ರಾಜ್ಯದಲ್ಲಿ ಬಜೆಟ್ ಗುರಿ ಮುಟ್ಟದ ತೆರಿಗೆ ಸಂಗ್ರಹ: ಉಳಿದ 3 ತಿಂಗಳಲ್ಲಿ 62,424 ಕೋಟಿ ಟ್ಯಾಕ್ಸ್​​ ಸಂಗ್ರಹದ ಸವಾಲು

 ರಾಜ್ಯ ಸರ್ಕಾರ ಪ್ರಸ್ತುತ ತೆರಿಗೆ ಸಂಗ್ರಹದಲ್ಲಿ ಬಜೆಟ್ ಗುರಿ ತಲುಪಲು ಸಾಧ್ಯವಾಗಿಲ್ಲ. ಈ ಬಗ್ಗೆ ಆರ್ಥಿಕ ಇಲಾಖೆ ನೀಡಿರುವ ಅಂಕಿ-ಅಂಶಗಳ ವಿವರ ಈ ಕೆಳಗಿನಂತಿದೆ.



ಬೆಂಗಳೂರು: ಪಂಚ ಗ್ಯಾರಂಟಿ ಹಾಗೂ ಗರಿಷ್ಠ ಬದ್ಧ ವೆಚ್ಚದ ಹೊರೆಯ ಮಧ್ಯೆ ರಾಜ್ಯ ಸರ್ಕಾರ ಹಣಕಾಸು ನಿರ್ವಹಣೆಗೆ ಕಸರತ್ತು ನಡೆಸುತ್ತಿದೆ. ಆದರೆ ಆರ್ಥಿಕ ವರ್ಷದ 9 ತಿಂಗಳು ಕಳೆದರೂ ಸ್ವಂತ ರಾಜಸ್ವ ಬಜೆಟ್ ಗುರಿ ತಲುಪಲು ಸಾಧ್ಯವಾಗಿಲ್ಲ. ಈವರೆಗಿನ ರಾಜ್ಯಸ್ವ ತೆರಿಗೆ ಸಂಗ್ರಹದ ಸ್ಥಿತಿಗತಿಯ ಬಗ್ಗೆ ಆರ್ಥಿಕ ಇಲಾಖೆ ನೀಡಿರುವ ಅಂಕಿ-ಅಂಶಗಳ ವರದಿ ಇಲ್ಲಿದೆ.


ಪ್ರಸಕ್ತ ಬಜೆಟ್ ವರ್ಷದ ಅಂತಿಮ ತ್ರೈಮಾಸಿಕದಲ್ಲಿರುವ ಕಾಂಗ್ರೆಸ್ ಸರ್ಕಾರ ಇದೀಗ ಮುಂದಿನ ಆರ್ಥಿಕ ವರ್ಷದ ಬಜೆಟ್ ಸಿದ್ಧತೆ ಆರಂಭಿಸಿದೆ. ಬಜೆಟ್ ವರ್ಷದ 9 ತಿಂಗಳು ಕಳೆದಿದ್ದು, ಸಿಎಂ ಸಿದ್ದರಾಮಯ್ಯ ಎಲ್ಲ ಇಲಾಖೆಗಳ ಬಜೆಟ್ ಅನುಷ್ಟಾನದ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ. ಮುಂದಿನ‌ ಬಜೆಟ್​​​ಗೆ ತಯಾರಿ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಆದಾಯ ಕೊರತೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಿಎಂ ಕಳೆದ ನವೆಂಬರ್​​ನಲ್ಲಿ ಸಭೆ ನಡೆಸಿ ಬಜೆಟ್ ಗುರಿಯಂತೆ ತೆರಿಗೆ ಸಂಗ್ರಹಿಸುಂತೆ ಸೂಚಿಸಿದ್ದರು. ಆದರೆ, ವಾಸ್ತವದಲ್ಲಿ ತೆರಿಗೆ ಸಂಗ್ರಹ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ.

ಬಜೆಟ್ ವರ್ಷದ ಮೂರು ತ್ರೈಮಾಸಿಕ ಕಳೆದರೂ ರಾಜಸ್ವ ಸಂಗ್ರಹದ ಬಜೆಟ್ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ.‌ ಡಿಸೆಂಬರ್​​ವರೆಗೆ ಪ್ರಮುಖ ತೆರಿಗೆ ಸಂಗ್ರಹ ಇಲಾಖೆಗಳು ಬಜೆಟ್ ನಿರೀಕ್ಷೆಯ ಮುಂದೆ ಸುಮಾರು 10 ರಿಂದ ಶೇ15ರಷ್ಟು ಆದಾಯ ಸಂಗ್ರಹ ಕೊರತೆ ಎದುರಿಸುತ್ತಿವೆ. ಕಳೆದ ಬಾರಿಯೂ ಬಜೆಟ್ ಗುರಿಯಂತೆ ಆದಾಯ ಸಂಗ್ರಹವಾಗುವಲ್ಲಿ ವಿಫಲವಾಗಿತ್ತು. ಆಗ ತೀವ್ರ ಬರದ ಹಿನ್ನೆಲೆ ಆದಾಯವು ನಿರೀಕ್ಷಿತ ಗುರಿ ತಲುಪಲಿಲ್ಲ. ಆದರೆ ಈ ಬಜೆಟ್ ವರ್ಷದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ತೆರಿಗೆ ಸಂಗ್ರಹ ಪ್ರಗತಿ ಕಂಡಿದೆ. ಆದರೆ, ಈ ಬಾರಿ ಉತ್ತಮ ಮಳೆ, ಬೆಳೆ ಆದರೂ ಆದಾಯ ಸಂಗ್ರಹ ಬಜೆಟ್ ಗುರಿ ತಲುಪಿಲ್ಲ.


ಈವರೆಗೆ 15,527 ಕೋಟಿ ರೂ. ತೆರಿಗೆ ಸಂಗ್ರಹ ಕುಂಠಿತ: ಆರ್ಥಿಕ ಇಲಾಖೆ ಮಾಹಿತಿ ಪ್ರಕಾರ, ವಾರ್ಷಿಕ ತೆರಿಗೆ ಸಂಗ್ರಹದ ಬಜೆಟ್ ಗುರಿ ಇರುವುದು 1,87,525 ಕೋಟಿ ರೂ. ಆಗಿದೆ. ಆ ಪೈಕಿ ಒಟ್ಟು ನಾಲ್ಕು ಪ್ರಮುಖ ತೆರಿಗೆಗಳ ಮೂಲಕ ಡಿಸೆಂಬರ್​​ವರೆಗೆ 1,25,101 ಕೋಟಿ ರೂ.‌ ರಾಜಸ್ವ ಸಂಗ್ರಹವಾಗಿದೆ. ಅಂದರೆ 66%ರಷ್ಟು ತೆರಿಗೆ ಸಂಗ್ರಹಿಸಲಾಗಿದೆ. ಮಾಸಿಕ ಸರಾಸರಿ 13,900 ಕೋಟಿ ರೂ.ಗಳಂತೆ 9 ತಿಂಗಳಲ್ಲಿ ಒಟ್ಟು ತೆರಿಗೆ ಸಂಗ್ರಹ ಮಾಡಲಾಗಿದೆ. ಅಂದರೆ ಮಾಸಿಕ ಸರಾಸರಿ ಶೇ11.11ರಂತೆ ತೆರಿಗೆ ಸಂಗ್ರಹ ಮಾಡಲಾಗಿದೆ. ಬಜೆಟ್ ಗುರಿಯಂತೆ 9 ತಿಂಗಳಲ್ಲಿ ಸುಮಾರು 1,40,628 ಕೋಟಿ ರೂ. ತೆರಿಗೆ ಸಂಗ್ರಹಿಸಬೇಕಾಗಿತ್ತು. ಡಿಸೆಂಬರ್​​ವರೆಗೆ ಬಜೆಟ್ ಗುರಿಗಿಂತ ಸುಮಾರು 15,527 ಕೋಟಿ ರೂ. ತೆರಿಗೆ ಸಂಗ್ರಹ ಕುಂಠಿತವಾಗಿದೆ.

