ಚೆನ್ನೈ : ಇತ್ತೀಚಿಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಭಾರತದ ಮಾಜಿ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್, ಇದೀಗ ಹಿಂದಿ ರಾಷ್ಟ್ರ ಭಾಷೆ ಕುರಿತಾದ ಚರ್ಚೆಯಲ್ಲಿ ಧುಮುಕಿದ್ದಾರೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದಿರುವ ಅಶ್ವಿನ್, ಅದು ಕೇವಲ ಇತರ ಅಧಿಕೃತ ಭಾಷೆಗಳ ಪೈಕಿ ಒಂದಷ್ಟೇ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅಶ್ವಿನ್, ಹಿಂದಿ ರಾಷ್ಟ್ರಭಾಷೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಆದರೆ, ಅದು ರಾಷ್ಟ್ರಭಾಷೆಯಾಗಿರದೇ ಅಸ್ತಿತ್ವದಲ್ಲಿರುವ ಇತರ ಅಧಿಕೃತ ಭಾಷೆಗಳ ಪೈಕಿ ಒಂದಷ್ಟೇ.." ಎಂದು ನುಡಿದರು.
ಭಾಷಣ ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ, "ನೀವು ಯಾವ ಭಾಷೆಯಲ್ಲಿ ನನ್ನ ಮಾತು ಕೇಳಲು ಬಯಸುತ್ತೀರಿ..?" ಎಂದು ರವಿಚಂದ್ರನ್ ಅಶ್ವಿನ್ ಪ್ರಶ್ನಿಸಿದರು. "ಇಂಗ್ಲಿಷ್ ಬೇಕೆನ್ನುವರು ಧ್ವನಿ ಮಾಡಿ, ತಮಿಳು ಬೇಕೆನ್ನುವರು ಧ್ವನಿ ಮಾಡಿ.." ಎಂಬ ಆರ್. ಅಶ್ವಿನ್ ಅವರ ಪ್ರಶ್ನೆಗೆ ಕೆಲವು ವಿದ್ಯಾರ್ಥಿಗಳಿಂದ ಇಂಗ್ಲಿಷ್ ಮತ್ತು ಇನ್ನೂ ಕೆಲವು ವಿದ್ಯಾರ್ಥಿಗಳು ತಮಿಳು ಭಾಷೆಗೆ ಬೇಡಿಕೆ ಇಟ್ಟರು. ಮುಂದುವರೆದು, "ನಾನು ಹಿಂದಿಯಲ್ಲಿ ಮಾತನಾಡುವುದನ್ನು ಯಾರು ಇಷ್ಟಪಡುತ್ತೀರಿ.." ಎಂದು ಅಶ್ವಿನ್ ಕೇಳಿದಾಗ, ವಿದ್ಯಾರ್ಥಿ ಸಮೂಹದಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೂಡಲೇ ತಮಿಳಿನಲ್ಲಿ ಮಾತು ಆರಂಭಿಸಿದ ಅಶ್ವಿನ್, "ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ, ಬದಲಿಗೆ ಒಂದು ಅಧಿಕೃತ ಭಾಷೆಯಷ್ಟೇ ಎಂಬುದನ್ನು ನಾನು ಹೇಳಬೇಕಿತ್ತು.." ಎಂದು ಹೇಳಿದರು.
Post a Comment