ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಪ್ತಿಯಾದ ಒಡವೆ ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲು ಹೈಕೋರ್ಟ್ ಅನುಮತಿ ಆಕ್ಷೇಪಿಸಿದ್ದ ಜಯಲಲಿತಾ ವಾರಸುದಾರೆ ಜೆ.ದೀಪಾ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ನ್ಯಾ.ವಿ.ಶ್ರೀಶಾನಂದ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಸೋಮವಾರ ಆದೇಶ ಹೊರಡಿಸಿದೆ. ಕಳೆದ ವರ್ಷ ಮಾರ್ಚ್ 6, 7ರಂದು ಒಡವೆ ಹಸ್ತಾಂತರಿಸಬೇಕಿತ್ತು. ಆದರೆ ವಿಶೇಷ ಕೋರ್ಟ್ ಆದೇಶದಿಂದ ತಮ್ಮ ಹಕ್ಕಿಗೆ ಧಕ್ಕೆ ಎಂದು ಜಯಲಲಿತಾ ವಾರಸುದಾರೆ ಜೆ.ದೀಪಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜೆ.ದೀಪಾ ಅರ್ಜಿಗೆ ಎಸ್‌ಪಿಪಿ ಕಿರಣ್ ಜವಳಿ ಆಕ್ಷೇಪಣೆ ಸಲ್ಲಿಸಿದ್ದರು. ತಮಿಳುನಾಡು ಸರ್ಕಾರದ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದಿಸಿದ್ದರು. ವಿಚಾರಣೆ ನಡೆಸಿ ಜೆ.ದೀಪಾ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಒಡವೆ ಸ್ವೀಕರಿಸಲು ತಮಿಳುನಾಡಿನಿಂದ ಇಬ್ಬರು ಅಧಿಕಾರಿಗಳ ನೇಮಕ ಮಾಡಲಾಗಿತ್ತು. ತಮಿಳುನಾಡು ಗೃಹ ಪ್ರಧಾನ ಕಾರ್ಯದರ್ಶಿ ಮತ್ತು ಐಜಿಪಿ ವಿಜಿಲೆನ್ಸ್ ಹಾಜರಿರಬೇಕು. ಒಡವೆ ತೆಗೆದುಕೊಂಡು ಹೋಗಲು 6 ಟ್ರಂಕ್ಗಳನ್ನು ತರುವಂತೆ ಕೋರ್ಟ್ ಸೂಚನೆ ನೀಡಿತ್ತು. ವಿಡಿಯೋಗ್ರಾಫರ್, ಫೋಟೋಗ್ರಾಫರ್, ಎರಡೂ ದಿನಗಳು ಸಿಟಿ ಸಿವಿಲ್ ಕೋರ್ಟ್ನಲ್ಲಿ ಭದ್ರತೆ ಒದಗಿಸುವಂತೆ ವಿಶೇಷ ನ್ಯಾಯಾಧೀಶ ಮೋಹನ್ರಿಂದ ಸೂಚನೆ ನೀಡಲಾಗಿತ್ತು. ಜಯಲಲಿತಾ ವಿರುದ್ಧ 1991ರಿಂದ 96 ನಡುವೆ ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪ ಕೇಳಿಬಂದಿತ್ತು. ಚೆನ್ನೈನಲ್ಲಿ ಐಷಾರಾಮಿ ಬಂಗಲೆಗಳನ್ನು ಹೊಂದಿದ್ದರು, ಹೈದರಾಬಾದ್ ಬಳಿ ಫಾರ್ಮ್ ಹೌಸ್, ತಮಿಳುನಾಡಿನ ನೀಲಗಿರಿ ಪ್ರದೇಶದಲ್ಲಿ ಭಾರಿ ಚಹಾ ತೋಟ, ಬೆಲೆಬಾಳುವ ಆಭರಣ, ಕಾರ್ಖಾನೆಗಳು, ಬ್ಯಾಂಕ್ ಖಾತೆಗಳಲ್ಲಿ ಸಂಪತ್ತು ಕ್ರೋಢೀಕರಣ, ಐಷಾರಾಮಿ ಕಾರುಗಳನ್ನು ಹೊಂದಿದ್ದರು ಎನ್ನಲಾಗಿತ್ತು.
Post a Comment