ಆರ್ಥಿಕ ವರ್ಷದ ಉಳಿದಿರುವ ಕೊನೆಯ 3 ತಿಂಗಳಲ್ಲಿ ರಾಜ್ಯ ಸರ್ಕಾರ ಬಜೆಟ್ ಗುರಿಯಂತೆ ಸುಮಾರು 62,424 ಕೋಟಿ ರೂ. ತೆರಿಗೆ ರಾಜಸ್ವ ಸಂಗ್ರಹಿಸಬೇಕಾಗಿದೆ. ಅಂದರೆ ಉಳಿದಿರುವ ಮೂರು ತಿಂಗಳಲ್ಲಿ ಮಾಸಿಕ ಸರಾಸರಿ ಅಂದಾಜು 20,808 ಕೋಟಿ ರೂ‌.ಗಳಂತೆ ತೆರಿಗೆ ಸಂಗ್ರಹ ಮಾಡಬೇಕಾಗಿದೆ. ಅದರಂತೆ, ಮಾಸಿಕ ಸರಾಸರಿ ಶೇ33 ರಂತೆ ತೆರಿಗೆಗಳನ್ನು ಸಂಗ್ರಹ ಮಾಡಬೇಕು. ಉಳಿದಿರುವ ಮೂರು ತಿಂಗಳಲ್ಲಿ ಇಷ್ಟು ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಕಷ್ಟಸಾಧ್ಯ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ವಾಣಿಜ್ಯ ತೆರಿಗೆ ಸಂಗ್ರಹ: ವಾಣಿಜ್ಯ ತೆರಿಗೆ ಸಂಗ್ರಹ ಡಿಸೆಂಬರ್​​ವರೆಗೆ 75,753 ಕೋಟಿ ರೂ‌. ಆಗಿದೆ. 9 ತಿಂಗಳಲ್ಲಿ ಬಜೆಟ್ ಗುರಿಯಂತೆ ಮಾಸಿಕ 9,167 ಕೋಟಿ ರೂ.ಗಳಂತೆ ಒಟ್ಟು 82,503 ಕೋಟಿ ರೂ. ಸಂಗ್ರಹವಾಗಬೇಕಿತ್ತು. ವಾರ್ಷಿಕ ವಾಣಿಜ್ಯ ತೆರಿಗೆ ಸಂಗ್ರಹದ ಗುರಿ 1,10,000 ಕೋಟಿ ಇದೆ. ಇದರಲ್ಲಿ ತೈಲದ ಮೇಲಿನ‌ ಮಾರಾಟ ತೆರಿಗೆ ರೂಪದಲ್ಲಿ 17,284 ಕೋಟಿ ರೂ. ಸಂಗ್ರಹವೂ ಸೇರಿದೆ. ಅಂದರೆ ಬಜೆಟ್ ಗುರಿ ಮುಂದೆ 69% ಸಂಗ್ರಹವಾಗಿದೆ. ಇನ್ನೂ ಬಜೆಟ್ ಗುರಿಯಂತೆ ಒಟ್ಟು 34,247 ಕೋಟಿ ರೂ. ಸಂಗ್ರಹಿಸಬೇಕಾಗಿದೆ.

ನೋಂದಣಿ ಹಾಗೂ ಮುದ್ರಾಂಕ ಶುಲ್ಕ ಸಂಗ್ರಹ: ನೋಂದಣಿ ಹಾಗೂ ಮುದ್ರಾಂಕ ಶುಲ್ಕ ರೂಪದಲ್ಲಿ ಈ ವರ್ಷ ಡಿಸೆಂಬರ್​​ವರೆಗೆ 16,993 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ. ಆದರೆ, ಬಜೆಟ್ ವಾರ್ಷಿಕ ಗುರಿ ಇರುವುದು 26,000 ಕೋಟಿ ರೂ., ಅಂದರೆ ಬಜೆಟ್ ಗುರಿಯಂತೆ ಮಾಸಿಕ 2,167 ಕೋಟಿ ರೂ.ಗಳಂತೆ 9 ತಿಂಗಳಲ್ಲಿ 19,503 ಕೋಟಿ ರೂ. ಸಂಗ್ರಹವಾಗಬೇಕಿತ್ತು. ಈವರೆಗೆ ಬಜೆಟ್ ಗುರಿಯ ಶೇ75 ರಷ್ಟು ಮಾತ್ರ ಸಂಗ್ರಹವಾಗಿದೆ. ಬಜೆಟ್ ಗುರಿ ತಲುಪಲು ಇನ್ನೂ 9,007 ಕೋಟಿ ರೂ. ಸಂಗ್ರಹಿಸಬೇಕಾಗಿದೆ. ಜಮೀನು ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯವಾಗಿರುವುದರಿಂದ ಕಳೆದೆರಡು ತಿಂಗಳಿಂದ ಆಸ್ತಿ ನೋಂದಣಿ ಕಡಿಮೆಯಾಗಿದೆ. ಇದರಿಂದ ರಾಜಸ್ವ ಸಂಗ್ರಹ ಪ್ರಮಾಣ ಗಣನೀಯವಾಗಿ ಕುಂಟಿತವಾಗಿದೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೋಟಾರು ವಾಹನ ತೆರಿಗೆ ಸಂಗ್ರಹ: ಮೋಟಾರು ವಾಹನ ತೆರಿಗೆ ಸಂಗ್ರಹದ ವಾರ್ಷಿಕ ಬಜೆಟ್ ಗುರಿ ಇರುವುದು 13,000 ಕೋಟಿ ರೂಪಾಯಿ. ಈ ತೆರಿಗೆ ರೂಪದಲ್ಲಿ ಡಿಸೆಂಬರ್​​ವರೆಗೆ 8,622 ಕೋಟಿ ರೂ. ಸಂಗ್ರಹವಾಗಿದೆ. ಬಜೆಟ್ ಗುರಿಯಂತೆ 9 ತಿಂಗಳಲ್ಲಿ ಮಾಸಿಕ 1,083 ಕೋಟಿ ರೂ.‌ಗಳಂತೆ ಸುಮಾರು 9,750 ಕೋಟಿ ರೂ‌. ಸಂಗ್ರಹಿಸಬೇಕಿತ್ತು. ಈವರೆಗೆ ಶೇ 66ರಷ್ಟು ಮೋಟಾರು ವಾಹಾನ ತೆರಿಗೆ ಸಂಗ್ರಹವಾಗಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.‌ ಇನ್ನು ಮೂರು ತಿಂಗಳಲ್ಲಿ ಬಜೆಟ್ ಗುರಿಯಂತೆ ಒಟ್ಟು 4,378 ಕೋಟಿ ರೂ. ಸಂಗ್ರಹ ಮಾಡಬೇಕಿದೆ.

