ಸರ್ಕಾರದ ಸಂಧಾನ ವಿಫಲ: ಕೊರೆಯುವ ಚಳಿಯಲ್ಲೂ ಮುಂದುವರೆದ ಆಶಾ ಕಾರ್ಯಕರ್ತೆಯರ ಮುಷ್ಕರ

 ಬುಧವಾರ ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ದಿನೇಶ್ ಗುಂಡೂರಾವ್ ಅವರು, ಮಾಸಿಕ 8 ಸಾವಿರ ರೂ. ಬದಲಿಗೆ 9,500 ರೂಪಾಯಿ ನೀಡುವ ಭರವಸೆ ನೀಡಿದ್ದರು.



ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು, ಕೊರೆಯುವ ಚಳಿಯಲ್ಲೂ ಆಶಾ ಕಾರ್ಯಕರ್ತೆಯರು ತಮ್ಮ ಮುಷ್ಕರವನ್ನು ಮುಂದುವರೆಸಿದ್ದಾರೆ.


ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರದ ವಿರುದ್ದ ಆಶಾ ಕಾರ್ಯಕರ್ತೆಯರು ಫ್ರೀಡಂಪಾರ್ಕ್‌ನಲ್ಲಿ ( ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.


ಬುಧವಾರ ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ದಿನೇಶ್ ಗುಂಡೂರಾವ್ ಅವರು, ಮಾಸಿಕ 8 ಸಾವಿರ ರೂ. ಬದಲಿಗೆ 9,500 ರೂಪಾಯಿ ನೀಡುವ ಭರವಸೆ ನೀಡಿದ್ದರು.


ಮುಷ್ಕರ ಕೈ ಬಿಟ್ಟು ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಹೆಚ್ಚಿನ ಪ್ರೋತ್ಸಾಹಧನ ಕೇಂದ್ರ ಸರಕಾರದ ಅನುದಾನದ ಮೇಲೆ ಒದಗಿಸಲಾಗುತ್ತಿದೆ. ಆರ್.ಸಿ.ಎಚ್ ಪೊರ್ಟಲ್‌ನಲ್ಲಿ ಆಶಾ ಕಾರ್ಯಕರ್ತೆಯರ ಕಾರ್ಯ ಚಟುವಟಿಕೆಗಳ ಆಧಾರದ ಮೇಲೆ ಪ್ರೋತ್ಸಾಹಧನ ಲಭ್ಯವಾಗುತ್ತದೆ. ಪ್ರಸ್ತುತ ಗೌರವಧನ ಹಾಗೂ ಪ್ರೋತ್ಸಾಹಧನ ಸೇರಿ ಸರಾಸರಿ ಒಬ್ಬ ಆಶಾ ಕಾರ್ಯಕರ್ತೆಗೆ ಮಾಸಿಕ 9,500 ರೂ.ಪಾವತಿ ಮಾಡಲಾಗುತ್ತಿದೆ. ಇದನ್ನು ಮುಂಗಡವಾಗಿ ಆಶಾ ಕಾರ್ಯಕರ್ತೆಯರಿಗೆ ಒದಗಿಸಲು ಸರ್ಕಾರ ಸಿದ್ಧವಿದೆ. ಆದರೆ, ಗೌರವಧನದ ಹೊರತಾಗಿ ಆಶಾ ಕಾರ್ಯಕರ್ತೆಯರಿಗೆ ಲಭ್ಯವಾಗುತ್ತಿರುವ ಪ್ರೋತ್ಸಾಹಧನವನ್ನೂ ಮಾಸಿಕ ವೇತನದ ರೂಪದಲ್ಲಿ ನಿಗದಿಪಡಿಸಿ ನೀಡುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ ಎಂದು ಹೇಳಿದರು.

ಮುಂಬರುವ ರಾಜ್ಯ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ರಾಜ್ಯ ಸರಕಾರದಿಂದ ನೀಡುತ್ತಿರುವ ಗೌರವಧನ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸಕಾರಾತ್ಮಕ ಚಿಂತನೆ ಹೊಂದಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಈ ಬಗ್ಗೆ ನಿರ್ಧಾರ ಹೊರಬೀಳಲಿದೆ. ಹೀಗಾಗಿ ಆಶಾ ಕಾರ್ಯಕರ್ತೆಯರು ಮುಷ್ಕರ ಕೈ ಬಿಡಬೇಕು ಎಂದು ಮನವಿ ಮಾಡಿದರು.


ರಜೆಗಳನ್ನು ಕೇಳುವುದು ಆಶಾ ಕಾರ್ಯಕರ್ತೆಯರ ಹಕ್ಕು. ಈ ನಿಟ್ಟಿನಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಭರವಸೆ ನೀಡಿದರು.


ಆದರೆ, ಸಚಿವರ ಭರವಸೆಯನ್ನು ಆಶಾ ಕಾರ್ಯಕರ್ತೆಯರು ನಿರಾಕರಿಸಿದ್ದಾರೆ. ಕನಿಷ್ಠ 15 ಸಾವಿರ ರೂ. ಗೌರವಧನ ನೀಡುವಂತೆ ಪಟ್ಟು ಹಿಡಿದಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರೆಸುವುದಾಗಿ ತಿಳಿಸಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget