ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನದ ಟಿಕೆಟ್ ಪಡೆಯಲು ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ತಿರುಪತಿ (ಜ.8): ತಿರುಪತಿಯಲ್ಲಿ ಭಾರೀ ಪ್ರಮಾಣದ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ 6 ಮಂದಿ ಸಾವು ಕಂಡಿದ್ದಾರೆ ಎನ್ನಲಾಗಿದೆ. ಹಲವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಭಕ್ತಾದಿಗಳು ತಿರುಪತಿಯ ವೈಕುಂಠ ದ್ವಾರ ದರ್ಶನದ ಟಿಕೆಟ್ ತೆಗೆದುಕೊಳ್ಳುವ ವೇಳೆ ನೂಕುನುಗ್ಗಲು ಉಂಟಾಗಿದ್ದು ಅಪಾರ ಪ್ರಮಾಣದ ಸಾವು ನೋವು ಉಂಟಾಗಿದೆ. ಟಿಕೆಟ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಏಕಕಾಲಕ್ಕೆ ಸಾವಿರಾರು ಮಂದಿ ನುಗ್ಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಮೊದಲು ಒಬ್ಬ ಮಹಿಳೆ ಸಾವು ಕಂಡಿದ್ದಾಗಿ ವರದಿಯಾಗಿತ್ತಾದರೂ, ಅಪ್‌ಡೇಟ್ ಆಗಿರುವ ಮಾಹಿತಿಯ ಪ್ರಕಾರ ಈವರೆಗೂ ಆರು ಮಂದಿ ಸಾವು ಕಂಡಿದ್ದಾರೆ. ಉಳಿದವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವು ಕಂಡಿದ್ದಾರೆ. ಸ್ಥಳದಲ್ಲಿಯೇ ಸಾವು ಕಂಡಿದ್ದ ಮಹಿಳೆಯನ್ನು ತಮಿಳುನಾಡಿನ ಸೇಲಂ ಮೂಲದವರು ಎನ್ನಲಾಗಿದೆ.
ಜನವರಿ 10 ರಂದು ವೈಕುಂಠ ಏಕಾದಶಿಯ ಹಿನ್ನಲೆಯಲ್ಲಿ ತಿರುಪತಿಯ ಕೌಂಟರ್‌ಗಳಲ್ಲಿ ನಾಳೆ ಬೆಳಗ್ಗೆಯಿಂದ ಟಿಕೆಟ್ ವಿತರಣೆ ಮಾಡಲು ನಿರ್ಧಾರ ಮಾಡಲಾಗಿತ್ತು. ಈ ವೇಳೆ ಸಾವಿರಾರು ಮಂದಿ ಏಕಕಾಲಕ್ಕೆ ಕೌಂಟರ್ ಬಳಿ ನುಗ್ಗಿದಾಗ ಕಾಲ್ತುಳಿತ ಸಂಭವಿಸಿದೆ. ಇದರ ವಿಡಿಯೋಗಳು ಕೂಡ ಭಯಾನಕವಾಗಿದ್ದು, ನೆಲದಲ್ಲಿ ಬಿದ್ದ ವ್ಯಕ್ತಿಗಳನ್ನು ಬದುಕಿಸಲು ಪೊಲೀಸರು ಸಿಪಿಆರ್ ನಡೆಸುತ್ತಿರುವ ವಿಡಿಯೋಗಳು ಕೂಡ ದಾಖಲಾಗಿವೆ.ಅಂದಾಜು 25 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಎಲ್ಲರನ್ನೂ ಸ್ಥಳೀಯ ರುಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗುರುವಾರ ಮುಂಜಾನೆ 5 ಗಂಟೆಯಿಂದ ಟಿಕೆಟ್ ವಿತರಣೆ ಮಾಡಲಾಗುವುದು ಎಂದು ಟಿಟಿಡಿ ತಿಳಿಸಿತ್ತು. ಜನವರಿ 10, 11, 12ರ ವೈಕುಂಠ ದ್ವಾರ ದರ್ಶನದ ಟಿಕೆಟ್‌ಗಳನ್ನು ಮಾರಾಟವಿದ್ದು, ಒಟ್ಟಾರೆ 1 ಲಕ್ಷ 20 ಸಾವಿರ ಸೇವಾ ದರ್ಶನ ಟಿಕೆಟ್‌ಗಳು ಇರುವುದಾಗಿ ಮಾಹಿತಿ ನೀಡಿತ್ತು. ವಿಷ್ಣು ನಿವಾಸಂ ಕೌಂಟರ್‌ನ 9 ಕೇಂದ್ರದ 94 ಕೌಂಟರ್‌ಗಳಲ್ಲಿ ಟಿಕೆಟ್ ಮಾರಾಟ ಮಾಡಲು ಟಿಟಿಡಿ ನಿರ್ಧಾರ ಮಾಡಿತ್ತು. ಟಿಕೆಟ್ ಮಾರಾಟ ಪ್ರಕ್ರಿಯೆ ಆರಂಭವಾಗಲು ಇನ್ನೂ ಸಮಯವಿದ್ದ ಕಾರಣ ಪೊಲೀಸರು ಕೂಡ ಎಚ್ಚರಿಕೆಯಿಂದ ಕ್ಯೂ ಮೇಂಟೇನ್ ಮಾಡಲು ಕಾರ್ಯನಿರ್ವಹಿಸಿದ್ದರು. ರಸ್ತೆಗಳಲ್ಲಿಯೇ ನಿಂತು ಭಕ್ತರು ಗೋವಿಂದ ಭಜನೆ ಮಾಡುತ್ತಿದ್ದರು. ಪ್ರತಿದಿನಕ್ಕೆ 40 ಸಾವಿರ ಟಿಕೆಟ್‌ನಂತೆ ನೀಡುವುದಾಗಿ ಟಿಟಿಡಿ ನಿರ್ಧಾರ ಮಾಡಿತ್ತು.
ಕಾಲ್ತುಳಿತ ಉಂಟಾಗಲು ಕಾರಣವೇನು?: ಫ್ರೀ ದರ್ಶನ ಟಿಕೆಟ್‌ಗಾಗಿ ದೊಡ್ಡ ಪ್ರಮಾಣದಲ್ಲಿ ಭಕ್ತರು ಕೌಂಟರ್ ಎದುರು ಸೇರಿದ್ದರು. ಗುರುವಾರ ಮುಂಜಾನ 5 ಗಂಟೆಯ ಬದಲು ಮಧ್ಯರಾತ್ರಿ 12 ಗಂಟೆಯಿಂದಲೇ ಟಿಕೆಟ್ ವಿತರಣೆ ಆರಂಭವಾಗಲಿದೆ ಅನ್ನೋ ಮಾಹಿತಿ ಕೂಡ ಹರಿದಾಡಿತು. ಇದು ಕಾಲ್ತುಳಿತ ಉಂಟಾಗಲು ಕಾರಣವಾಗಿರಬಹುದು ಎನ್ನಲಾಗಿದೆ.
Post a Comment