ಅಹಿಂಸಾ ತತ್ವವನ್ನು ಉಳಿಸಲು ಕೆಲವೊಮ್ಮೆ ಹಿಂಸೆ ಅನಿವಾರ್ಯ: ಆರೆಸ್ಸೆಸ್ ನಾಯಕ ಭಯ್ಯಾಜಿ ಜೋಶಿ

 


ಅಹಮದಾಬಾದ್‌: ಅಹಿಂಸಾ ತತ್ವವನ್ನು ಉಳಿಸಲು ಕೆಲವೊಮ್ಮೆ ಹಿಂಸೆ ಅನಿವಾರ್ಯ ಎಂದು ಗುರುವಾರ ಹೇಳಿರುವ ಆರೆಸ್ಸೆಸ್‌ ನಾಯಕ ಭಯ್ಯಾಜಿ ಜೋಶಿ, ಭಾರತವು ಎಲ್ಲರನ್ನೂ ಶಾಂತಿಯ ಪಥದಲ್ಲಿ ಕೊಂಡೊಯ್ಯಬೇಕಿದೆ ಎಂದೂ ಒತ್ತಿ ಹೇಳಿದ್ದಾರೆ.

ಇಲ್ಲಿನ ಗುಜರಾತ್ ವಿಶ್ವವಿದ್ಯಾಲಯ ಮೈದಾನದಲ್ಲಿ ಆಯೋಜಿಸಲಾಗಿದ್ದ 'ಹಿಂದೂ ಆಧ್ಯಾತ್ಮಿಕ ಸೇವಾ ಮೇಳ' ಎಂದೂ ಕರೆಯಲಾಗುವ 'ಹಿಂದೂ ಆಧ್ಯಾತ್ಮಿಕತೆ ಹಾಗೂ ಸೇವೋತ್ಸವ'ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಹಿಂದೂಗಳು ಯಾವತ್ತಿಗೂ ತಮ್ಮ ರಕ್ಷಣೆಗೆ ಬದ್ಧವಾಗಿದ್ದಾರೆ. ನಮ್ಮ ಧರ್ಮವನ್ನು ರಕ್ಷಿಸಲು ಇತರರು ಅಧರ್ಮವೆಂದು ಹಣೆಪಟ್ಟಿ ಹಚ್ಚುವುದನ್ನೂ ಮಾಡಬೇಕಾಗುತ್ತದೆ ಹಾಗೂ ನಮ್ಮ ಪೂರ್ವಜರು ಇಂತಹ ಕೆಲಸಗಳನ್ನು ಮಾಡಿದ್ದಾರೆ" ಎಂದು ಪ್ರತಿಪಾದಿಸಿದ್ದಾರೆ.ಮಹಾಭಾರತ ಯುದ್ಧವನ್ನು ಉಲ್ಲೇಖಿಸಿದ ಅವರು, ಅಧರ್ಮವನ್ನು ನಿರ್ಮೂಲನೆ ಮಾಡಲು ಪಾಂಡವರು ಯುದ್ಧದ ನಿಯಮಗಳನ್ನು ಬದಿಗಿರಿಸಿದರು ಎಂದೂ ಹೇಳಿದ್ದಾರೆ.


"ಹಿಂದೂ ಧರ್ಮವು ಅಹಿಂಸೆಯ ಸಾಧನ (ಅದು ಅದರಲ್ಲಿ ಅಂತರ್ಗತವಾಗಿದೆ) ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ, ಕೆಲವೊಮ್ಮೆ ಅಹಿಂಸೆಯ ತತ್ವವನ್ನು ಉಳಿಸಲು ನಾವು ಹಿಂಸಾಚಾರಕ್ಕಿಳಿಯಬೇಕಾಗುತ್ತದೆ. ಇಲ್ಲವಾದರೆ, ಅಹಿಂಸಾ ತತ್ವವು ಎಂದಿಗೂ ಸುರಕ್ಷಿತವಾಗುಳಿಯುವುದಿಲ್ಲ. ಈ ಸಂದೇಶವನ್ನು ನಮ್ಮ ಮಹಾ ಪೂರ್ವಜರು ನಮಗೆ ನೀಡಿದ್ದಾರೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಯ್ಯಾಜಿ ಜೋಶಿ ಪ್ರಕಾರ, ಯಾರು ಎಲ್ಲರನ್ನೂ ತನ್ನೊಂದಿಗೆ ಕೊಂಡೊಯ್ಯಬಲ್ಲನೊ, ಅಂತಹ ವ್ಯಕ್ತಿ ಮಾತ್ರ ಶಾಂತಿಯನ್ನು ಸ್ಥಾಪಿಸಲು ಸಾಧ್ಯವಿರುವುದರಿಂದ, ಭಾರತವು ಎಲ್ಲರನ್ನೂ ಶಾಂತಿಯ ಪಥದಲ್ಲಿ ಕೊಂಡೊಯ್ಯಬೇಕು ಎಂದು ಅವರು ಕರೆ ನೀಡಿದ್ದಾರೆ.