ಅಬಕಾರಿ ಸಂಗ್ರಹ: ರಾಜ್ಯ ಸರ್ಕಾರ 2024-25ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 38,525 ಕೋಟಿ ರೂ. ಆದಾಯದ ಗುರಿ ನೀಡಿದೆ. ಆದರೆ, ಡಿಸೆಂಬರ್ ಅಂತ್ಯದವರೆಗೆ 23,733 ಕೋಟಿ ರೂ. ಮಾತ್ರ ಅಬಕಾರಿ ಆದಾಯ ಸಂಗ್ರಹವಾಗಿದೆ. ಡಿಸೆಂಬರ್​​ವರೆಗೆ ಶೇ 62ರಷ್ಟು ಅಬಕಾರಿ ಸಂಗ್ರಹವಾಗಿದೆ. ಒಂಬತ್ತು ತಿಂಗಳಲ್ಲಿ ಬಜೆಟ್ ಗುರಿ ಪ್ರಕಾರ ಮಾಸಿಕ 3,208 ರೂ.ಗಳಂತೆ ಒಟ್ಟು 28,872 ಕೋಟಿ ರೂ. ಸಂಗ್ರಹಿಸಬೇಕಾಗಿತ್ತು. ಇನ್ನುಳಿದ ಮೂರು ತಿಂಗಳಲ್ಲಿ ಸುಮಾರು 14,792 ಕೋಟಿ ರೂ. ಆದಾಯ ಸಂಗ್ರಹದ ಸವಾಲು ಅಬಕಾರಿ ಇಲಾಖೆ ಮುಂದಿದೆ.

ಅಬಕಾರಿ ಆಯುಕ್ತರು ಹೇಳುವುದೇನು?: ಈ ಬಗ್ಗೆ ಮಾತನಾಡಿರುವ ಅಬಕಾರಿ ಇಲಾಖೆ ಆಯುಕ್ತ ಆರ್.ವೆಂಕಟೇಶ್ ಕುಮಾರ್, ''ಬಜೆಟ್ ಅಂದಾಜಿನಂತೆ ಆದಾಯ ಸಂಗ್ರಹವಾಗಿಲ್ಲ. ಹೊಸ ಬಿಯರ್ ನೀತಿಯಿಂದ‌ ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ. ಕಟ್ಟುನಿಟ್ಟಿನ ಎನ್​ಫೋರ್ಸ್​​ಮೆಂಟ್ ಮೂಲಕವೂ ಆದಾಯ ಸೋರಿಕೆ ತಡೆಯಲು ಸೂಚಿಸಿದ್ದೇವೆ. ಎಂಆರ್​​ಪಿ ದರ ದುಪ್ಪಟ್ಟು ಮಾಡುವುದು, ನಕಲಿ ಸಾರಾಯಿ, ನಕಲಿ ಬ್ರ್ಯಾಂಡ್ ಹಾಗೂ ಗೋವಾದಿಂದ ಅಕ್ರಮವಾಗಿ ರಾಜ್ಯಕ್ಕೆ ತರುವ ಲಿಕ್ಕರ್ ಮೇಲೆ ನಿಗಾ ಇರಿಸಿ, ಕ್ರಮವಹಿಸಲು ಸೂಚಿಸಲಾಗಿದೆ. ಕಾನೂನು ಪ್ರಕಾರ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡು ಆದಾಯ ಸೋರಿಕೆ ತಡೆಗಟ್ಟಲು ಕ್ರಮ ವಹಿಸಲಾಗುವುದು. ಆ ಮೂಲಕ ಬಜೆಟ್ ಅಂದಾಜು ಮುಟ್ಟಲು ಎಲ್ಲ ಪ್ರಯತ್ನ ಮಾಡಲಾಗುವುದು'' ಎಂದು ತಿಳಿಸಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget