ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುರಿತು ವಾಗ್ದಾಳಿ ನಡೆಸಿದರು.
ದಾವಣಗೆರೆ : ಯತ್ನಾಳ್ನಂತಹ ವಿಕೃತ ಮನಸ್ಸಿನ ವ್ಯಕ್ತಿಯನ್ನ ನಾನು ನೋಡಿಲ್ಲ. ರಮೇಶ್ ಜಾರಕಿಹೊಳಿ ಒಳ್ಳೆ ಮನುಷ್ಯ, ಆ ವ್ಯಕ್ತಿಯನ್ನೂ ಹಾಳು ಮಾಡುತ್ತಿದ್ದಿಯ. ಕಾಂಗ್ರೆಸ್ನವರು ಬಿಜೆಪಿಗೆ ಬಂದ್ರು, ಅವರಿಗೂ ಪ್ರಚೋದನೆ ಮಾಡುತ್ತಿದ್ದಿಯ. ಇವತ್ತಿನಿಂದಲ್ಲ, ಕಳೆದ ಏಳೆಂಟು ವರ್ಷಗಳಿಂದ ಯತ್ನಾಳ್ಗೆ ಇದೇ ಕೆಲಸ ಎಂದು ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಸೋಮವಾರ ನಗರದಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ಹೀಗೆಯೇ ಮಾತನಾಡಿ ಭಾರತೀಯ ಜನತಾ ಪಾರ್ಟಿಯಿಂದ ಉಚ್ಛಾಟನೆ ಆಗಿದ್ದರು. ಆದ್ರೆ ಯಡಿಯೂರಪ್ಪನವರು ಹೋಗಲಿ ಅಂತ ಕರೆತಂದ್ರು. ಈ ಮನುಷ್ಯ ಕಾಲಿಡಿದು ಒಳಗೆ ಬಂದರು. ಯತ್ನಾಳ್ ಗೋಮುಖ ವ್ಯಾಘ್ರ ಅಂತ ಯಡಿಯೂರಪ್ಪನವರಿಗೆ ಗೊತ್ತಾಗಲಿಲ್ಲ. ಯಡಿಯೂರಪ್ಪ ಬೆಳ್ಳಗಿರುವುದೆಲ್ಲ ಹಾಲು ಅಂತ ನಂಬುತ್ತಾರೆ. ಅಷ್ಟು ಪರಿಶುದ್ಧವಾದ ರಾಜಕಾರಣಿ ಯಡಿಯೂರಪ್ಪನವರು. ಅಂತವರಿಗೆ ದ್ರೋಹ ಮಾಡುತ್ತಿದ್ದಿಯ ಎಂದು ಕಿಡಿಕಾರಿದರು.
ಬಸನಗೌಡ ಯತ್ನಾಳ್, ರಮೇಶ್ ಜಾರಕಿಹೊಳಿಗೆ ಬಿಎಸ್ವೈ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಜಾರಕಿಹೊಳಿಗೆ ವಿಜಯೇಂದ್ರ ಧಮ್ಕಿ ಹಾಕಿಲ್ಲ, ಶಾಸಕ ರಮೇಶ್ ಜಾರಕಿಹೊಳಿ ಮಾತಿನಿಂದ ಬಿಎಸ್ವೈಗೆ ನೋವಾಗಿದ್ದನ್ನು ಅವರ ಅಭಿಮಾನಿಗಳು ಸಹಿಸಲ್ಲ ಎಂದಿದ್ದಾರೆ. ವಿಜಯೇಂದ್ರ ಜಾರಕಿಹೊಳಿಯನ್ನ ನೋಡಿಕೊಳ್ತಿನಿ ಅಂತಾ ಹೇಳಿಲ್ಲ ಎಂದು ರೇಣುಕಾಚಾರ್ಯ ಸಮರ್ಥಿಸಿಕೊಂಡರು.
''2ಎ ಮೀಸಲಾತಿ ಹೋರಾಟದ ವೇಳೆ ಪರಮಪೂಜ್ಯರಿಗೆ ಅಪಮಾನ ಮಾಡಿದ್ದಾರೆ. ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೇಳಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಸಮಯಕ್ಕೆ ತಕ್ಕಂತೆ ಏಕಪಾತ್ರಾಭಿನಯ ಮಾಡಿದ್ದಾರೆ. ಎಲ್ಲರೂ ಬಣ್ಣ ಹಚ್ಚಿ ನಾಟಕ ಮಾಡಿದ್ರೆ, ಈ ವ್ಯಕ್ತಿ ಬಣ್ಣ ಹಚ್ಚದೆ ನಾಟಕ ಮಾಡ್ತಾರೆ. ಹಾಗಾಗಿ ನಿನಗೆ ಸವಾಲು ಹಾಕುತ್ತೇನೆ. ನನ್ನ ಬಗ್ಗೆಯೂ ಹಗುರವಾಗಿ ಮಾತನಾಡುತ್ತೀಯ? ನೀನು ಯಾವ ಲೆಕ್ಕ ನನಗೆ ?. ಯಾವುದೋ ಕಾರಣಕ್ಕೆ ನೀನು ಗೆದ್ದಿರಬಹುದು, ನಾವು ಸೋತಿರಬಹುದು. ನಮ್ಮ ವರ್ಚಸ್ಸು ಕುಗ್ಗಿಲ್ಲ. ನಾವು ಸಮರ್ಥರಿದ್ದೇವೆ'' ಎಂದು ಟಾಂಗ್ ಕೊಟ್ಟರು.
''ವಿಜಯಪುರದಲ್ಲಿ ಪ್ರಭಾವಿ ಸಚಿವನ ಜೊತೆ ಅಡ್ಜಸ್ಟ್ ಮೆಂಟ್ ರಾಜಕೀಯ ಮಾಡಿ ಎಲ್ಲರನ್ನೂ ತುಳಿದಿದ್ದಿಯ. ಹಿಂದೂ ಮುಸ್ಲಿಂ ಅನ್ನೋ ವಿಷಯದಲ್ಲಿ ನೀನು ಗೆದ್ದಿದ್ದು, ಹಿಂದೂ ಹುಲಿ ಅಂತಾ ಹೇಳುವ ನೀನು ಜಮೀರ್ ರೂಂಗೆ ಹೋಗಿ ಆಲಿಂಗನ ಮಾಡಿದ್ದೆಯಲ್ಲ ಎಂದು ಕಿಡಿಕಾರಿದರು. ನಿನ್ನಿಂದ ಪಕ್ಷ ಗೆಲ್ಲಿಸಲು ಆಗುವುದಿಲ್ಲ. ಬಿವೈವಿ, ಬಿಎಸ್ವೈ ಹೋದಲ್ಲಿ ಜನ ಹುಚ್ಚೆದ್ದು ಕುಣಿತಾರೆ'' ಎಂದು ರೇಣುಕಾಚಾರ್ಯ ಹೇಳಿದರು.
Post a Comment