ಅಡಕೆ ಬೆಳೆ ರಕ್ಷಣೆಗೆ ಕೇಂದ್ರ ಬದ್ಧ, ರೋಗ ತಡೆಗೆ ಬಜೆಟ್​ನಲ್ಲಿ ಹಣ ಮೀಸಲು: ಶಿವರಾಜ್ ಸಿಂಗ್ ಚೌಹಾಣ್

 ಅಡಕೆಗೆ ಬರುತ್ತಿರುವ ರೋಗಗಳ ಕುರಿತ‌ ಪರಿಹಾರಕ್ಕೆ 67 ಕೋಟಿ ರೂ.ಗಳನ್ನು ಮುಂದಿನ ಬಜೆಟ್​ನಲ್ಲಿ ಘೋಷಣೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು.



ಶಿವಮೊಗ್ಗ: "ಅಡಕೆ ಬೆಳೆ ರಕ್ಷಣೆಗೆ ಕೇಂದ್ರ ಸರ್ಕಾರ ಸಿದ್ಧವಿದ್ದು, ಅಡಕೆ ಬೆಳೆಗೆ ಬರುವ ರೋಗ ತಡೆಗೆ ಮುಂದಿನ ಬಜೆಟ್​ನಲ್ಲಿ ಹಣ ಮೀಸಲಿಡಲಾಗುವುದು" ಎಂದು ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅಡಕೆ ಬೆಳೆಗಾರರಿಗೆ ಅಭಯ ನೀಡಿದ್ದಾರೆ.


ಶಿವಮೊಗ್ಗ ಜಿಲ್ಲೆ ಸಾಗರದ ಎಪಿಎಂಸಿ ಪ್ರಾಂಗಣದಲ್ಲಿ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ವತಿಯಿಂದ ನಡೆದ ಅಡಕೆ ಬೆಳೆಗಾರರ ಬೃಹತ್ ಸಮಾವೇಶವನ್ನು ಅಡಕೆ ಸಿಂಗಾರವನ್ನು ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮೊದಲು ಕನ್ನಡದಲ್ಲಿಯೇ 'ಎಲ್ಲರಿಗೂ ನಮಸ್ಕಾರ' ಎಂದು ಹೇಳಿ ಸಭಿಕರಿಂದ ಚಪ್ಪಾಳೆ ಪಡೆದರು. ದೆಹಲಿಗೆ ಆಗಮಿಸಿ ಅಡಕೆ ಸಮಸ್ಯೆ ಬಗ್ಗೆ ವಿನಂತಿಸಿಕೊಂಡು ಆಗಮಿಸಲು ಕೋರಿದರು. "ನೀವು ಕರಿದಿರಿ ನಾವು ಬಂದಿದ್ದೇವೆ. ನಾನು ಯಾವುದೇ ಪಕ್ಷದ ನಾಯಕನಾಗಿ ಬಂದಿಲ್ಲ, ನಾನು ಕೇಂದ್ರದ ಸಚಿವನಾಗಿ ಬಂದಿದ್ದೇನೆ. ರೈತರ ಸಮಸ್ಯೆ ಪರಿಹರಿಸಲು ಸರ್ಕಾರಗಳು ಮುಂದಾಗಬೇಕು.‌ ಅದು ಸರ್ಕಾರಗಳ ಕರ್ತವ್ಯ" ಎಂದು ತಿಳಿಸಿದರು.

