ರಾಜ್ಯದಲ್ಲಿ ಡಿನ್ನರ್ ಸಭೆ ಸಂಚಲನ ಮೂಡಿಸಿದ ಬೆನ್ನಲ್ಲೇ ಗೃಹ ಸಚಿವ ಜಿ ಪರಮೇಶ್ವರ್ ಅವರು ನಾಳೆ ಕರೆದಿದ್ದ ಎಸ್ಸಿ ಎಸ್ಟಿ ನಾಯಕರು ಸಭೆಯನ್ನು ರದ್ದುಗೊಳಿಸಲಾಗಿದೆ.
ಬೆಂಗಳೂರು: ಸಚಿವ ಜಿ.ಪರಮೇಶ್ವರ್ ನಾಳೆ ನಡೆಸಲು ಉದ್ದೇಶಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಚಿವರು, ಶಾಸಕರು, ಸಂಸದರು ಹಾಗೂ ಮುಖಂಡರ ಸಭೆ ರದ್ದಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಸೂಚನೆ ಮೇರೆಗೆ ಪರಮೇಶ್ವರ್ ಅವರು ನಾಳೆ ನಡೆಸಲು ಉದ್ದೇಶಿಸಲಾಗಿದ್ದ ಡಿನ್ನರ್ ಸಭೆಯನ್ನು ರದ್ದುಗೊಳಿಸಲಾಗಿದೆ. ಈ ಸಂಬಂಧ ಗೃಹ ಸಚಿವ ಜಿ.ಪರಮೇಶ್ವರ್ ಪ್ರಕಟಣೆ ಹೊರಡಿಸಿದ್ದಾರೆ.
ಬೆಂಗಳೂರಿನ ಹೋಲ್ ರಾಡಿಸನ್ ಬ್ಲೂನಲ್ಲಿ ಆಯೋಜಿಸಲಾಗಿದ್ದು ರಾಜ್ಯ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಪ್ರತಿನಿಧಿಗಳು ಮತ್ತು ಮುಖಂಡರ ಸಭೆಯನ್ನು ರಾಜ್ಯದ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಅವರ ಸೂಚನೆಯ ಮೇರೆಗೆ ಮುಂದೂಡಲಾಗಿದೆ. ಸದರಿ ಸಭೆಯ ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಡಿನ್ನರ್ ಸಭೆ ಬಳಿಕ ಗೃಹ ಸಚಿವ ಜಿ.ಪರಮೇಶ್ವರ್ ಮತ್ತೊಂದು ಡಿನ್ನರ್ ಸಭೆ ನಡೆಸಲು ಉದ್ದೇಶಿಸಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಡಿನ್ನರ್ ಸಭೆ ಮಾಡುವ ಮೂಲಕ ತಪ್ಪು ಸಂದೇಶ ರವಾನೆಯಾಗುವ ಬಗ್ಗೆ ಕೂಗು ಕೇಳಿ ಬಂದಿತ್ತು. ಇತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಡಿನ್ನರ್ ಸಭೆ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದೀಗ ಎಐಸಿಸಿ ಮಧ್ಯ ಪ್ರವೇಶಿಸಿ ಸಚಿವ ಪರಮೇಶ್ವರ್ ನೇತೃತ್ವದ ಡಿನ್ನರ್ ಸಭೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.
ಇಂದು ಬೆಳಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ, ಪಕ್ಷದ ವ್ಯಾಪ್ತಿಯಲ್ಲಿಯೇ ಅನುಮತಿ ಪಡೆದು ಸಭೆ ನಡೆಸ್ತೇವೆ. ನಾಳೆ ಸಂಜೆ ಏಳು ಗಂಟೆಗೆ ಸಭೆ ಕರೆದಿದ್ದೇವೆ ಎಸ್ಸಿ ಎಸ್ಟಿ ಶಾಸಕರು, ಸಚಿವರು ಬಿಟ್ಟು ಬೇರೆಯವರಿಗೆ ಆಹ್ವಾನ ಇಲ್ಲ. ಬರಬಾರದು ಅಂತ ಇಲ್ಲ. ಹಿಂದೆ ಚಿತ್ರದುರ್ಗದಲ್ಲಿ ಎಸ್ಸಿ ಎಸ್ಟಿ ಸಮಾವೇಶ ಆಯ್ತು. ಆ ಸಮಾವೇಶದಲ್ಲಿ ಕೆಲವು ನಿರ್ಣಯ ತಗೊಂಡಿದ್ವಿ, ಅದರ ಬಗ್ಗೆಯೂ ನಾಳೆ ಚರ್ಚೆ ಮಾಡ್ತೇವೆ ಎಂದಿದ್ದರು.
ಮುಂದೆ ನಾವು ಎಸ್‌ಸಿ, ಎಸ್ಟಿ ಸಮಾವೇಶ ಮಾಡಬೇಕು ಅಂದು ಕೊಂಡಿದ್ದೇವೆ. ಅದಕ್ಕಾಗಿ ಎಲ್ಲಾ ಎಸ್ಸಿ-ಎಸ್ಟಿ ಸಮುದಾಯದ ಸಚಿವರು, ಶಾಸಕರನ್ನ ಕರೆದಿದ್ದೇವೆ. ನಾಳೆ ನಾನು ಡಿನ್ನರ್ ಮಾತ್ರ ಕೊಡ್ತಿದ್ದೇನೆ, ಡಿನ್ನರ್ ಪಾರ್ಟಿ ಅಲ್ಲ. ಹಿಂದೆ ಚಿತ್ರದುರ್ಗದಲ್ಲಿ ಸಮಾವೇಶ ಮಾಡಿದ್ದೆವು. ಅದು ಯಶಸ್ವಿ ಆಗಿತ್ತು, ಆಮೇಲೆ ನಮ್ಮ ಸರ್ಕಾರ ಬಂತು. ನಂತರ ನಾವು ಒಂದೆಡೆ ಸೇರಲು ಆಗಿರಲಿಲ್ಲ. ಆದ್ದರಿಂದ ನಾಳೆ ಸೇರುತ್ತಿದ್ದೇವೆ. ಮುಂದೆ ಸಮಾವೇಶ ಮಾಡುವ ಬಗ್ಗೆ ಚರ್ಚೆ ಮಾಡಲಿದ್ದೇವೆ, ಸ್ಥಳ ಎಲ್ಲಿ ಅಂತ ನಾಳೆ ಚರ್ಚೆ ಮಾಡ್ತೇವೆ ಎಂದು ತಿಳಿಸಿದ್ದರು.
ಆದರೆ ರಾಜ್ಯದ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಅವರ ಸೂಚನೆ ಮೇರೆಗೆ ಸಭೆಯನ್ನು ಮುಂದೂಡಲಾಗಿದೆ ಎಂದು ಪರಮೇಶ್ವರ್ ಸಂಜೆ ಪ್ರಕಟಣೆ ಹೊರಡಿಸಿದ್ದಾರೆ.
Post a Comment