ಮಹಾಕುಂಭ ಮೇಳ: 3.5 ಕೋಟಿ ಭಕ್ತರು, ಸಾಧು - ಸಂತರಿಂದ 'ಅಮೃತ ಸ್ನಾನ'

 ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಸಂತರು ಮತ್ತು ಸಾಧುಗಳು ಸೇರಿದಂತೆ ಸುಮಾರು 3.5 ಕೋಟಿ ಭಕ್ತರು ‘ಮಕರ ಸಂಕ್ರಾಂತಿ' ದಿನ ಪವಿತ್ರ ಸ್ನಾನ ಮಾಡಿದ್ದಾರೆ.



ಮಹಾಕುಂಭ ನಗರ(ಉತ್ತರ ಪ್ರದೇಶ): ವಿವಿಧ ಅಖಾಡಾಗಳ ಸಂತರು ಮತ್ತು ನಾಗಾ ಸಾಧುಗಳು ಸೇರಿದಂತೆ ಸುಮಾರು 3.5 ಕೋಟಿ ಭಕ್ತರು ಮಕರ ಸಂಕ್ರಾಂತಿ ದಿನದಂದು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಮೇಳದ 'ಅಮೃತ ಸ್ನಾನ' ಮಾಡಿ ಪುನೀತರಾಗಿದ್ದಾರೆ.


ಮಂಗಳವಾರ ಶ್ರೀ ಪಂಚಾಯತಿ ಆಖಾಡಾ ಮಹಾನಿರ್ವಾಣಿ ಸದಸ್ಯರು ಮತ್ತು ಶ್ರೀ ಶಂಭು ಪಂಚಾಯತಿ ಅಟಲ್‌ ಅಖಾಡಾ ಸದಸ್ಯರು ಮೊದಲು 'ಅಮೃತ ಸ್ನಾನ' ಮಾಡಿದರು. ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಮಹಾಕುಂಭ ಮೇಳದ ಮೊದಲ ಅಮೃತ ಸ್ನಾನಕ್ಕಾಗಿ ನಿರಂಜನಿ ಅಖಾಡದ ಮೆರವಣಿಗೆಗೆ ಆಧ್ಯಾತ್ಮಿಕ ನಾಯಕ ಸ್ವಾಮಿ ಕೈಲಾಶಾನಂದ ಗಿರಿ ಚಾಲನೆ ನೀಡಿದರು.

ಸೋಮವಾರ 'ಪುಷ್ಯ ಪೂರ್ಣಿಮಾ' ದಿನದಂದು ಮೊದಲ 'ಸ್ನಾನ' ನಡೆದಿತ್ತು. ಮಹಾಕುಂಭ ಮೇಳದಲ್ಲಿ ವಿವಿಧ ಪಂಗಡಗಳ 13 ಅಖಾಡಗಳು ಭಾಗವಹಿಸುತ್ತವೆ. ಯೋಗ, ಧ್ಯಾನ ಮತ್ತು ಆಧ್ಯಾತ್ಮಿಕ ಜ್ಞಾನದ ಅನ್ವೇಷಣೆಗೆ ಒತ್ತು ನೀಡುವ ಮೂಲಕ ಹೆಸರುವಾಸಿಯಾಗಿರುವ ನಿರಂಜನಿ ಅಖಾಡಾ ಈ ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಪ್ರಮುಖ ಅಖಾಡಾಗಳಲ್ಲಿ ಒಂದಾಗಿದೆ. ಇದು ಆಧ್ಯಾತ್ಮ ಬಗ್ಗೆ ಒಲವು ಹೊಂದಿರುವವರಿಗೆ ಮಾರ್ಗದರ್ಶನ ನೀಡುತ್ತದೆ.


ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ, "ಮೊದಲ ಅಮೃತ ಸ್ನಾನದ ದಿನದಂದು 3.50 ಕೋಟಿಗೂ ಹೆಚ್ಚು ಭಕ್ತರು, ಸಂತರು ಮತ್ತು ಸಾಧುಗಳು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮೊದಲು ಅಮೃತ ಸ್ನಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸನಾತನ ಧರ್ಮ, ಮಹಾಕುಂಭಮೇಳದ ಆಡಳಿತ ಮಂಡಳಿ, ಸ್ಥಳೀಯ ಆಡಳಿತ, ಪೊಲೀಸರು, ನೈರ್ಮಲ್ಯ ಕಾರ್ಯಕರ್ತರು, ಸ್ವಯಂಸೇವಾ ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳು, ಅಂಬಿಗರು ಮತ್ತು ಎಲ್ಲಾ ಅಖಾಡಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು" ತಿಳಿಸಿದ್ದಾರೆ.

"ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ರಾಜ್ಯದ ಜನತೆಗೆ ಅಭಿನಂದನೆಗಳು. ಪುಣ್ಯ ಫಲ ನೀಡಲಿ, ಮಹಾಕುಂಭ ನಡೆಯಲಿ. ಈ ಪವಿತ್ರ ಕಾರ್ಯಕ್ರಮವು ಭಾರತದ ಸನಾತನ ಸಂಸ್ಕೃತಿ ಮತ್ತು ನಂಬಿಕೆಗೆ ಜೀವಂತ ಸಾಕ್ಷಿಯಾಗಿದೆ" ಎಂದಿದ್ದಾರೆ.


ತ್ರಿವೇಣಿ ಸಂಗಮದಲ್ಲಿ 'ಹರ ಹರ ಮಹಾದೇವ್', 'ಜೈ ಶ್ರೀ ರಾಮ್' ಮತ್ತು 'ಜೈ ಗಂಗಾ ಮಾತೆ' ಘೋಷಣೆಗಳು ಎಲ್ಲೆಡೆ ಮೊಳಗಿದವು. ಚಳಿಯ ನಡುವೆ ಭಕ್ತರು ಗುಂಪು ಗುಂಪಾಗಿ ಪವಿತ್ರ ಸ್ನಾನ ಮಾಡಿದರು. ಸನಾತನ ಧರ್ಮದ 13 ಅಖಾಡಾಗಳ ಸಾಧುಗಳು ಮಂಗಳವಾರ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸೇರುವ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು.

13 ಅಖಾಡಾಗಳನ್ನು ಸನ್ಯಾಸಿ (ಶೈವ), ಬೈರಾಗಿ (ವೈಷ್ಣವ) ಮತ್ತು ಉದಾಸೀನ್ ಎಂದು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಶೈವ ಅಖಾಡಾಗಳಲ್ಲಿ ಶ್ರೀ ಪಂಚ ದಶನಮ್ ಜುನಾ ಅಖಾಡಾ, ಶ್ರೀ ಪಂಚಾಯತಿ ಅಖಾಡಾ ನಿರಂಜನಿ, ಶ್ರೀ ಶಂಭು ಪಂಚಾಯತಿ ಅಟಲ್ ಅಖಾಡಾ, ಶ್ರೀ ಪಂಚಾಯತಿ ಅಖಾಡಾ ಮಹಾನಿರ್ವಾಣಿ, ಶ್ರೀ ಶಂಭು ಪಂಚಾಗ್ನಿ ಅಖಾಡಾ, ಶ್ರೀ ಪಂಚದಶನಂ ಆವಾಹನ ಅಖಾಡಾ ಮತ್ತು ತಪೋನಿಧಿ ಪಂಚಾ ಅಖಾಡಾ ಪ್ರಮುಖ ಅಖಾಡಾಗಳಾಗಿವೆ.



Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget