ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ದಕ್ಷಿಣ ಚಿತ್ರರಂಗದ ಖ್ಯಾತ ತಾರೆ ಚಿರಂಜೀವಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.
ನವದೆಹಲಿ: ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಕಳೆಗಟ್ಟಿದೆ. ವಿವಿಧ ರಾಜ್ಯಗಳಲ್ಲಿ ಇದನ್ನು ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಪೊಂಗಲ್ ಹಬ್ಬವನ್ನು ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಅದರಂತೆ ಈ ಬಾರಿಯೂ ಸೆಲೆಬ್ರಿಟಿಗಳು ಪೊಂಗಲ್ ಅನ್ನು ಬಹಳ ಆಡಂಬರದಿಂದ ಆಚರಿಸಿದ್ದಾರೆ.
ಸೆಲೆಬ್ರಿಟಿಗಳ ಪೈಕಿ ದಕ್ಷಿಣ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಅವರ ಪೊಂಗಲ್ ಆಚರಣೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಲೆಟ್ ಆಗಿದೆ. ಏಕೆಂದರೆ, ಈ ಬಾರಿ ಚಿರಂಜೀವಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಬ್ಬ ಆಚರಿಸಿದ್ದಾರೆ. ಫೋಟೋ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಸೌತ್ ಸಿನಿಮಾ ಇಂಡಸ್ಟ್ರಿಯ ಮೆಗಾಸ್ಟಾರ್ ಚಿರಂಜೀವಿ ಅವರು ದೆಹಲಿಯಲ್ಲಿರುವ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರ ನಿವಾಸದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಪೊಂಗಲ್ ಆಚರಿಸಿದ್ದಾರೆ. ಈ ಹಬ್ಬದ ಆಚರಣೆಯಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಕೂಡಾ ಉಪಸ್ಥಿತರಿದ್ದರು.
ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ಕಳೆದ ದಿನ ನಾನು ಅತ್ಯಂತ ಸ್ಮರಣೀಯ ಸಂಕ್ರಾಂತಿ ಮತ್ತು ಪೊಂಗಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಈ ಹಬ್ಬವು ಒಗ್ಗಟ್ಟಿನ ಬಂಧಗಳನ್ನು ಬಲಪಡಿಸಲಿ, ಸಮೃದ್ಧಿಯನ್ನು ತರಲಿ ಜೊತೆಗೆ ನಮ್ಮ ಸಾಂಸ್ಕೃತಿಕ ಸಂಪ್ರದಾಯಗಳನ್ನು ಖುಷಿ ಮತ್ತು ಕೃತಜ್ಞತೆಯಿಂದ ಆಚರಿಸಲು ನಮಗೆ ಸ್ಫೂರ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ, ನನ್ನ ಸಚಿವ ಸಹೋದ್ಯೋಗಿ ಜಿ.ಕಿಶನ್ ರೆಡ್ಡಿ ಗಾರು ನಿವಾಸದಲ್ಲಿ ನಡೆದ ಸಂಕ್ರಾಂತಿ ಮತ್ತು ಪೊಂಗಲ್ ಆಚರಣೆಗಳಲ್ಲಿ ಭಾಗವಹಿಸಿದ್ದೆ. ಅತ್ಯುತ್ತಮ ಸಾಂಸ್ಕೃತಿಕ ಸಮಾರಂಭಕ್ಕೆ ಸಾಕ್ಷಿಯಾದೆ. ಭಾರತದಾದ್ಯಂತ ಜನರು ಸಂಕ್ರಾಂತಿ ಮತ್ತು ಪೊಂಗಲ್ ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ. ಇದು ನಮ್ಮ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿರುವ ಕೃತಜ್ಞತೆ, ಸಮೃದ್ಧಿಯ ಆಚರಣೆ ಆಗಿದೆ. ಸಂಕ್ರಾಂತಿ ಮತ್ತು ಪೊಂಗಲ್‌ಗೆ ನನ್ನ ಶುಭಾಶಯಗಳು. ಎಲ್ಲರಿಗೂ ಸಂತೋಷ, ಉತ್ತಮ ಆರೋಗ್ಯ ಮತ್ತು ಮುಂದೆ ಸಮೃದ್ಧ ಸುಗ್ಗಿಯ ಕಾಲ ಬರಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ಸಿನಿಮಾ ಬಗ್ಗೆ ಗಮನಿಸೋದಾದ್ರೆ, ಬಹುಬೇಡಿಕೆ ನಟ ಚಿರಂಜೀವಿ ಶೀಘ್ರದಲ್ಲೇ ನಿರ್ದೇಶಕ ಶ್ರೀಕಾಂತ್ ಒಡೆಲಾ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು, ಅವರು 2023ರಲ್ಲಿ ವಾಲ್ಟೈರ್ ವೀರಯ್ಯ ಮತ್ತು ಭೋಲಾ ಶಂಕರ್ ಚಿತ್ರಗಳಲ್ಲಿ ಕಾಣಿಸಿಕೊಂಡರು. ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಅವರ ಮುಂಬರುವ ಚಿತ್ರಗಳಲ್ಲಿ ವಿಶ್ವಂಭರ ಕೂಡಾ ಒಂದು.
Post a Comment