ನಾವು ಅಡಕೆ ಬೆಳೆಯಲ್ಲ ಆದರೆ, ಮನೆಯಲ್ಲಿ ಬಳಕೆ ಮಾಡುತ್ತೇವೆ: "ನಮ್ಮಲ್ಲಿ ಅಡಕೆ ಬೆಳೆಯುವುದಿಲ್ಲ‌. ಆದರೆ ನಮ್ಮ ಪ್ರತಿ ಮನೆಯಲ್ಲಿಯು ಅಡಕೆ ಬಳಸುತ್ತೇವೆ. ನಮ್ಮಲ್ಲಿ ಗಣೇಶ, ಗೌರಿಯನ್ನು ಅಡಕೆಯಲ್ಲಿಯೇ ಪೂಜಿಸುತ್ತೇವೆ‌. ಸರ್ಕಾರ ಯಾವುದೇ ಇರಲಿ, ಅದು ರೈತ ಹಾಗೂ ಜನರ ಪರವಾಗಿ ಕೆಲಸ ಮಾಡಬೇಕಿದೆ. ಪ್ರತಿಯೊಬ್ಬರಿಗೂ ಸಹ ಮನೆ ಇರಬೇಕೆಂದು ಮೋದಿ ಮನೆ ನೀಡಲು ಸೂಚಿಸಿದ್ದಾರೆ‌. ವಿಕಸಿತ ಭಾರತಕ್ಕೆ ವಿಕಸಿತ ಕರ್ನಾಟಕ ಮಾಡಬೇಕಿದೆ. ಜನರ ಜೀವನ ಸುಖವಾಗಿಸಲು ನಾವು ಸಿದ್ಧರಿದ್ದೇವೆ" ಎಂದರು."ತಯಾರಿಕಾ ದರ ಕಡಿಮೆ ಮಾಡಿ, ರೈತರ ಬೆಳೆಗೆ ಸರಿಯಾದ ದರ, ಬೆಳೆ ವಿಮೆ, ಸಾವಯವ ಕೃಷಿಗೆ ಆದ್ಯತೆ ನೀಡಲಾಗುವುದು. ಕರ್ನಾಟಕದ ಒಂದು ಬೆಳೆಗೆ ದೆಹಲಿಯಲ್ಲಿ ಬೇಡಿಕೆ ಇದ್ದರೆ ಅದನ್ನು ದೆಹಲಿಗೆ ಕಳುಹಿಸಲು ತಗಲುವ ವೆಚ್ಚದಲ್ಲಿ ಅರ್ಧ ಕೇಂದ್ರ ಹಾಗೂ ಅರ್ಧ ರಾಜ್ಯ ಸರ್ಕಾರ ಭರಿಸುವ ಉದ್ದೇಶವಿದೆ" ಎಂದು ಹೇಳಿದರು.


"ಕರ್ನಾಟಕ ದೇಶದ ಅತಿದೊಡ್ಡ ಅಡಕೆ ಬೆಳೆಯ ರಾಜ್ಯವಾಗಿದೆ. ಅಡಕೆ ಬೆಳೆಗಾರರ ಹಿತರಕ್ಷಣೆಗಾಗಿ ವಿದೇಶದಿಂದ ಆಮದಾಗುವ ಅಡಕೆಗೆ ಶೇ.100 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಕಳಪೆ ಹಾಗೂ ಕಳ್ಳಮಾರ್ಗದಲ್ಲಿ ಅಡಕೆ ತರುವುದನ್ನು ಕಠಿಣವಾಗಿ ತಡೆಯಲಾಗುವುದು" ಎಂದರು.

"ಅಡಕೆ ಆರೋಗ್ಯಕರ ಎಂದು ಸಂಶೋಧನೆ ಮಾಡಲು ನಾವು ಸಿದ್ಧರಿದ್ದೇವೆ. ಅಡಕೆಗೆ ಬರುತ್ತಿರುವ ರೋಗಗಳ ಕುರಿತ‌ ಪರಿಹಾರಕ್ಕೆ 67 ಕೋಟಿ ರೂ.ಗಳನ್ನು ಮುಂದಿನ ಬಜೆಟ್​ನಲ್ಲಿ ಘೋಷಣೆ ಮಾಡಲಾಗುತ್ತದೆ. ಅಡಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು WHO ಹೇಳುತ್ತಿದೆ. ಆದರೆ ನಮ್ಮಲ್ಲಿ ಅನೇಕ ವರ್ಷಗಳಿಂದ ಅಡಕೆ ತಿನ್ನಲಾಗುತ್ತಿದೆ. ಅಡಕೆ ಹಾನಿಕಾರಕವಲ್ಲ. ಅಡಕೆಗೆ ಏನಾದರೂ ಮಿಕ್ಸ್ ಆದ್ರೆ ಮಾತ್ರ ಅದು ಹಾನಿಕಾರಕವಾಗಬಹುದು. ಈ ಕುರಿತು ಸಂಶೋಧನೆ ನಡೆಸಲಾಗುತ್ತಿದೆ. ಅದಷ್ಟು ಬೇಗ ವರದಿ ಬಂದು ಅಡಕೆ ಹಾನಿಕಾರಕ ಅಲ್ಲ ಎಂದು ಬರಲಿ" ಎಂದು ಹಾರೈಸಿದರು.


