ಸಂಬಂಧಪಟ್ಟ ಇಲಾಖೆಗಳಿಗೆ ಮೀಸಲಾತಿ ಪಟ್ಟಿಗಳನ್ನು ಕೊಡಲು ತಿಳಿಸಲಾಗಿದ್ದು, ಶೀಘ್ರವೇ ಜಿ.ಪಂ., ತಾ.ಪಂ. ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ತಿಳಿಸಿದರು.
ಬೆಳಗಾವಿ: ಬಹುತೇಕ ಏಪ್ರೀಲ್ - ಮೇ ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು. ಈ ಬಾರಿ ಬ್ಯಾಲೇಟ್ ಪೇಪರ್ಗಳನ್ನು ಬಳಸಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ಅವರು ಮಹತ್ವದ ಮಾಹಿತಿ ನೀಡಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜಿಲ್ಲಾ ಪುನರ್ ವಿಂಗಡಣಾ ಆಯೋಗದ ವರದಿ ದೊರೆಯುವುದು ಹಾಗೂ ಇನ್ನಿತರ ಕಾರಣಗಳಿಂದಾಗಿ ಚುನಾವಣೆಗೆ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಹಾಗಾಗಿ, ಶೀಘ್ರವೇ ಚುನಾವಣೆ ನಡೆಸಲಾಗುವುದು. ಸಂಬಂಧಪಟ್ಟ ಇಲಾಖೆಗಳಿಗೆ ಮೀಸಲಾತಿ ಪಟ್ಟಿಗಳನ್ನು ಕೊಡಲು ತಿಳಿಸಲಾಗಿದೆ. ಅವು ಸಿಕ್ಕ ಕೂಡಲೇ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಲಿದ್ದೇವೆ ಎಂದರು.
ಇವಿಎಂ ಯಂತ್ರದ ಮೇಲೆ ಕೇವಲ ರಾಜಕೀಯ ಪಕ್ಷಗಳು ಅಷ್ಟೇ ಅಲ್ಲ ಜನಸಾಮಾನ್ಯರು ಕೂಡ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಸುಪ್ರೀಂಕೋರ್ಟ್ನಲ್ಲೂ ಕೂಡ ಈ ಬಗ್ಗೆ ಸತ್ವ ಪರೀಕ್ಷೆ ಆಗಿದೆ. ಹಾಗಾಗಿ, ಇವಿಎಂ ಯಂತ್ರಗಳನ್ನು ಹ್ಯಾಕ್ ಮಾಡುವ ಬಗ್ಗೆ ಪ್ರಾತ್ಯಕ್ಷಿಕವಾಗಿ ಪರೀಕ್ಷೆ ಆಗಬೇಕು. ಜನರಲ್ಲಿರುವ ಸಂಶಯ ನಿವಾರಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಮನವೊಲಿಸಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬ್ಯಾಲೇಟ್ ಪೇಪರಗಳನ್ನೇ ಬಳಸಲಾಗುವುದು ಎಂದು ಸಂಗ್ರೇಶಿ ಸ್ಪಷ್ಟಪಡಿಸಿದರು.
ಮುಂಜಾಗ್ರತವಾಗಿ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಸಾಧ್ಯವಾದರೆ ಎಲ್ಲ ತಹಶೀಲ್ದಾರರನ್ನು ಭೇಟಿಯಾಗಿ ಚುನಾವಣೆ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ಬೆಳಗಾವಿ ಜಿಲ್ಲೆಯಲ್ಲಿ 91 ಜಿ.ಪಂ. ಸದಸ್ಯ ಸ್ಥಾನಗಳಿದ್ದು, 304 ತಾ.ಪಂ. ಸದಸ್ಯ ಸ್ಥಾನಗಳಿವೆ. ಕಳೆದ ಬಾರಿ 325 ಸ್ಥಾನಗಳಿದ್ದವು. ಅದರಲ್ಲಿ ಹೊಸದಾಗಿ 7 ಪಟ್ಟಣ ಪಂಚಾಯಿತಿಗಳು ರಚನೆ ಆಗಿವೆ. ಅವುಗಳಿಗೂ ಮೀಸಲಾತಿ ಪಟ್ಟಿ ಬಂದ ತಕ್ಷಣ ಚುನಾವಣೆ ನಡೆಸಲಿದ್ದೇವೆ ಎಂದರು.
ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ಪಟ್ಟಿಯಲ್ಲಿ ಯಾರಿಗೂ ಅನ್ಯಾಯ ಆಗದಂತೆ ರಚನೆ ಮಾಡಿ ಚುನಾವಣೆ ಮಾಡಲಾಗುವುದು. ಇನ್ನು ನಾಮಪತ್ರ ಹಿಂಪಡೆಯುವ ದಿನಾಂಕದವರೆಗೆ 18 ವರ್ಷ ತುಂಬಿದ ಹೊಸ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲು ಸಮಯಾವಕಾಶ ನೀಡಲಾಗುವುದು ಎಂದು ತಿಳಿಸಿದರು.
ಭ್ರಷ್ಟಾಚಾರ ಮತ್ತು ಆಮೀಷ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಎಲ್ಲರೂ ಸಹಕರಿಸಬೇಕು. ಆ ನಿಟ್ಟಿನಲ್ಲಿ ಆಯೋಗವೂ ಸಹ ಕಟ್ಟುನಿಟ್ಟಿನ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ. ರಾಜ್ಯ ಚುನಾವಣಾ ಆಯೋಗ ಸ್ವತಂತ್ರವಾಗಿದ್ದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳಂತೆ ಚುನಾವಣೆ ನಡೆಸುತ್ತೇವೆ ಎಂದು ಜಿ.ಎಸ್. ಸಂಗ್ರೇಶಿ ವಿಶ್ವಾಸ ವ್ಯಕ್ತಪಡಿಸಿದರು.
Post a Comment