ಎಲ್ಲರಿಗೂ ಅವರವರ ಧರ್ಮಗಳನ್ನು ಅನುಸರಿಸಲು ಧರ್ಮವೊಂದು ಅವಕಾಶ ನೀಡದಿದ್ದರೆ, ಅಂತಲ್ಲಿ ಶಾಂತಿ ಉಳಿಯಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.


"ಎಲ್ಲ ದೇಶಗಳನ್ನೂ ತನ್ನೊಂದಿಗೆ ಕೊಂಡೊಯ್ಯುವ ಸಾಮರ್ಥ್ಯ ಭಾರತಕ್ಕಲ್ಲದೆ ಮತ್ಯಾವ ದೇಶಕ್ಕೂ ಇಲ್ಲ. 'ವಸುಧೈವ ಕುಟುಂಬಕಂ (ಇಡೀ ಪ್ರಪಂಚ ಒಂದು ಕುಟುಂಬ) ಎಂಬುದು ನಮ್ಮ ಆಧ್ಯಾತ್ಮಿಕ ತತ್ವವಾಗಿದೆ. ನಾವು ಇಡೀ ವಿಶ್ವವನ್ನು ಒಂದು ಕುಟುಂಬ ಎಂದು ಭಾವಿಸಿದರೆ, ಅಂತಲ್ಲಿ ಯಾವುದೇ ಬಿಕ್ಕಟ್ಟುಗಳು ಉದ್ಭವಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.

"ನಾವು ಭಾರತ ಬಲಿಷ್ಠವಾಗಬೇಕು ಎಂದು ಹೇಳುತ್ತೇವೆ ಎಂದರೆ, ಅದರ ನೈಜ ಅರ್ಥ ಬಲಿಷ್ಠ ಭಾರತ ಮತ್ತು ಬಲಿಷ್ಠ ಹಿಂದೂ ಸಮುದಾಯ ಮಾತ್ರ ಎಲ್ಲರಿಗೂ ಉಪಯೋಗಕರ ಎಂಬ ಭರವಸೆಯನ್ನು ವಿಶ್ವಕ್ಕೆ ನೀಡುವುದಾಗಿದೆ. ಯಾಕೆಂದರೆ, ನಾವು ದುರ್ಬಲರು ಹಾಗೂ ಕೆಳಕ್ಕೆ ದೂಡಲ್ಪಟ್ಟವರನ್ನು ರಕ್ಷಿಸುತ್ತೇವೆ. ಈ ಸಿದ್ಧಾಂತವು ವಿಶ್ವ ಹಿಂದೂವಿನೊಂದಿಗೆ ಹೊಂದಿಕೊಂಡಿದೆ" ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಕೇವಲ ಚರ್ಚ್ ಅಥವಾ ಮಿಷನರಿಗಳಂತಹ ಸಂಸ್ಥೆಗಳು ಮಾತ್ರ ಸ್ವಾರ್ಥರಹಿತ ಸೇವೆ ಸಲ್ಲಿಸುತ್ತಿವೆ ಎಂಬುದು ಸುಳ್ಳಾಗಿದೆ ಎಂದೂ ಅವರು ಹೇಳಿದ್ದಾರೆ.

"ನಿತ್ಯ ಒಂದು ಕೋಟಿ ಜನರಿಗೆ ದೇವಾಲಯಗಳು ಅಥವಾ ಗುರುದ್ವಾರಗಳಲ್ಲಿ ಆಹಾರ ನೀಡುತ್ತಿರುವ ಪುರಾತನ ಪರಂಪರೆ ನಮ್ಮದಾಗಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಕೇವಲ ಸಂಪ್ರದಾಯಗಳನ್ನು ಪಾಲಿಸಲು ಮಾತ್ರ ಸೀಮಿತವಾಗಿಲ್ಲ; ಬದಲಿಗೆ, ಅವು ಶಾಲೆಗಳು, ಗುರುಕುಲಗಳು ಹಾಗೂ ಆಸ್ಪತ್ರೆಗಳನ್ನೂ ನಿರ್ವಹಿಸುತ್ತಿವೆ" ಎಂದು ಅವರು ಹೇಳಿದ್ದಾರೆ.


ಯಾರಾದರೂ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಂಡರೆ ಅದರಲ್ಲಿ ಹಲವು ಆಯಾಮಗಳಿರುತ್ತವೆ. ಧರ್ಮ, ಆಧ್ಯಾತ್ಮಿಕತೆ, ಸೈದ್ಧಾಂತಿಕತೆ, ಸೇವೆ ಹಾಗೂ ಜೀವನ ಶೈಲಿಯನ್ನು ಒಳಗೊಂಡಿರುತ್ತದೆ. ಹಿಂದೂ ಧರ್ಮದ ಕೇಂದ್ರದಲ್ಲಿ ಮಾನವೀಯತೆ ಇದ್ದು ಅದು ನಮ್ಮ ಕರ್ತವ್ಯಗಳು, ಸಹಕಾರ, ಸತ್ಯ ಹಾಗೂ ನ್ಯಾಯವನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.


ಇದಕ್ಕೂ ಮುನ್ನ, ಈ ಕಾರ್ಯಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget