ಯುಜಿಸಿ ಕರಡು ನಿಯಮಗಳ ಕುರಿತು ಎನ್‌ಡಿಎಯಲ್ಲಿ ಭುಗಿಲೆದ್ದ ಅಸಮಾಧಾನ

 


ಹೊಸದಿಲ್ಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ)ದ ಕರಡು ನಿಯಮಾವಳಿಗಳು 2025 ಸೃಷ್ಟಿಸಿರುವ ವಿವಾದದ ನಡುವೆ ಬಿಜೆಪಿಯ ಪ್ರಮುಖ ಮಿತ್ರಪಕ್ಷ ಜೆಡಿಯು ಯುಜಿಸಿಯ ಪ್ರಸ್ತಾವಗಳ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಅವು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಚುನಾಯಿತ ಸರಕಾರದ ಪಾತ್ರವನ್ನು ನಿರ್ಬಂಧಿಸುತ್ತವೆ ಎಂದು ಪಕ್ಷದ ಒಂದು ವರ್ಗವು ಹೇಳಿದೆ ಎಂದು ವರದಿ ದೊರೆತಿದೆ.

ಕರಡು ನಿಯಮಾವಳಿಗಳು ರಾಜ್ಯ ವಿವಿಗಳಲ್ಲಿ ಕುಲಪತಿಗಳ ನೇಮಕಾತಿಗಳಲ್ಲಿ ಕುಲಾಧಿಪತಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದನ್ನು ಪ್ರಸ್ತಾವಿಸಿದ್ದು, ಹೆಚ್ಚಿನ ಕುಲಾಧಿಪತಿಗಳು ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರಾಗಿದ್ದಾರೆ.

ಕರಡು ನಿಯಮಾವಳಿಯನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಪಕ್ಷವು ಈ ವಿಷಯವನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದೊಂದಿಗೆ ಕೈಗೆತ್ತಿಕೊಳ್ಳಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುದಲ್ಲಿನ ಮೂಲಗಳು ತಿಳಿಸಿವೆ.


ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಜೆಡಿಯು ರಾಷ್ಟ್ರೀಯ ವಕ್ತಾರ ರಾಜೀವ ರಂಜನ ಪ್ರಸಾದ ಅವರು, 'ಪ್ರತಿಯೊಂದು ಪಕ್ಷವೂ ರಾಜಕೀಯ ಮಾರ್ಗಸೂಚಿಯನ್ನು ಹೊಂದಿರುತ್ತದೆ. ಉನ್ನತ ಶಿಕ್ಷಣವು ಅದರ ಪ್ರಮುಖ ಭಾಗವಾಗಿದೆ. ಕುಲಪತಿಗಳ ನೇಮಕದಲ್ಲಿ ಚುನಾಯಿತ ಸರಕಾರಗಳ ಪಾತ್ರವನ್ನು ಸೀಮಿತಗೊಳಿಸುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸರಕಾರದ ಪ್ರಯತ್ನಗಳಿಗೆ ಹೆಚ್ಚಿನ ನಿರುತ್ಸಾಹ ಉಂಟಾಗುತ್ತದೆ. ಕರಡು ಯುಜಿಸಿ ನಿಯಮಗಳನ್ನು ನಾವಿನ್ನೂ ಓದಿಲ್ಲ.ಆದರೆ ಕೆಲವು ತಿದ್ದುಪಡಿಗಳು ಅಗತ್ಯವಾಗಬಹುದು ಎಂದು ಮಾಧ್ಯಮ ವರದಿಗಳು ಸೂಚಿಸಿವೆ' ಎಂದು ಹೇಳಿದರು.

ಯುಜಿಸಿಯ ಪ್ರಸ್ತಾವಗಳ ಬಗ್ಗೆ ಎನ್‌ಡಿಎದ ಇನ್ನೊಂದು ಪ್ರಮುಖ ಪಾಲುದಾರ ಪಕ್ಷ ಟಿಡಿಪಿಯಲ್ಲಿಯೂ ಅಸಮಾಧಾನವಿರುವಂತಿದೆ. 'ನಾವು ಕರಡು ನಿಯಮಗಳನ್ನು ನೋಡಿದ್ದೇವೆ. ಆದರೆ ನಮ್ಮ ಉನ್ನತ ನಾಯಕತ್ವವು ವಿಶ್ವ ಆರ್ಥಿಕ ವೇದಿಕೆಯ ಸಭೆಗಾಗಿ ದಾವೋಸ್‌ನಲ್ಲಿರುವುದರಿಂದ ಈ ವಿಷಯದಲ್ಲಿ ಯಾವುದೇ ಆಂತರಿಕ ಚರ್ಚೆಗಳು ನಡೆದಿಲ್ಲ. ಆದಾಗ್ಯೂ ನಾವು ಯಾವುದೇ ಆಕ್ಷೇಪಗಳನ್ನು ಹೊಂದಿದ್ದರೆ ಅವುಗಳನ್ನು ಸಾರ್ವಜನಿಕವಾಗಿ ಎತ್ತುವುದಿಲ್ಲ.ಬದಲಿಗೆ ಆಂತರಿಕವಾಗಿ ಸಂಬಂಧಪಟ್ಟ ಜನರಿಗೆ ಅವುಗಳನ್ನು ತಿಳಿಸುತ್ತೇವೆ. ಈ ವಿಷಯವನ್ನು ರಾಜಕೀಯಗೊಳಿಸಲು ನಾವು ಬಯಸುವುದಿಲ್ಲ' ಎಂದು ಟಿಡಿಪಿಯ ರಾಷ್ಟ್ರೀಯ ವಕ್ತಾರ ದೀಪಕ ರೆಡ್ಡಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಎನ್‌ಡಿಎದ ಮತ್ತೊಂದು ಮಿತ್ರಪಕ್ಷ ಎಲ್‌ಜೆಪಿ(ರಾಮ ವಿಲಾಸ್) ಕೂಡ ವಿವಾದಕ್ಕೆ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ್ದು, ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಹೇಳಿದೆ.


ಕುಲಪತಿ ಹುದ್ದೆಗೆ ಸಂಬಂಧಿಸಿದಂತೆ ಇದು ರಾಜ್ಯಪಾಲರ ಪರವಾಗಿ ಸಾಂವಿಧಾನಿಕ ಆದೇಶವಾಗಿದೆ. ಈ ಕುರಿತು ಚರ್ಚಿಸುವುದು ಸಂಸತ್ತಿನ ವಿಶೇಷಾಧಿಕಾರವಾಗಿದೆ ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಎ.ಕೆ.ಬಾಜಪೈ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.


ಪ್ರತಿಪಕ್ಷಗಳ ಆಡಳಿತವಿರುವ ಹಲವಾರು ರಾಜ್ಯಗಳು ವಿವಿಗಳ ಕುಲಪತಿಗಳ ನೇಮಕಾತಿಗಳಲ್ಲಿ ಕುಲಾಧಿಪತಿಗಳಿಗೆ ವ್ಯಾಪಕ ಅಧಿಕಾರವನ್ನು ನೀಡಲು ಪ್ರಸ್ತಾವಿಸಿರುವ ಕರಡು ಯುಜಿಸಿ ನಿಯಮಾವಳಿಗಳನ್ನು ವಿರೋಧಿಸಿವೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget