ಬಿಜೆಪಿ ಸಭೆ: ಯತ್ನಾಳ ಬಣದ ವಿರುದ್ಧ ದೂರು ನೀಡಲು ಬಳಕೆ
ಬೆಂಗಳೂರು: ಬಿಜೆಪಿ ಸಂಘಟನೆ ಹಾಗೂ ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆ ಕುರಿತು ಮಾಹಿತಿ ಸಂಗ್ರಹಿಸಲು ಮಂಗಳವಾರ ಕರೆದಿದ್ದ ಸಭೆಯನ್ನು ಬಸನಗೌಡ ಪಾಟೀಲ ಯತ್ನಾಳ ಬಣದ ವಿರುದ್ದ ದೂರು ನೀಡಲು ಹೆಚ್ಚಿನ ಶಾಸಕರು ಬಳಸಿಕೊಂಡಿದ್ದಾರೆ.
ಪಕ್ಷದ ಸಂಘಟನಾ ಪರ್ವ ಹಾಗೂ ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆ ಕುರಿತು ಚರ್ಚಿಸಲು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ 45 ಸದಸ್ಯರು ಮಾತ್ರ ಭಾಗವಹಿಸಿದ್ದರು. 12 ಶಾಸಕರು ತಮ್ಮ ಅಭಿಪ್ರಾಯ ಮಂಡಿಸಿದರು. ಅವರಲ್ಲಿ ಹರಿಹರ ಶಾಸಕ ಬಿ.ಪಿ. ಹರೀಶ್ ಮಾತ್ರ ವಿಜಯೇಂದ್ರ ಹಾಗೂ ಅವರ ನಿಷ್ಠರ ವಿರುದ್ಧ ಹರಿಹಾಯ್ದಿದ್ದಾರೆ.
`ಯತ್ನಾಳ, ರಮೇಶ ಜಾರಕಿಹೊಳಿ ಮತ್ತು ಅವರ ತಂಡ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ವಿರುದ್ಧ ನಿರಂತರವಾಗಿ ಬಹಿರಂಗ ಹೇಳಿಕೆ ನೀಡುತ್ತಿದೆ. ಹೈಕಮಾಂಡ್ ಬಗ್ಗೆಯೂ ಅವರಿಗೆ ಗೌರವ ಇಲ್ಲವಾಗಿದೆ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಕಾಂಗ್ರೆಸ್ ನಾಯಕರು, ಶಾಸಕರು ಹಾಗೂ ರಾಜ್ಯ ಸರ್ಕಾರದ ಮುಖ್ಯಮಂತ್ರಿ, ಸಚಿವರು ಅವರ ಹೇಳಿಕೆಗಳನ್ನು ಬಳಸಿಕೊಂಡು ಟೀಕೆ ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳಿಗೆ ತಕ್ಷಣ ತಡೆ ಹಾಕಬೇಕು. ಬಹಿರಂಗ ಹೇಳಿಕೆ ನೀಡುವವರ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.
ಸಭೆಗೆ ಹಾಜರಾಗಿದ್ದ ಶಾಸಕರ ಪರವಾಗಿ ಸುದ್ದಿಗಾರರ ಜತೆ ಮಾತನಾಡಿದ ಬಸವರಾಜ ಮತ್ತಿಮಡು, 'ಬಣ ರಾಜಕೀಯದಿಂದ ಪಕ್ಷಕ್ಕೆ ಆಗುತ್ತಿರುವ ಹಾನಿ ತಡೆಯಲು ಎಲ್ಲರೂ ಕೋರಿದ್ದೇವೆ. ಇಲ್ಲಿ ವಿಜಯೇಂದ್ರ ಪರ ಅಥವಾ ವಿರುದ್ಧ ಎಂದು ಇಲ್ಲ. ಅವರು ಪಕ್ಷದ ಅಧ್ಯಕ್ಷರು. ಅವರನ್ನು ವರಿಷ್ಠರೇ ನೇಮಕ ಮಾಡಿದ್ದಾರೆ. ಅವರಿಗೆ ಗೌರವ ಕೊಡಬೇಕು. ಅವರ ವಿರುದ್ಧ ಟೀಕೆ ಮಾಡುವುದು, ಪಕ್ಷದ ವರಿಷ್ಠರ ನಿರ್ಧಾರವನ್ನು ಟೀಕೆ ಮಾಡಿದಂತೆ. ನಾಳೆ ಯತ್ನಾಳ ಬಣದ ಯಾರಾದರೂ ಒಬ್ಬರು ಅಧ್ಯಕ್ಷರಾದಾಗ ಈ ಬಣ ಅದೇ ರೀತಿ ವರ್ತಿಸುತ್ತಾ ನಡೆದರೆ ಪಕ್ಷದ ಗತಿ ಏನು? ಹಾಗಾಗಿ, ತಕ್ಷಣ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ರಾಜ್ಯ ಉಸ್ತುವಾರಿಗಳ ಗಮನಕ್ಕೆ ತಂದಿದ್ದೇವೆ' ಎಂದು ಮಾಹಿತಿ ನಿಡಿದರು.