"ಅಡಕೆ ಬೆಳೆಗಾರರಿಗೆ ಇದರಿಂದ ಉತ್ತಮ ಬೆಲೆ ಸಿಗುವಂತಾಗಲಿ. ಅಡಕೆ ಬೆಳೆಯ ಕುರಿತು ಚರ್ಚೆಗೆ ನಾನು ಮುಕ್ತ ಮನಸ್ಸಿನಲ್ಲಿದ್ದೇನೆ" ಎಂದು ತಿಳಿಸಿದರು.2014ರಲ್ಲಿ ಮಾತು ಕೊಟ್ಟಂತೆ ಅಡಕೆ ಸಂಶೋಧನ ಕೇಂದ್ರ ಪ್ರಾರಂಭಿಸಿ: ಇದಕ್ಕೂ ಮುನ್ನ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, "ಕಾಗೋಡು ತಿಮ್ಮಪ್ಪನವರ ಭೂ ಹಕ್ಕು ಹೋರಾಟದಿಂದಲೇ‌ ಈ ಸಮಾವೇಶ ನಡೆಯುತ್ತಿದೆ.‌ 2014ರ ಲೋಕಸಭಾ ಚುನಾವಣೆಯಲ್ಲಿ ಅಡಕೆ ಸಂಶೋಧನ ಕೇಂದ್ರ ಪ್ರಾರಂಭಿಸುವ ಮಾತನ್ನು ನೀಡಲಾಗಿತ್ತು. ಆದರೆ ಅದನ್ನು ಇನ್ನೂ ಪ್ರಾರಂಭಿಸಿಲ್ಲ. ರಾಜ್ಯ ಸರ್ಕಾರದ ಕಡೆಯಿಂದ ಕೇಂದ್ರ ತೆರೆಯಲು ಬೇಕಾದ ಎಲ್ಲ ಸಹಕಾರವನ್ನು ನೀಡಲು ಸಿದ್ಧ. ಸಿಎಫ್​ಡಿಆರ್​ಐ ಕೇಂದ್ರದಿಂದ ಅಡಕೆ ಹಾನಿಕರ ಅಲ್ಲ ಎಂಬ ವರದಿಯನ್ನು ಕಾಗೋಡು ತಿಮ್ಮಪ್ಪನವರು ಆರೋಗ್ಯ ಸಚಿವರಾಗಿದ್ದಾಗ ನೀಡಲಾಗಿತ್ತು. ಅದನ್ನು ಕೇಂದ್ರ ಸರ್ಕಾರ ತರಿಸಿಕೊಂಡು ಪರಶೀಲಿಸಬೇಕು" ಎಂದರು.


ಅಡಕೆ ಬೆಳೆಗಾರರ ಹಿತಕ್ಕಾಗಿ ಪಕ್ಷಾತೀತವಾಗಿ ಹೋರಾಟ ಮಾಡೋಣ: "ಚುನಾವಣೆ ಬಂದಾಗ ರಾಜಕೀಯ ಮಾಡೋಣ, ನಂತರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಅದೇ ರೀತಿ ಅಡಕೆ ಬೆಳೆಗಾರರ ಹಿತರಕ್ಷಣೆಗಾಗಿ ಪಕ್ಷಾತೀತವಾಗಿ ಹೋರಾಟ ಮಾಡೋಣ. ಕೇಂದ್ರ ಸಚಿವರಿಗೆ ಪಕ್ಷಾತೀತವಾಗಿ ನಮ್ಮ ಮನವಿಯನ್ನು ಮುಟ್ಟಿಸುವ ಪ್ರಯತ್ನ ಮಾಡಲಾಗಿದೆ."

