಯ ಹಾಗೂ ಕನಸನ್ನು ನನಸು ಮಾಡಬೇಕೆಂದು ಕ್ಯಾ. ಚೌಟ ಅವರು ಕರೆ ನೀಡಿದ್ದಾರೆ.
*ದಕ್ಷಿಣ ಕನ್ನಡ ಜಿಲ್ಲೆಗೆ ಸುಮಾರು 11 ಕೋಟಿ ಅನುದಾನ*
ಕೇಂದ್ರ ಸರ್ಕಾರವು ಜನ್ಮನ್ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ ಸುಮಾರು 11 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಯೋಜನೆ ಅನುಷ್ಠಾನಕ್ಕೆ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ದಕ್ಷಿಣ ಕನ್ನಡ ಜಿಲ್ಲೆಯನ್ನು ಗುರುತಿಸಿದೆ. ಈ ಯೋಜನೆಯಡಿ ಬೆಳ್ತಂಗಡಿಯ ಅಟ್ರಿಂಜೆ ಹಾಗೂ ಸುಲ್ಕೇರಿ ರಸ್ತೆ ಅಭಿವೃದ್ಧಿಗೆ 3.38 ಕೋಟಿ ರೂ., ಸೇತುವೆ ನಿರ್ಮಾಣಕ್ಕೆ 2.67 ಕೋಟಿ ರೂ., ಪುತ್ತೂರಿನ ಹಳೇ ನಿರನಾಕಿ ಗ್ರಾಮದ ಪರಕಾಲು ಎಸ್ಟಿ ಕಾಲೊನಿ ರಸ್ತೆ ಅಭಿವೃದ್ಧಿಗೆ 2.75 ಕೋಟಿ ರೂ., ಮಂಗಳೂರಿನ ಮಧ್ಯ ಗ್ರಾಮ, ಬಂಟ್ವಾಳದ ಕೇಪು ಗ್ರಾಮ, ಬೆಳ್ತಂಗಡಿಯ ನಾರಾವಿ ಗ್ರಾಮ ಹಾಗೂ ಸುಳ್ಯದ ಪಂಜದಲ್ಲಿ ಮಲ್ಟಿ ಪರ್ಪಸ್ ಸೆಂಟರ್ ನಿರ್ಮಾಣಕ್ಕೆ 2.40 ಕೋಟಿ ರೂ. ಮಂಜೂರಾಗಿದೆ. ಹಾಗೆಯೇ ಮಧ್ಯ ಗ್ರಾಮದಲ್ಲಿ ಅಂಗನವಾಡಿ ನಿರ್ಮಾಣಕ್ಕೂ 12 ಲಕ್ಷ ರೂ. ಮಂಜೂರಾಗಿದೆ.
ಕಾರ್ಯಕ್ರಮದಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ, ಆಲಂಕಾರು ಸಿ.ಎ ಬ್ಯಾಂಕ್ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಆಲಂಕಾರು ಗ್ರಾ.ಪಂ ಅಧ್ಯಕ್ಷರಾದ ಸುಶೀಲ, ರಾಮಕುಂಜ ಗ್ರಾ.ಪಂ ಸುಚೇತಾ, ಪೆರಾಬೆ ಗ್ರಾ.ಪಂ ಸಂಧ್ಯಾ, ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಪ್ರದೀಪ್ ರೈ ಮನವಳಿಕೆ, ಬಾಲಕೃಷ್ಣ ಬಾಣಜಾಲು ನೆಲ್ಯಾಡಿ, ರಾಕೇಶ್ ರೈ ಕಡೆಂಜಿ, ಜಯಂತಿ ಆರ್ ಗೌಡ, ಸುರೇಶ್ ದೇಂತಾರು, ರವಿಪ್ರಸಾದ್ ಶೆಟ್ಟಿ ನೆಲ್ಯಾಡಿ, ಗಣೇಶ್ ಉದನಡ್ಕ, ದಯಾನಂದ ರೈ ಮನವಳಿಕೆಗುತ್ತು, ಲಕ್ಷ್ಮೀ ನಾರಾಯಣ ರಾವ್ ಅತೂರು, ಸದಾಶಿವ ಶೆಟ್ಟಿ ಮಾರಂಗ, ಬಿ.ಜೆ.ಪಿ ಶಕ್ತಿ ಕೇಂದ್ರ ಪ್ರಮುಖರಾದ ಪ್ರಕಾಶ್ ಕೆಮ್ಮಾರ,ಜಯಕರ ಪೂಜಾರಿ ಕಲ್ಲೇರಿ,ಸುಭೀಕ್ಷಾ ರತ್ನ ರೈ, ಮಾಧವ ಪೂಜಾರಿ, ಹೇಮ ಮೋಹನ್ದಾಸ್ ಶೆಟ್ಟಿ ಸೇರಿದಂತೆ ಗ್ರಾ.ಪಂ ಉಪಾಧ್ಯಕ್ಷರು, ಪಕ್ಷದ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ಊರವರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಪೂವಪ್ಪ ನಾಯ್ಕ್ ಅವರು ನಿರೂಪಿಸಿದರು.
Post a Comment