ಬಿ.ಪಿ. ಹರೀಶ್ ಮಾತನಾಡಿ, 'ಯತ್ನಾಳ ಬಣದ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸುವ ಮೊದಲು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಪರೋಕ್ಷವಾಗಿ ಕೈಜೋಡಿಸಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಭಿನ್ನಮತ ಶಮನವಾಗದು. ಈ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೇನೆ' ಎಂದರು.
ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಬಿ.ವೈ. ವಿಜಯೇಂದ್ರ, 'ಸಂಘಟನಾ ಪರ್ವ'ದ ಕರ್ನಾಟಕದ ವೀಕ್ಷಕ ಪೊನ್ ರಾಧಾಕೃಷ್ಣನ್ ಭಾಗವಹಿಸಿದ್ದರು.
ಭಾಗವಹಿಸಿದ್ದು ಇಬ್ಬರೇ ಸಂಸದರು
ಸಂಸದರಾದ ಕೆ. ಸುಧಾಕರ್, ಬ್ರಿಜೇಶ್ ಚೌಟ ಮಾತ್ರ ಬಿಜೆಪಿ ಸಭೆಯಲ್ಲಿ ಭಾಗವಹಿಸಿದ್ದರು. ಇತರೆ 15 ಸಂಸದರು ಗೈರು ಹಾಜರಾಗಿದ್ದರು.
ವಿಜಯೇಂದ್ರ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ ತಂಡ ಹಾಗೂ ತಟಸ್ಥ ಬಣದ ವಿ. ಸುನಿಲ್‌ಕುಮಾರ್, ಸಿ.ಸಿ. ಪಾಟೀಲ, ಸುರೇಶ್ ಕುಮಾರ್, ಅಭಯ್ ಪಾಟೀಲ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮೊದಲಾದವರು ಭಾಗವಹಿಸಿರಲಿಲ್ಲ.
ಮಾಹಿತಿದಾರ ಹರೀಶ್
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಪಕ್ಷ ಹಾಗೂ ವಿಜಯೇಂದ್ರ ಅವರ ಪರ ಮಾತನಾಡಿದರೆ, ಬಿ.ಪಿ. ಹರೀಶ್ ಮಾತ್ರ ಅವರ ವಿರುದ್ಧ ಅಸಮಾಧಾನ ಹೊರಹಾಕಿದರು. ಸಭೆ ಮುಗಿದ ನಂತರ ಹರೀಶ್ ಹಾಗೂ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಅವರು ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಲು ವರಿಷ್ಠರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
'ಇಲ್ಲಿ ನಡೆದ ಸಭೆಯ ಮಾಹಿತಿ ನೀಡಲು ಹರೀಶ್ ಅವರನ್ನು ಯತ್ನಾಳ ಬಣ ಮಾಹಿತಿ ಸಂಗ್ರಹಕಾರರಾಗಿ ಕಳುಹಿಸಿದೆ. ಹಾಗಾಗಿ, ಅವರ ಬಣದ ಪರವಾಗಿ ಅವರೊಬ್ಬರೇ ಬಂದಿದ್ದಾರೆ' ಎಂದು ವಿಜಯೇಂದ್ರ ಬಣದ ಶಾಸಕರು ದೂರಿದರು.
ಪ್ರತ್ಯೇಕ ಭೇಟಿ ಮಾಡಿದ ಕಟ್ಟಾ ಬಣ
ಬಿಜೆಪಿ ಸಭೆಗೂ ಮೊದಲು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ಸಭೆ ನಡೆಸಿದ ಎಂ.ಪಿ. ರೇಣುಕಾಚಾರ್ಯ ಮತ್ತು ಅವರ ತಂಡ, ಸಂಜೆ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿತು. ರಾಧಾಮೋಹನ್ ದಾಸ್ ಅಗರವಾಲ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಯತ್ನಾಳ ಮತ್ತು ಅವರ ತಂಡದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿಜಯೇಂದ್ರ ಅವರನ್ನೇ ಮುಂದಿನ ಮೂರು ವರ್ಷ ಮುಂದುವರಿಸಬೇಕು. ದೆಹಲಿ ವರಿಷ್ಠರ ಭೇಟಿಗೆ ದಿನ ನಿಗದಿ ಮಾಡಿಕೊಡಬೇಕು ಎಂದು ಬೇಡಿಕೆ ಸಲ್ಲಿಸಿತು.
Post a Comment