"2004 ರಲ್ಲಿ WHO ಅಡಕೆ ಆರೋಗ್ಯಕ್ಕೆ ಹಾನಿಕಾರಕ ಅಂತ ವರದಿ ನೀಡಿದೆ. ಈ ಕುರಿತು ಒಂದು ಕಮಿಟಿ ರಚನೆ ಮಾಡಬೇಕಿದೆ. 2022 ರಲ್ಲಿ ಎಲೆಚುಕ್ಕಿ ರೋಗ ಪ್ರಾರಂಭವಾಯಿತು. ಮನುಷ್ಯನಿಗೆ ಬರುವ ಕ್ಯಾನ್ಸರ್​ನಂತೆ ಅಡಕೆ ಬೆಳೆಗೂ ಸಹ ಎಲೆಚುಕ್ಕೆ ರೋಗದ ಬರುತ್ತಿದೆ. ಅಡಕೆಯ ತೇವಾಂಶ ಶೇ 7 ರಿಂದ ಶೇ 12ಕ್ಕೆ ಏರಿಕೆ ಮಾಡಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಮೆಕ್ಕೆಜೋಳದ ಕೇಂದ್ರಕ್ಕೆ ಅನುಮತಿ ನೀಡಲಾಗಿದೆ. ಅಲ್ಲದೆ ಅನಾನಸ್ ಹಾಗೂ ಶುಂಠಿ ಬೆಳೆಗೆ ರಫ್ತುಗೆ ಅನುಕೂಲ ಮಾಡಿಕೊಡಬೇಕು. ಮಲೆನಾಡಿನ ಸಮಸ್ಯೆಯನ್ನು ಬಗೆಹರಿಸೋಣ. ಅಡಕೆಗೆ ತಂಬಾಕು ಹಾಕಿ ತಿನ್ನುವುದರಿಂದ ಕ್ಯಾನ್ಸರ್​ಗೆ ಕಾರಣವಾಗಿದೆ. ಈ ವಿಚಾರ ಕೇಂದ್ರದ ಸಚಿವರಿಗೆ ತಿಳಿಸಲಾಗಿದೆ" ಎಂದು ಹೇಳಿದರು.

ಸ್ವ-ಪಕ್ಷದ ತೋಟಗಾರಿಕ ಮಂತ್ರಿಗೆ ಟಾಂಗ್ ನೀಡಿದ ಗೋಪಾಲಕೃಷ್ಣ ಬೇಳೂರು: ಸಾಗರದಲ್ಲಿ ನಡೆದ ಅಡಕೆ ಬೆಳೆಗಾರರ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು, "ನಮ್ಮ ರಾಜ್ಯ ತೋಟಗಾರಿಕಾ ಸಚಿವರಿಗೆ ಕೊಳೆರೋಗದ ಕುರಿತು ಮಾತನಾಡಿದ್ರೆ, ಸರಿ ಪರಿಹಾರ ಕೊಡೋಣ ಅಂದ್ರು. ಅದು ಯಾವಾಗ ಕೊಡುತ್ತಾರೋ ನೋಡಬೇಕಿದೆ ಎಂದು ತಮ್ಮ ಸರ್ಕಾರದ ಮಂತ್ರಿಯ ಕಾಲನ್ನೇ ಎಳೆದರು. ಯಾವುದೇ ರೈತರ ಪರವಾಗಿ ಸರ್ಕಾರ ಇರಬೇಕು" ಎಂದು ಆಗ್ರಹಿಸಿದರು.


"ಇನ್ನೂ ರೈತರ ಪರವಾಗಿ ಏನೇ ಬೇಕಾದರೂ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಲು ನಾನು ಹಾಗೂ ನಮ್ಮ ಸಚಿವ ಮಧು ಬಂಗಾರಪ್ಪ ಸಿದ್ಧ" ಎಂದು ತಿಳಿಸಿದರು. ಸಮಾವೇಶದಲ್ಲಿ ಸಾಗರ, ಹೊಸನಗರ ಹಾಗೂ ಸೊರಬದ ರೈತರು ಭಾಗವಹಿಸಿದ್ದರು.





Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget